ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿಯ ಡಾ. ಚಂದ್ರಶೇಖರ್ ಗುರೂಜಿ ಹತ್ಯೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಭಕ್ತರ ಸೋಗಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುರೂಜಿಗೆ ಮನಬಂದಂತೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಹತ್ಯೆಗೆ ಸಂಬಂಧಿಸಿದ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಾಂತೇಶ್ ಶಿರೋಳ್ ಮತ್ತು ಮಂಜುನಾಥ್ ದುಮ್ಮವಾಡ ಬಂಧಿತ ಆರೋಪಿ ಆಗಿದ್ದಾರೆ. ಇಬ್ಬರೂ ಆರೋಪಿಗಳು ಧಾರವಾಡ ಜಿಲ್ಲೆಯ ತಲಘಟಗಿ ತಾಲೂಕಿನ ದುಮ್ಮವಾಡ ನಿವಾಸಿಗಳು ಎಂದು ತಿಳಿದು ಬಂದಿದೆ.
ನಗರದ ಉಣಿಕಲ್ ರಸ್ತೆಯಲ್ಲಿರುವ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಗುರೂಜಿ ಹತ್ಯೆ ಮಾಡಿದವರ ಬಂಧನಕ್ಕೆ ಎಸಿಪಿ ವಿನೋದ್ ಮುಕ್ತೇದಾರ್ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಲಾಗಿತ್ತು. ನಗರ ನಾಲ್ಕೂ ದಿಕ್ಕಿನಲ್ಲಿ ನಾಕಾಬಂಧಿ ಹಾಕಿದ ಪೊಲೀಸರು ಘಟನೆ ನಡೆದು ನಾಲ್ಕು ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ.
ಹುಬ್ಬಳ್ಳಿ ಉಣಕಲ್ ರಸ್ತೆಯಲ್ಲಿ ಇರುವ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಮಧ್ಯಾಹ್ನ 12:23ರ ಹೊತ್ತಿಗೆ ಸರಳವಾಸ್ತು ಖ್ಯಾತಿಯ ಡಾ. ಚಂದ್ರಶೇಖರ್ ಗುರೂಜಿಯ ಹತ್ಯೆ ನಡೆಯಿತು. ಭಕ್ತರ ಸೋಗಿನಲ್ಲಿ ಬಂದಿದ್ದ ಆರೋಪಿಗಳು ರಿಸೆಪ್ಷನ್ ಬಳಿ ಆಗಮಿಸುವಂತೆ ಗುರೂಜಿಗೆ ಕರೆ ಮಾಡಿದ್ದಾರೆ. 30 ನಿಮಿಷಗಳ ನಂತರ ಸ್ಥಳಕ್ಕೆ ಗುರೂಜಿ ಆಗಮಿಸಿದರು. ಒಬ್ಬರು ಅವರ ಕಾಲಿಗೆ ಬಿದ್ದು ನಮಿಸುತ್ತಿದ್ದ ಸಂದರ್ಭದಲ್ಲಿ ಮತ್ತೊಬ್ಬರು ಗುರೂಜಿ ಎದೆಗೆ ಚಾಕುವಿನಿಂದ ಇರಿದಿದ್ದಾರೆ. ನೋಡ ನೋಡುತ್ತಿದ್ದಂತೆ ಇಬ್ಬರೂ ಚಾಕುವಿನಿಂದ ಬರ್ಬರವಾಗಿ ಇರಿಯುವುದಕ್ಕೆ ಪ್ರಾರಂಭಿಸಿದ್ದಾರೆ. 40 ಸೆಕೆಂಡುಗಳಲ್ಲಿ 60 ಬಾರಿ ಗುರೂಜಿಯನ್ನು ಚುಚ್ಚಿ ಕೊಂದಿದ್ದಾರೆ.
ಆಸ್ತಿ, ಹಣಕಾಸಿನ ವ್ಯವಹಾರವೇ ಕೊಲೆಗೆ ಕಾರಣವಾಯ್ತೆ?
ಚಂದ್ರಶೇಖರ ಗುರೂಜಿ ಅವರ ಬರ್ಬರ ಹತ್ಯೆ ಪ್ರಕರಣದ ಹಿಂದೆ ಅವರು ಮಾಡಿರುವ ಆಸ್ತಿ ಹಾಗೂ ಹಣಕಾಸಿನ ವ್ಯವಹಾರವೇ ಕಾರಣವಾಯ್ತೆ ಎನ್ನುವ ಅನುಮಾನ ಹುಟ್ಟಿಕೊಂಡಿದೆ.
ಹತ್ಯೆ ಆರೋಪಿಗಳಾದ ಮಹಾಂತೇಶ ಮತ್ತು ಮಂಜುನಾಥ ಗುರೂಜಿ ಅವರ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಗಳು. ಅಲ್ಲಿಯೇ ಉದ್ಯೋಗ ಮಾಡುತ್ತಿದ್ದ ವನಜಾಕ್ಷಿ ಜೊತೆ ಮಹಾಂತೇಶ ಮದುವೆಯಾಗಿದ್ದ. ಗುರೂಜಿ ಅವರ ಎಲ್ಲ ವ್ಯವಹಾರಗಳು ಮೂವರಿಗೂ ತಿಳಿದಿತ್ತು. ಅಲ್ಲದೆ, ವನಜಾಕ್ಷಿ ಗುರೂಜಿಗೆ ಆಪ್ತಳಾಗಿದ್ದು, ಅವರ ಹೆಸರಲ್ಲಿ ಗೋಕುಲ ರಸ್ತೆಯ ಗುರೂಜಿ ಅಪಾರ್ಟ್‌ಮೆಂಟ್ ಸೇರಿದಂತೆ ಹಲವು ಆಸ್ತಿಗಳನ್ನು ನೋಂದಣಿ ಮಾಡಿಸಿದ್ದರು. ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿರುವ ಕುರಿತು ಪ್ರಶ್ನಿಸಿದಾಗ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು ಎನ್ನಲಾಗುತ್ತಿದೆ.
ಆರೋಪಿಗಳು ಸರಳ ವಾಸ್ತು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾಗ ಹಣಕಾಸಿನ ವಿಷಯದಲ್ಲಿ ಅವ್ಯವಹಾರ ನಡೆಸಿದ್ದರು. ಇದರಿಂದ ಗುರೂಜಿ ಅವರನ್ನು ಕೆಲಸದಿಂದ ತೆಗೆದುಹಾಕಿ, ಹಣ ಮರಳಿಸುವಂತೆ ಹೇಳಿದ್ದರು. ಈ ಕೋಪದಿಂದಲೂ ಹತ್ಯೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಅಸಲಿ ವಿಚಾರ ಏನು ಎನ್ನುವುದು ಪೊಲೀಸರ ತನಿಖೆಯಿಂದ ಬಯಲಾಗ ಬೇಕಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


