ಬೆಂಗಳೂರು: ಯತ್ನಾಳ್ ಅವರ ಹೇಳಿಕೆಗೆ ನಾನು ಏನೂ ರಿಯಾಕ್ಟ್ ಮಾಡೋದಕ್ಕೆ ಆಗಲ್ಲ, ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಅವರು ಸಿಕ್ಕಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಸಿಎಂ ಹುದ್ದೆ ಬೇಕಾದರೆ 2,500 ಕೋಟಿ ರೂಪಾಯಿ ನೀಡಿ ಎಂದು ದೆಹಲಿಯಿಂದ ಬಂದವರು ಬೇಡಿಕೆ ಇಟ್ಟಿದ್ದರು ಎನ್ನುವ ಯತ್ನಾಳ್ ಹೇಳಿಕೆ ಸಂಬಂಧ ಪತ್ರಕರ್ತರ ಪ್ರಶ್ನೆಗಳಿಗೆ ತುಮಕೂರಿನಲ್ಲಿ ಉತ್ತರಿಸಿದ ಗೃಹ ಸಚಿವರು, ರಾಜಕಾರಣದಲ್ಲಿ ಇಂತಹ ಹೇಳಿಕೆಗಳೆಲ್ಲವೂ ಸಹಜ. ಇಂತಹದ್ದೆಲ್ಲ ರಾಜಕಾರಣದಲ್ಲಿರುತ್ತದೆ ಎಂದು ಅವರು ಹೇಳಿರಬಹುದು. ನಿರ್ದಿಷ್ಟವಾಗಿ ಇದೇ ಪಕ್ಷ ಎಂದು ಅವರು ಹೇಳಿಲ್ಲ ಎಂದರು.
ಒಂದು ವೇಳೆ ಪಕ್ಷದ ವಿರುದ್ಧವೇ ಅವರು ಹೇಳಿಕೆ ನೀಡಿದ್ದಾದರೆ, ಪಕ್ಷಕ್ಕೆ ಮುಜುಗರ ಉಂಟಾಗುವ ವಿಚಾರವಾಗುತ್ತದೆ. ಪಕ್ಷದ, ಸಂಘಟನೆಯ ನೇತಾರರು ಅವರನ್ನು ಕರೆದು ಮಾತನಾಡಿಸುತ್ತಾರೆ ಎಂದು ಇದೇ ವೇಳೆ ಅರಗ ಜ್ಞಾನೇಂದ್ರ ಹೇಳಿದರು.
ಇನ್ನೂ ಪಿಎಸ್ ಐ ಅಕ್ರಮಕ್ಕೆ ಸಂಬಂಧಿಸಿದಂತೆ ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಸಚಿವರು, ಯಾವುದೋ ಒಂದು ಕೇಂದ್ರದಲ್ಲಿ ಅಕ್ರಮ ನಡೆದಿದ್ದರೆ, ಆ ಕೇಂದ್ರದಲ್ಲಿ ಮಾತ್ರವೇ ಮರು ಪರೀಕ್ಷೆ ನಡೆಸಬಹುದಿತ್ತು. ಆದರೆ, ಸಾಕಷ್ಟು ಕೇಂದ್ರಗಳಲ್ಲಿ ಬೇರೆ ಬೇರೆಯದ್ದೇ ರೀತಿಯಲ್ಲಿ ಅಕ್ರಮ ನಡೆದಿವೆ. ಹೀಗಾಗಿ ಮರು ಪರೀಕ್ಷೆ ಅನಿವಾರ್ಯವಾಗಿದೆ. ಈಗಾಗಲೇ ಪರೀಕ್ಷೆ ಬರೆದು ಆಯ್ಕೆಯಾಗಿದ್ದವರು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಮುಂದಿನ ಪಿಎಸ್ ಐ ಪರೀಕ್ಷೆಯಲ್ಲಿ ಅಭ್ಯರ್ಥಿ ವಯಸ್ಸಿಗೆ ಯಾವುದೇ ತೊಂದರೆಯಾಗಲ್ಲ. ಎಂದು ಸಲಹೆ ನೀಡಿದರು.
ಇನ್ನೂ ಕಿಮ್ಮನೆ ರತ್ನಾಕರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಿಮ್ಮನೆ ರತ್ನಾಕರ ಅವರಂತಹ ಸಿಲ್ಲಿ ರಾಜಕಾರಣಿಗೆ ನಾನು ಉತ್ತರಿಸುವುದಿಲ್ಲ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ನವರು ಏನು ಬೇಕಾದರೂ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಿಮ್ಮನೆ ರತ್ನಾಕರ ಅವಧಿಯಲ್ಲಿ ನಾಲ್ಕು ಬಾರಿ ಪಿಯುಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕಾಯ್ತು. ಏಳು ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಆಗಿನ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್‌ಗೆ ನಾಚಿಕೆ ಆಗಬೇಕು ಎಂದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB