ತಿಪಟೂರು : ನಾಡಿನ ಏಳಿಗೆಗಾಗಿ ಶ್ರಮಿಸಿದ ಮಹಾನ್ ಚೇತನಗಳ ವಿಚಾರಧಾರೆಯನ್ನು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಿಸದೇ ಪಠ್ಯದ ಹೊರತಾಗಿಯೂ ಮನವರಿಕೆ ಮಾಡುವ ಕಾರ್ಯವನ್ನು ಮಾಡಬೇಕಿದೆ ಎಂದು ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಶನಿವಾರ ನಡೆದ ನಾಡಪ್ರಭು ಶ್ರೀ ಕೆಂಪೇಗೌಡರ 513ನೇ ಜಯಂತ್ಯೋತ್ಸವವನ್ನು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಸಂಘ ಜೀವಿಯಾಗಿದ್ದು, ಮಾನವನ ಆಚರಣೆಗಳ ಅನ್ವಯದಲ್ಲಿ ಜಾತಿ, ಮತ, ಧರ್ಮಗಳನ್ನು ರೂಢಿಸಿಕೊಂಡಿದ್ದಾನೆ. ಅಂತಹ ಕಂದಾಚಾರದಿಂದ ಹೊರ ಬಂದು ಎಲ್ಲಾ ಮಾನವರು ಒಂದೇ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ. ಮಹಾನ್ ಚೇತನಗಳಿಗೆ ಅಪಮಾನವಾಗದಂತೆ ಪಠ್ಯದಲ್ಲಿ ವಿಚಾರಗಳನ್ನು ಸೇರಿಸುವ ಅಗತ್ಯವಿದೆ. ಜೊತೆಗೆ ಪಠ್ಯದ ಹೊರತಾಗಿಯೂ ಮಕ್ಕಳಿಗೆ ವಿಚಾರಗಳನ್ನು ತಿಳಿಸುವಂತಹ ಕಾರ್ಯವನ್ನು ಮಾಡುವ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ. ಸಮಾಜದಲ್ಲಿ ಜಾತಿ, ಮತ, ಧರ್ಮಗಳ ಬೇಧವನ್ನು ಮರೆತು ಎಲ್ಲರೂ ಎಲ್ಲರಿಗೂ ಗೌರವ, ಪ್ರೀತಿ, ಸಹಕಾರ ನೀಡಿ ಒಂದಾಗಿ ಬಾಳುವಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ. ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರು ಜಗದ್ವಿಖ್ಯಾತವಾಗಿದ್ದು, ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇಂತಹ ಅವರ ವಿವೇಚನಾಯುತ ಯೋಜನೆಗೆ ವ್ಯಕ್ತಿತ್ವವೇ ಕಾರಣ. ಬೆಂಗಳೂರು ತಂತ್ರಜ್ಞಾನ, ಶಿಕ್ಷಣ ಸಂಸ್ಥೆಗಳು, ಉದ್ಯೋಗ ಕಂಪನಿಗಳು ತಲೆ ಎತ್ತಿದ್ದು ಎಷ್ಟೋ ನಿರುದ್ಯೋಗಿಗಳಿಗೆ ಕೆಲಸ ಕಲ್ಪಿಸಿವೆ. ಲಕ್ಷಾಂತರ ಮಂದಿ ಬೇಧ ಭಾವವಿಲ್ಲದೆ ವಾಸಿಸುತ್ತಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಕೆಂಪೇಗೌಡರು ಎಂದರು.
ನಿವೃತ್ತ ಪ್ರಾಂಶುಪಾಲ ಡಾ.ಸಿ.ನಂಜುಂಡಯ್ಯ ಮಾತನಾಡಿ, 480 ವರ್ಷಗಳ ಹಿಂದೆ ಬೆಂಗಳೂರನ್ನು ಕಟ್ಟಿದ ಶ್ರೀ ಕೆಂಪೇಗೌಡರು ಇಂದಿಗೂ ಪ್ರಸ್ತುತವಾಗಿದ್ದಾರೆ. ಅಂದು ಅವರು ನಿರ್ಮಾಣ ಮಾಡಿದ ಕನಸಿನ ನಗರ ಬೆಂಗಳೂರು ಇಂದು ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಕೆಂಪೇಗೌಡರು ಕೇವಲ ಒಂದು ಸಮಾಜದ ಆಸ್ತಿ ಅಲ್ಲ ಎಲ್ಲರ ಆಸ್ತಿಯಾಗಿದ್ದಾರೆ. ಕೆಂಪೇಗೌಡರ ಕುಟುಂಬಸ್ಥರ ತ್ಯಾಗ, ಬಲಿದಾನದ ಫಲವಾಗಿ ಇಂದು ಬೃಹತ್ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಪ್ರಪಂಚದಲ್ಲಿಯೇ ಖ್ಯಾತಿ ಹೊಂದಿದೆ. ಈಗಲೂ ಸಹ ಒಕ್ಕಲಿಗ ಸಮಾಜದ ಶೇ. 80ರಷ್ಟು ಕೃಷಿಯಲ್ಲಿ ತೊಡಗಿ ದೇಶದ ಜನರಿಗೆ ಅನ್ನ ನೀಡುತ್ತಿದ್ದಾರೆ. ಪಠ್ಯಪುಸ್ತಕದಲ್ಲಿನ ಗೊಂದಲಗಳಿಗೆ ಸರ್ಕಾರ ಮಠಾಧೀಶರನ್ನು ಮಧ್ಯೆ ತರುವ ಬದಲು ಉತ್ತಮ ಶಿಕ್ಷಣ ತಜ್ಞರ ತಂಡದಿಂದ ಪರಿಷ್ಕರಣೆಗೆ ಮುಂದಾಗಬೇಕಿದೆ. ಅಲ್ಲದೇ ಸಮಾಜದಲ್ಲಿ ವಿನಾ ಕಾರಣ ಬಿರುಕು ಮೂಡಿಸಲು ಪ್ರಯತ್ನಿಸುವವರ ಬಗ್ಗೆ, ವಿಚಾರಗಳ ಬಗ್ಗೆ ಸಮಾಜ ಜಾಗೃತವಾಗಿರಬೇಕಿದೆ ಎಂದರು.
ಚಲನಚಿತ್ರ ನಟಿ ಆರೋಹಿತ ಗೌಡ ಮಾತನಾಡಿ, ಈ ನಾಡಿಗಾಗಿ ಕೊಡುಗೆ ಸಲ್ಲಿಸಿದ ಎಲ್ಲಾ ಮಹನೀಯರನ್ನು ಸ್ಮರಿಸಲು ಜಯಂತಿಗಳನ್ನು ಆಚರಿಸಲಾಗುತ್ತಿದೆ. ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರು ಇಂದು ವಿರಾಟ್ ಸ್ವರೂಪದಲ್ಲಿ ಬೆಳೆದು ಅವರು ಕಂಡ ಕನಸುಗಳನ್ನು ನನಸಾಗಿಸಿ ವಿಶ್ವಮಾನ್ಯತೆ ಪಡೆದಿದ್ದು, ಇವರ ಕೊಡುಗೆ ಅನನ್ಯ. ಯಾವುದೇ ವ್ಯಕ್ತಿ ಸ್ವಾರ್ಥ ತೊರೆದು ಸಮಾಜಕ್ಕೆ ಕೊಡುಗೆ ನೀಡಿದ್ದಾನೋ ಆ ವ್ಯಕ್ತಿಯನ್ನ ಸ್ಮರಿಸುವುದು ನಮ್ಮ ಜವಾಬ್ದಾರಿ. ಮನುಷ್ಯನಾದ ಮೇಲೆ ಸಮಾಜ ನಮ್ಮನ್ನು ಗುರುತಿಸುವಂತಹ ಕೆಲಸ ಮಾಡಬೇಕು. ನಾವು ಮಾಡುವ ಒಳ್ಳೆಯ ಕೆಲಸ ಮತ್ತು ಕೆಟ್ಟ ಕೆಲಸಕ್ಕೆ ಇಲ್ಲೇ ಸ್ವರ್ಗ ಮತ್ತು ನರಕವನ್ನು ಕಾಣುತ್ತೇವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಾರ್ಥತೆ ಬಿಟ್ಟು ಸಮಾಜಮುಖಿ ಕೆಲಸ ಮಾಡಬೇಕೆಂದರು.
ಸಮಾರಂಭದಲ್ಲಿ ಹಾಸನದ ಉದ್ಯಮಿ ವಿಜಯ ಕುಮಾರ್, ದಸರೀಘಟ್ಟ ಗ್ರಾ.ಪಂ.ಅಧ್ಯಕ್ಷೆ ರುಕ್ಮೀಣಿ, ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಸದಸ್ಯೆ ಚಂದ್ರಮ್ಮ, ಮಾಜಿ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಟಿ.ಜಯಣ್ಣ, ಚೌಡೇಶ್ವರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಎಸ್.ಆರ್.ನಿರ್ಮಲಾ, ಎಚ್.ಬಿ.ಕುಮಾರಸ್ವಾಮಿ, ರಂಗಸ್ವಾಮಿ, ಡಿ.ಲಕ್ಷ್ಮೀದೇವಮ್ಮ, ಎಂ.ದೇವಪಾರ್ಥ, ಟಿ.ಎಸ್.ದರ್ಶನ್, ಅರುಣ್ ಕುಮಾರ್, ದೈಹಿಕ ಶಿಕ್ಷಕ ಮಂಜುನಾಥ್ ಇದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz