ತಿಪಟೂರು: ಗ್ರಾಮಗಳಲ್ಲಿ ಒಳಚರಂಡಿಗಳು ತುಂಬಿ ತುಳುಕುತ್ತಿದ್ದರೂ ಗ್ರಾಮ ಪಂಚಾಯಿತಿಯವರು ಒಳಚರಂಡಿಗಳನ್ನು ಸ್ವಚ್ಛತೆ ಮಾಡದೆ ನಿರ್ಲಕ್ಷಿಸಿದ್ದಾರೆ ಎಂದು ಕೆಲವು ಗ್ರಾಮಗಳ ಗ್ರಾಮಸ್ಥರು ಆರೋಪಿಸಿದ್ದಾರೆ
ತಾಲೂಕಿನ ದಸರಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳ ಒಳಚರಂಡಿಗಳು ಸ್ವಚ್ಛತೆಯನ್ನು ಕಂಡಿದ್ದರೆ, ಇನ್ನೂ ಕೆಲವು ಒಳಚರಂಡಿಗಳು ಸ್ವಚ್ಛತೆಯನ್ನು ಕಾಣದಂತಾಗಿದೆ. ಪೂಜಾರಿ ಪಾಳ್ಯಗ್ರಾಮದಲ್ಲಿ ಒಳಚರಂಡಿಗಳು ತುಂಬಿ ತುಳುಕುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಸದಸ್ಯರು ಇವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಇಲ್ಲಿನ ನಾಗರಿಕರು ದೂರಿದ್ದಾರೆ.
ಒಳಚರಂಡಿ ಸ್ವಚ್ಛಗೊಳಿಸಿ ಎಂದರೆ, ಸ್ವಚ್ಛತೆಯನ್ನು ಪೂರ್ಣ ಮಾಡಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಗ್ರಾಮ ಪಂಚಾಯಿತಿ ವರ್ಕರ್ ಗಳು ಮಾತ್ರ ಅಧಿಕಾರಿಗಳ ಮಾತಿಗೆ ಬೆಲೆ ಇಲ್ಲದಂತೆ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ದಿನೇ ದಿನೇ ಒಳ ಚರಂಡಿಗಳು ತುಂಬಿ ದುರ್ವಾಸನೆ ಬೀರುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪೂಜಾರಿ ಪಾಳ್ಯ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಗಳನ್ನು ಅಳವಡಿಸಿದ ಸ್ಥಳಗಳಲ್ಲಿ ಕುಡಿಯುವ ನೀರನ್ನು ಬಳಸಿ ಬಟ್ಟೆ ಒಗೆಯುವುದು, ಹಸು, ಕರುಗಳ ಮೈ ತೊಳೆಯುವುದು, ವಾಹನಗಳನ್ನು ತೊಳೆಯುವುದು ಮೊದಲಾದ ಚಟುವಟಿಕೆಗಳು ನಡೆಯುತ್ತಿವೆ. ಇದನ್ನೆಲ್ಲ ಹೇಳುವವರು, ಕೇಳುವವರು ಯಾರು ಇಲ್ಲ ಎನ್ನುವಂತಾಗಿದೆ.
ಕುಡಿಯುವ ನೀರನ್ನು ಮಿತಿ ಇಲ್ಲದಂತೆ ಬಳಸದೇ ಹಾಳು ಮಾಡುತ್ತಿರುವುದು ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಪಿಡಿಒ, ಅಧಿಕಾರಿಗಳಿಗೂ, ಸೆಕ್ರೆಟರಿ ದಯಾನಂದ್ ಅವರ ಗಮನಕ್ಕೆ ತಂದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಪೂಜಾರಿಪಾಳ್ಯ ಗ್ರಾಮಸ್ಥರು ಆರೋಪಿಸಿದ್ದಾರೆ.
ಇದಕ್ಕೆ ಸಂಬಂಧಪಟ್ಟ ತಾಲೂಕು ಪಂಚಾಯಿತಿ ಅಧಿಕಾರಿಗಳು ದಸರಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆಲವು ಹಳ್ಳಿಗಳ ಕಡೆ ಗಮನಹರಿಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ವರದಿ: ಮಂಜು ಗುರುಗದಹಳ್ಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB