ತುಮಕೂರು: ದೇವೇಗೌಡರ ಬಗ್ಗೆ ನನಗೆ ಗೌರವ ಇದೆ. ನನ್ನ ಪದ ಬಳಕೆಯನ್ನ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಮ್ಮ ಹೇಳಿಕೆ ಸಂಬಂಧ ಸ್ಪಷ್ಟನೆ ನೀಡಿದ್ದಾರೆ.
ತುಮಕೂರಿನ ಗುಂಚಿ ಸರ್ಕಲ್ ನಲ್ಲಿ ಇರುವ ರಾಜಣ್ಣ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸರ್ಕಾರಿ ಉದ್ಯೋಗಿ ನಿವೃತ್ತಿ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದೆ. ದೊಡ್ಡೇರಿ ಹೋಬಳಿ ಅದು, ಅಲ್ಲಿಯ ಜನ ಕಳೆದ ಬಾರಿ ಹೆಚ್ಚು ಮತ ಕೊಟ್ಟಿದ್ದರು. ಈ ಹೋಬಳಿಯ ಜನ ನನಗೆ ಒಳ್ಳೆ ಬೆಂಬಲ ಕೊಟ್ಟಿದ್ದೀರಾ, 2023 ನನ್ನ ಅಂತಿಮ ಚುನಾವಣೆ ಮತ್ತೆ ನಿಲ್ಲೋದಿಲ್ಲ ಅಂದಿದ್ದೆ. ನಾನು ಅದನ್ನೇ ಪದೇ ಪದೇ ಹೇಳಿದಾಗ, ಸಭಿಕರೊಬ್ಬರು ಹೇಳಿದ್ರು… ಯಾಕೆ ಕೊನೆಯ ಚುನಾವಣೆ ಅಂತಿದ್ದೀರಿ, ದೇವೇಗೌಡರು ಈಗಲೂ ರಾಜಕಾರಣ ಮಾಡುತ್ತಿಲ್ವಾ ಅಂದರು. ಅದಕ್ಕೆ ಪೂರಕವಾಗಿ ನಾನು ಮಾತಾಡಿದ್ದೆ ಎಂದು ಅವರು ಸ್ಪಷ್ಟನೆ ನೀಡಿದರು.
ನನ್ನ ವಿರುದ್ದ ಪಿತೂರಿ ಮಾಡಿ ತಿರುಚಿ ಸುದ್ದಿ ಹರಡಿಸಲಾಗಿದೆ. ದೇವೇಗೌಡರ ಬಗ್ಗೆ ನನಗೆ ಗೌರವ ಇದೆ. ತುಮಕೂರಿನಲ್ಲಿ ಅವರ ಸೋಲಿನ ಬಗ್ಗೆ ನನಗೆ ಬೇಸರ ಇದೆ. ನನ್ನ ಪದ ಬಳಕೆಯನ್ನ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಈ ವಿಚಾರದಲ್ಲಿ ನಾನು ವಿಷಾದ ವ್ಯಕ್ತಪಡಿಸುತ್ತೆನೆ. ನಾನು ಖುದ್ದಾಗಿ ದೇವೇಗೌಡರಿಗೆ ಭೇಟಿಯಾಗಿ ನಿಜಸ್ಥಿತಿ ಹೇಳುತ್ತೇನೆ ಎಂದು ಅವರು ಹೇಳಿದರು.
ತಳ ಸಮುದಾಯದವರು ಯಾರೂ ಅಧಿಕಾರಕ್ಕೆ ಬರಬಾರದು ಎಂದು ಪಿತೂರಿ ಮಾಡುತಿದ್ದಾರೆ. ನನಗೆ ಕಳೆದ 50 ವರ್ಷದಿಂದ ಪ್ರಾಣ ಬೆದರಿಕೆ ಇದ್ದೆ ಇದೆ. ಅದರಿಂದ ನಾನು ವಿಚಲಿತ ಆಗಲ್ಲ. ನಾನು ಈ ವಿಚಾರದಲ್ಲಿ ತಪ್ಪು ಮಾಡಿಲ್ಲ. ದೇವೇಗೌಡರಿಗೆ ಈ ವಿಚಾರದಲ್ಲಿ ನೋವಾಗಿದ್ದರೆ ಅವರ ಬಳಿ ಕ್ಷಮೆ ಕೇಳುತ್ತೇನೆ ಎಂದು ಕೆ.ಎನ್.ರಾಜಣ್ಣ ಇದೇ ವೇಳೆ ಹೇಳಿದರು
ದೇವೇಗೌಡರು ನನಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದಿದ್ದಾರೆ. ಆ ನಿಯತ್ತು ನನಗೆ ಇದೆ. ಅವರು ಪ್ರತಿಭಟನೆ ಮಾಡಲೇಬೇಕು ಅಂದರೆ ಮಾಡಲಿ. ನಾನು ಕ್ಷಮೆ ಕೇಳಿದ ಮೇಲೂ ಅವರು ಪ್ರತಿಭಟನೆ ಮಾಡಿದರೆ ಮಾಡಲಿ. ಅವರ ಸಾವನ್ನು ನಾನು ಬಯಸುವವನಲ್ಲ. ದೇಶಕ್ಕೆ, ರಾಜ್ಯಕ್ಕೆ ಅವರ ಕೊಡುಗೆ ನಾವು ಮರೆಯುವಂತಿಲ್ಲ ಎಂದರು.
ತುಮಕೂರಿನಲ್ಲಿ ಜೆಡಿಎಸ್ ನಾಯಕರು ನನ್ನ ಟಾರ್ಗೆಟ್ ಮಾಡುತ್ತಾರೆ. ಯಾಕೆಂದರೆ ನನ್ನ ಕ್ಷೇತ್ರದಲ್ಲಿ ಜೆಡಿಎಸ್ ಗೆ ನಾನು ಎದುರಾಳಿ. ಸಿದ್ದರಾಮಯ್ಯರದ್ದೂ ಕೊನೆ ಚುನಾವಣೆ ಎಂದು ನಾನು ಅಂದುಕೊಂಡಿದ್ದೇನೆ ಎಂದು ಅವರು ಇದೇ ವೇಳೆ ತಿಳಿಸಿದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz