ಕೊರಟಗೆರೆ: ನಾವು ಕಾಡಿನಲ್ಲಿಯೇ ಸುಖವಾಗಿ ಜೀವನ ಮಾಡುತ್ತಿದ್ವಿ. ಈಗ ನಾಡಿಗೆ ನೋವು ಅನುಭವಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸರಕಾರ ನಮಗೆ ನೀಡಿದ ಭರವಸೆಯು ಈಗ ಹುಸಿಯಾಗಿದೆ. ಕಳೆದ 50 ವರ್ಷಗಳಿಂದ ನಮ್ಮ ಹಕ್ಕಿಪಿಕ್ಕಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗವು ಮರೀಚಿಕೆ ಆಗಿದೆ ಎಂದು ಹಕ್ಕಿಪಿಕ್ಕಿ ಬುಡಕಟ್ಟು ಯುವ ಸಂಘಟನೆಯ ರಾಜ್ಯಾಧ್ಯಕ್ಷ ಪುನೀತ್ ಕುಮಾರ್ ಸರ್ಕಾರದ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಕೊರಟಗೆರೆ ಪಟ್ಟಣದ ಕಂದಾಯ ಆವರಣದಲ್ಲಿ ರಾಜ್ಯ ಸರಕಾರ ಮತ್ತು ಕಂದಾಯ ಇಲಾಖೆಯ ವಿರುದ್ದ ಹಕ್ಕಿಪಿಕ್ಕಿ ಸಮುದಾಯದ ಜನತೆಯ ಜೊತೆಗೂಡಿ ಆಕ್ರೋಶ ವ್ಯಕ್ತಪಡಿಸಿ ಮನೆಗಳ ಹಕ್ಕುಪತ್ರ ನೀಡುವಂತೆ ಉಪತಹಶೀಲ್ದಾರ್ ನರಸಿಂಹಮೂರ್ತಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
50 ವರ್ಷದಿಂದ ಕೊರಟಗೆರೆ ಕ್ಷೇತ್ರದ ಗಡಿಭಾಗದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ 150 ಕುಟುಂಬಗಳು ವಾಸವಿದ್ದಾರೆ. ಇಲ್ಲಿನ 150 ಕುಟುಂಬಕ್ಕೆ ಮನೆಯ ಹಕ್ಕುಪತ್ರವೇ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ವಂಚಿತ ಕುಟುಂಬಕ್ಕೆ ಮನೆಯ ಹಕ್ಕುಪತ್ರವು ಮರೀಚಿಕೆ ಆಗಿದೆ. ರಾಜಕೀಯ ನಾಯಕರು ಚುನಾವಣೆಗೆ ಮಾತ್ರ ನಮ್ಮನ್ನು ಬಳಸಿದ್ದಾರೆ. ರಾಜ್ಯ ಸರಕಾರ ಮತ್ತು ಕಂದಾಯ ಇಲಾಖೆ ನಮ್ಮ ಸಮುದಾಯದ ಕುಟುಂಬಕ್ಕೆ ಮನೆಯ ಹಕ್ಕುಪತ್ರದ ಜೊತೆ ಶಿಕ್ಷಣದ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಿದೆ ಎಂದು ಆಗ್ರಹ ಮಾಡಿದರು.
ಹಕ್ಕಿಪಿಕ್ಕಿ ಕಾಲೋನಿಯ ಗ್ರಾಮಸ್ಥರಾದ ರೆಡ್ಡಿಯಪ್ಪ ಮಾತನಾಡಿ ನಾವು ಕೊರಟಗೆರೆ ಕ್ಷೇತ್ರದ ಗಡಿಭಾಗದ ಗ್ರಾಮದಲ್ಲಿ ವಾಸವಿದ್ದೇವೆ. ನಮ್ಮ ಕುಟುಂಬಗಳಿಗೆ ಶಿಕ್ಷಣ ಮತ್ತು ಉದ್ಯೋಗದ ಸಮಸ್ಯೆ ಇದೆ. ಅಧಿಕಾರಿವರ್ಗ ಗ್ರಾಮಕ್ಕೆ ಬರ್ತಾರೆ ಮನವಿ ಪಡೆದು ಹೋಗುತ್ತಾರೆ. ನಮ್ಮೂರನ್ನು ಕಂದಾಯ ಗ್ರಾಮವನ್ನಾಗಿ ಮಾಡಿ ನಮ್ಮ ಸಮುದಾಯದ ಜನರ ಜೀವನಕ್ಕೆ ಬೆಳಕು ನೀಡಬೇಕಿದೆ ಎಂದು ಒತ್ತಾಯ ಮಾಡಿದರು.
ಇನ್ನಾದರೂ ಸ್ಥಳೀಯ ಶಾಸಕರಾದ ಡಾ.ಜಿ. ಪರಮೇಶ್ವರ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿ ಈ ಮುಗ್ದ ಜನರ ಸಮಸ್ಯೆಗೆ ಮುಕ್ತಿ ನೀಡಬೇಕಿದೆ. ಅಭಿವೃದ್ದಿ ವಂಚಿತ ಗ್ರಾಮವಾದ ಹಕ್ಕಿಪಿಕ್ಕಿ ಕಾಲೋನಿಗೆ ರಾಜ್ಯ ಸರ್ಕಾರ ಮೂಲ ಭೂತ ಹಕ್ಕುಗಳನ್ನು ನೀಡಬೇಕಿದೆ ಎಂದು ಅವರು ಒತ್ತಾಯಿಸಿದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5