ಸರಗೂರು: ರಾಜ್ಯದಲ್ಲಿ ಮೀಸಲಾತಿ ಕ್ಷೇತ್ರದಿಂದ ಆಯ್ಕೆಯಾದ ಶಾಸಕರು ಒಗ್ಗಟ್ಟಾಗಿ ಒಂದು ವೇದಿಕೆಯನ್ನು ಸೃಷ್ಟಿಸಿಕೊಂಡು ಪ.ಜಾತಿ ಮತ್ತು ಪ.ಪಂಗಡಗಳ ಜನರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸರಗೂರು ಸಂವಿಧಾನ ರಕ್ಷಣಾ ಸಮಿತಿ ಪತ್ರ ಚಳುವಳಿಯ ಮೂಲಕ ಎಚ್ಚರಿಕೆ ನೀಡಿದೆ.
ಪಟ್ಟಣದ ಅಂಚೆ ಕಛೇರಿ ಆವರಣದಲ್ಲಿ ಜಮಾಯಿಸಿದ ಸಂವಿಧಾನ ರಕ್ಷಣಾ ಸಮಿತಿಯ ಸದಸ್ಯರು, ಮೀಸಲಾತಿ ಕ್ಷೇತ್ರದಿಂದ ಆಯ್ಕೆಯಾದ ಶಾಸಕರುಗಳಿಗೆ ಪತ್ರಗಳನ್ನು ಬರೆಯುವ ಮೂಲಕ ಪ.ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಪಕ್ಷಭೇದವನ್ನು ಮರೆತು ಒಗ್ಗೂಡಿ ಕೆಲಸ ಮಾಡುವಂತೆ ಮನವಿ ಮಾಡಿದರು.
ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂವಿಧಾನ ರಕ್ಷಣಾ ಸಮಿತಿಯ ಖಜಾಂಚಿ ಗ್ರಾಮೀಣ ಮಹೇಶ್, ರಾಜ್ಯದಲ್ಲಿ ಸಂವಿಧಾನದ ಮೂಲ ಆಶಯ ಬುಡಮೇಲಾಗುತ್ತಿದ್ದು, ಪ.ಜಾತಿ, ಪ.ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿ ದೂರದ ಮಾತಾಗಿದೆ. ಈ ನಿಟ್ಟಿನಲ್ಲಿ ಸಂವಿಧಾನದ ಮೀಸಲಾತಿಯಿಂದ ಗೆದ್ದಂತಹ ರಾಜ್ಯದ ಶಾಸಕರು ಪಕ್ಷಕ್ಕಾಗಿ ದುಡಿಯುವುದನ್ನು ಬಿಟ್ಟು ಪಕ್ಷಭೇದ ಮರೆತು ಒಗ್ಗಟ್ಟಾಗಿ ಶೋಷಿತರ ಅಭಿವೃದ್ಧಿಯ ಕೆಲಸಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಮೇಲ್ವರ್ಗದವರಿಗೆ ಜಾತಿಗೊಂದು ಅಭಿವೃದ್ಧಿ ನಿಗಮಗಳಿವೆ. ಇವುಗಳಿಗೆ ಅನುದಾನಗಳನ್ನು ಬಿಡುಗಡೆ ಮಾಡಿ, ಸಮುದಾಯಗಳನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಆದರೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಮಾತ್ರ 101 ಜಾತಿಗಳು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿಯೂ 50 ಜಾತಿಗಳು, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿಯೂ 206 ಜಾತಿಗಳು ಸೇರಿದ್ದು, ಬರುವ ಅನುದಾನ ಒಂದೇ ಆಗಿದೆ ಇದರಿಂದ ಅಭಿವೃದ್ಧಿ ಮತ್ತು ಸಮಾನತೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇಂತಹ ಸಂಧರ್ಭದಲ್ಲಿ ಸಿದ್ಧಗಂಗಾ ಮಠದ ಶ್ರೀಗಳು ರಾಜ್ಯ ಸರ್ಕಾರಕ್ಕೆ ಜಾತಿಗೊಂದು ನಿಗಮ ಮಾಡಿದರೆ ಇದಕ್ಕೆ ಮಿತಿಯೇ ಇರುವುದಿಲ್ಲ ಎಂದು ಎಚ್ಚರಿಸುವ ಮೂಲಕ ದಲಿತರು ಬಡವರ ಪರ ಧ್ವನಿ ಎತ್ತಿದ್ದರು ಸಂವಿಧಾನ ಸಂರಕ್ಷಣಾ ಸಮಿತಿ ಖಜಾಂಚಿ ಗ್ರಾಮೀಣ ಮಹೇಶ್ ಎಂದರು.
ಸಂವಿಧಾನ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷ ಸಾಗರೆ ಶಂಕರ್ ಮಾತನಾಡಿದರು. ಸ್ಥಳದಲ್ಲಿ ಸಂವಿಧಾನ ರಕ್ಷಣಾ ಸಮಿತಿಯ ಅಧ್ಯಕ್ಷ ಶಿವಣ್ಣ, ಸಮಿತಿಯ ಖಜಾಂಚಿ ಗ್ರಾಮೀಣ ಮಹೇಶ್, ಸರಗೂರು ಇದಿಯಪ್ಪ, ಸರಗೂರು ಕೃಷ್ಣ, ಹೂವಿನಕೊಳ ಸಿದ್ಧರಾಜು, ಲಂಕೆ ಲಕ್ಷ್ಮಣ್, ಚನ್ನೀಪುರಮಲ್ಲೇಶ್, ಸಂವಿಧಾನ ಸಂರಕ್ಷಣಾ ಸಮಿತಿ ಉಪಾಧ್ಯಕ್ಷ ರು ಸಾಗರೆ ಶಂಕರ್, ನಾಗರಾಜು, ಕರ್ನಾಟಕ ಭೀಮಾ ಸೇನೆ ತಾಲ್ಲೂಕು ಅಧ್ಯಕ್ಷ ಮಹೇಂದ್ರ ಹೂವಿನಕೊಳ, ಲಂಕೆ ಶಿವರಾಜು, ಸೂರ್ಯ ಕುಮಾರ್ ಮಸಹಳ್ಳಿ, ಗುಣ ಮೂಳ್ಳೂರು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5