ಐದು ಕೋಟಿಗೆ ಆಸ್ತಿಯೊಂದನ್ನು ಮಾರಿದ ವಿಚಾರವೇ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಕೊಲೆಗೆ ಕಾರಣವಾಗಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಹಲವು ದಿನಗಳಿಂದ ತಮ್ಮ ಬೇನಾಮಿ ಆಸ್ತಿಯೊಂದನ್ನು ಮಾರಾಟ ಮಾಡಿ ಪಡೆದ ಐದು ಕೋಟಿ ಕೊಡುವಂತೆ ಹಾಕುತ್ತಿದ್ದ ಒತ್ತಡದಿಂದ ರೋಸಿ ಹೋದ ಮಹಾಂತೇಶ ಗುರೂಜಿ ಕೊಲೆ ಮಾಡಿದ್ದಾನೆ ಎಂಬುದು ಬಹಿರಂಗವಾಗಿದೆ.
ಗುರೂಜಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದು ಆಸ್ತಿಯ ಹಣ ಏಕೆ ಕೊಡಬೇಕು ಎಂದು ಹಂತಕ ತಗಾದೆ ತೆಗೆದು ರೊಚ್ಚಿಗೆದ್ದು ಮಂಜುನಾಥ ಮರೇವಾಡನ ಜೊತೆ ಸೇರಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುರೂಜಿಯ ಬಹುತೇಕ ವ್ಯವಹಾರವನ್ನು ಹಂತಕ ಮಹಾಂತೇಶ ಶಿರೂರು ನೋಡಿಕೊಳುತ್ತಿದ್ದು,ಸುಮಾರು ವರ್ಷಗಳ ಕಾಲ ಮುಂಬೈನಲ್ಲಿ ಸರಳವಾಸ್ತು ಮುಖ್ಯಸ್ಥನಾಗಿ ಕೆಲಸ ಮಾಡುತ್ತಾ ನಂಬಿಕೆ ಗಳಿಸಿದ್ದ ಆತನ ಹೆಸರಿನಲ್ಲಿ ಗುರೂಜಿ ಕೋಟ್ಯಾಂತರ ಮೌಲ್ಯದ ಆಸ್ತಿ ಮಾಡಿದ್ದರು.
ಆದರೆ ಐದು ಕೋಟಿಗೆ ಆಸ್ತಿಯೊಂದನ್ನು ಮಾರಿದ ವಿಚಾರವಾಗಿ ಗಲಾಟೆ ನಡೆದಿತ್ತು.
ಇದರಿಂದ ಮಹಾಂತೇಶ ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು ಇದೇ ವಿಚಾರದಲ್ಲಿ ನಡೆದ ವೈಷಮ್ಯ ಕೊಲೆಗೆ ಕಾರಣವಾಗಿದೆ.
ಅಚ್ಚರಿಯ ಸಂಗತಿ :
ಹಂತಕ ಮಹಾಂತೇಶ ಬಗ್ಗೆ ಅಚ್ಚರಿಯ ಸಂಗತಿಗಳು ಬಯಲಿಗೆ ಬಂದಿದ್ದು, ಮಹಾಂತೇಶ ಮತ್ತು ವನಜಾಕ್ಷಿ ಪ್ರೀತಿಸಿ ಮದುವೆಯಾಗಿದ್ದರು. ಗುರೂಜಿ ಬಳಿಯೇ ಕೆಲಸಕ್ಕಿದ್ದ ಮಹಾಂತೇಶ-ವನಜಾಕ್ಷಿ, ಮೊದಲಿಗೆ ವನಜಾಕ್ಷಿ ಕೆಲಸಕ್ಕೆ ಸೇರಿದ್ದು, ಬಳಿಕ ಮಹಾಂತೇಶ ಕೆಲಸಕ್ಕೆ ಸೇರಿದ್ದ. ಅಲ್ಲಿಯೇ ಇಬ್ಬರ ಮಧ್ಯೆ ಪ್ರೇಮ ಶುರುವಾಗಿದೆ.
ಮನೆಯವರಿಗೂ ಗೊತ್ತಿಲ್ಲದೇ ಇಬ್ಬರಿಗೂ ಗುರೂಜಿ ಮದುವೆ ಮಾಡಿಸಿದ್ದರು. ಅಷ್ಟೊಂದು ಗುರೂಜಿಯನ್ನು ಹಚ್ಚಿಕೊಂಡಿದ್ದ ಜೋಡಿ, ಮನೆಯವರಿಗೆ ಹೇಳದೇ ಮಹಾಂತೇಶ ಮದುವೆ ಮಾಡಿಕೊಂಡಿದ್ದ. ಹುಬ್ಬಳ್ಳಿಯ ಜೆ.ಪಿ. ನಗರದಲ್ಲಿ ಗುರೂಜಿಯಿಂದ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಿದ್ದು, ದಂಪತಿ ಸಾಲ ಮಾಡಿ ಅದರಲ್ಲಿ ೩೦೬ ನಂಬರಿನ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ನಾಲ್ಕು ವರ್ಷಗಳಿಂದ ಗುರೂಜಿ ಜೊತೆ ಅವರ ಸಂಬಂಧ ಹಳಸಿತ್ತು. ಇದೀಗ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವ ಮಹಾಂತೇಶ, ಎರಡು ಹೆಣ್ಣು ಮಕ್ಕಳೊಂದಿಗೆ ಹುಬ್ಬಳ್ಳಿಯ ಫ್ಲ್ಯಾಟ್‌ನಲ್ಲಿಯೇ ಸಂಸಾರ ಮಾಡುತ್ತಿದ್ದಾನೆ.
ಹಂತರಿಗೆ ಡ್ರಿಲ್:
ನಿನ್ನೆ ರಾತ್ರಿಯಿಂದ ಪೊಲೀಸರು ಹಂತಕರಿಗೆ ಡ್ರಿಲ್ ಮಾಡಿದ್ದು, ಇಬ್ಬರು ಎಸಿಪಿಗಳು ಮೂವರು ಇನ್ಸ್ ಪೆಕ್ಟರ್ ಗಳಿಂದ ಆರೋಪಿಗಳ ವಿಚಾರಣೆ ಮಾಡಲಾಗಿದೆ. ವಿಚಾರಣೆ ವೇಳೆ ಗುರೂಜಿಯನ್ನ ಕೊಲೆ ಮಾಡಿದ್ದಾಗಿ ಹಂತಕರು ಒಪ್ಪಿಕೊಂಡಿದ್ದಾರೆ. ಬೇನಾಮಿ ಆಸ್ತಿ ಹಿನ್ನಲೆಯಲ್ಲಿ ಕೊಲೆ ಮಾಡಿದ್ದೇವೆ ಎಂದು ಹಂತಕರು ಬಾಯ್ಬಿಟ್ಟಿದ್ದಾರೆ. ಎಷ್ಟು ಪ್ರಮಾಣದ ಆಸ್ತಿ, ಎಲ್ಲಿಯ ಆಸ್ತಿ, ಯಾರ ಹೆಸರಲ್ಲಿದೆ ಎಲ್ಲದರ ಬಗ್ಗೆ ಸವಿಸ್ತಾರವಾಗಿ ಮಸತಿ ಪೊಲೀಸರು ವಿಚಾರಣೆ ನಡೆಸಿ ಗುರೂಜಿ ಹತ್ಯೆಯ ಹಿಂದಿನ ಅಸಲಿಯತ್ತನ್ನ ಪತ್ತೆಹಚ್ಚತೊಡಗಿದ್ದಾರೆ.
ಈ ನಡುವೆ ಕಚೇರಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಹತ್ತಕ್ಕೂ ಹೆಚ್ಚು ಮಂದಿಯ ಹೆಸರಿನಲ್ಲಿ ಗುರೂಜಿ ಬೇನಾಮಿ ಆಸ್ತಿ ಖರೀದಿ ಮಾಡಿರುವುದನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸುತ್ತಮುತ್ತಲಲ್ಲಿ ಚಂದ್ರಶೇಖರ್ ಗುರೂಜಿಗೆ ಸೇರಿದ 200 ಎಕರೆ ಜಮೀನಿರುವುದು ಅದರಲ್ಲಿ ಕೆಲವು ಬೇನಾಮಿಯಾಗಿರುವುದು ಕಂಡುಬಂದಿದೆ.
ಎಫ್ ಐಆರ್ ವಿವರ:
ಚಂದ್ರಶೇಖರ್ ಸಹೋದರ ಸಂಜಯ್ ಅಂಗಡಿ ಇಂದ ಪೊಲೀಸರಿಗೆ ದೂರು ನೀಡಿದ್ದು, ಸಂಜಯ್ ಅಂಗಡಿ ದೂರಿನ ಮೇಲೆ ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ೨೦೦೮ರಿಂದ ಮಹಾಂತೇಶ ಶಿರೂರು ಗುರೂಜಿ ಹತ್ತಿರ ಕೆಲಸಕ್ಕೆ ಆರೋಪಿ ಸೇರಿದ್ದ. ೨೦೧೫ರಲ್ಲಿ ಮಹಾಂತೇಶ್ ಶಿರೂರನನ್ನು ಮುಂಬೈಯಲ್ಲಿ ಉಪಾಧ್ಯಕ್ಷನಾಗಿ ಕಂಪನಿಗೆ ನೇಮಕಗೊಂಡಿದ್ದ.
ಕಂಪನಿಗೆ ಬರುತ್ತಿದ್ದ ಜನರ ಹತ್ತಿರ ಹಣವನ್ನು ಮಹಾಂತೇಶ್ ಪಡೆಯುತ್ತಿದ್ದ ಆರೋಪ ಕೇಳಿಬರುತ್ತದೆ. ಮಹಾಂತೇಶ್ ಜೊತೆಗೆ 20-25 ಜನರು ಶಾಮೀಲಾಗಿದ್ದರು. ಈ ಬಗ್ಗೆ ಎಮ್.ಡಿ.ಯವರಿಗೆ ಹಾಗೂ ಫಿರ್ಯಾದಿದಾರರಿಗೆ ವಿಷಯ ಗೊತ್ತಾಗಿ ಕೆಲಸದಿಂದ ತೆಗೆದು ಹಾಕುತ್ತಾರೆ. ಇದೆ ಸಿಟ್ಟಿನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಹಾಂತೇಶ ಶಿರೂರ ಹುಬ್ಬಳ್ಳಿ ಗೋಕುಲ ರಸ್ತೆ ಜೆ.ಸಿ. ನಗರದಲ್ಲಿ ಗುರೂಜಿ ಅವರ ಒಡೆತನದ ಅಪಾರ್ಟ್‌ಮೆಂಟ್ ನಲ್ಲಿ ಶಿರೂರ ಪ್ಲಾಟ್ ಖರೀದಿಸಿದ್ದ. ಈ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಕಿಂಗ್‌ಗೆ ಜಾಗವಿಲ್ಲ. ಸೋಲಾರ ವ್ಯವಸ್ಥೆ ಅಳವಡಿಸಿಲ್ಲ ಎಂದು ಗ್ರಾಹಕರ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣ ಹಿಂಪಡೆಯಲು ಹಣಕ್ಕೆ ಒತ್ತಾಯಿಸುತ್ತಿದ್ದ.
ಆಗಾಗ ಜೀವ ಬೆದರಿಕೆ ಹಾಕಿದ್ದು ಉಂಟು. ಕೆಲಸದಿಂದ ತೆಗೆದು, ಹಣ ನೀಡದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಗುರೂಜಿರವರ ಸಹೋದರನ ಮಗ ಸಂಜಯ್ ಅಂಗಡಿ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಹಣ ಸುಲಿಗೆ ಧಮ್ಕಿ:
ನ್ಯಾಯಾಲಯದ ಪ್ರಕರಣವನ್ನು ಹಿಂದೆ ಪಡೆಯಲು ಹಣ ಕೇಳುತ್ತಿದ್ದರು. ಹಣ ಕೊಡದೇ ಇದ್ದಾಗ ಚಂದ್ರಶೇಖರ್ ಗೂರೂಜಿಗೆ ಧಮ್ಕಿ ಹಾಕುತ್ತಿದ್ದರು. ಅಲ್ಲದೇ ಕೆಲಸದಿಂದ ತೆಗೆದು ಹಾಕಿ ಹಾಕಿದ್ದು, ನ್ಯಾಯಾಲಯದ ಪ್ರಕರಣಕ್ಕೆ ಹಣ ಕೊಟ್ಟಿಲ್ಲ ಎಂದು ಮಹಾಂತೇಶ್ ಹಾಗೂ ಮಂಜುನಾಥ್ ಮರೆವಾಡ ಇಬ್ಬರು ಹತ್ಯೆ ಮಾಡಿದ್ದಾರೆ.
ಹುಬ್ಬಳ್ಳಿಯ ಹೋಟೆಲ್ ನಲ್ಲಿ ಚಂದ್ರಶೇಖರ್ ಹಾಗೂ ಹೆಂಡತಿ ಅಂಕಿತಾ ಇಬ್ಬರು ಉಳಿದುಕೊಂಡಿರುವ ಹೋಟೆಲ್‌ಗೆ ಹೋಗಿ ಆರೋಪಿಗಳು ಹತ್ಯೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಿದ್ದು ನಗರದ ಶಿವಪ್ರಭು ಲೇಔಟ್‌ನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಸುಳ್ಳಾ ರಸ್ತೆಯ ಜಮೀನಿನಲ್ಲಿ ಗುರೂಜಿ ಅಂತ್ಯಕ್ರಿಯೆ ನಡೆಸಲಾಗಿದೆ. 15 ದಿನದ ಹಿಂದೆಯಷ್ಟೇ ೨ನೇ ಪತ್ನಿಯ ಊರಾದ ಶಿವಮೊಗ್ಗ ಜಿಲ್ಲೆ ಹೆಮ್ಮಕ್ಕಿಯಲ್ಲಿ ಜ್ವರ ಹಿನ್ನೆಲೆಯಲ್ಲಿ ಒಂದು ವಾರ ಗ್ರಾಮದಲ್ಲಿ ಗುರೂಜಿ ತಂಗಿದ್ದರು.
ದ್ವೇಷ ಗುರೂಜಿ ಹತ್ಯೆಗೆ ಕಾರಣ:
ಸರಳವಾಸ್ತು ಚಂದ್ರಶೇಖರ ಗುರೂಜಿ ಅವರ ಹತ್ಯೆಗೆ ಹಗೆತನಕ್ಕೆ ವೈಯುಕ್ತಿಕ ದ್ವೇಷವೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ದೇಶದ ಮಾಜಿ ಉಪಪ್ರಧಾನಿ ದಿ. ಡಾ. ಬಾಬು ಜಗಜೀವನರಾಮ್ ಅವರ ೩೬ನೇ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಚಂದ್ರಶೇಖರ ಗುರೂಜಿ ಅವರ ಕೊಲೆಗೂ, ಕಾನೂನು ಸುವ್ಯವಸ್ಥೆಗೂ ಸಂಬಂಧ ಇಲ್ಲ. ಇಂದಿನ ಯುವಕರಲ್ಲಿ ಮೂಡಿರುವ ಹಗೆತನ, ದ್ವೇಷ, ಮನಃಸ್ಥಿತಿಯಿಂದ ಈ ರೀತಿಯ ಕೃತ್ಯಗಳಾಗುತ್ತಿವೆ. ಇವನ್ನೆಲ್ಲಾ ದಮನ ಮಾಡಲು ಕಾನೂನನ್ನು ಮತ್ತಷ್ಟು ಬಿಗಿಗೊಳಿಸಬೇಕಿದೆ ಎಂದರು.
ಈ ಹತ್ಯೆ ಪ್ರಕರಣದಲ್ಲಿ ಕಾನೂನು ಸುವ್ಯವಸ್ಥೆಯ ಯಾವುದೇ ಲೋಪ ಇಲ್ಲ. ಯುವಕರ ಮನಃಸ್ಥಿತಿಗಳನ್ನು ಸರಿಪಡಿಸಬೇಕಿದೆ ಎಂದು ಅವರು ಹೇಳಿದರು.
ಫೇಸ್ ಬುಕ್ ನಲ್ಲಿ ಗುರೂಜಿ ಕೊಲೆ ಸುಳಿವು ಕೊಟ್ಟಿದ್ದ ಹಂತಕ:
ಸರಳ ವಾಸ್ತು ಚಂದ್ರಶೇಖರ ಗುರೂಜಿ ಅವರ ಕೊಲೆ ಪ್ರಕರಣದ ಆರೋಪಿ ಮಹಾಂತೇಶ ಶಿರೂರ ಐದು ದಿನಗಳ ಹಿಂದೆಯೇ ಗುರೂಜಿ ಕೊಲೆಯ ಸುಳಿವು ನೀಡಿ ಫೇಸ್‌ಬುಕ್ ಖಾತೆಯಲ್ಲಿ ಹಾಕಿದ್ದ ಪೋಸ್ಟ್ ನಿಂದ ಪತ್ತೆಯಾಗಿದೆ.
ಫೇಸ್‌ಬುಕ್ ನಲ್ಲಿ ಭಗವದ್ಗೀತೆಯ ಶ್ಲೋಕದ ಪೋಸ್ಟ್ ಅನ್ನು ಶೇರ್ ಮಾಡಿದ್ದ ಆರೋಪಿಯು, ‘ಅಧರ್ಮ ತಾಂಡವಾಡುತ್ತಿರುವಾಗ ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು. ಇನ್ನು ವಿಳಂಬವೇಕೆ ಪ್ರಭುವೇ ಆದಷ್ಟು ಬೇಗ ಅವತರಿಸು ಪ್ರಭು. ಸಂಭವಾಮಿ ಯುಗೇಯುಗೇ…’ ಎಂದು ಬರೆದುಕೊಂಡಿದ್ದಾನೆ. ಈ ಪೋಸ್ಟ್ ಅನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡ ಐದು ದಿನಗಳಲ್ಲೇ, ಆರೋಪಿ ಗುರೂಜಿ ಅವರನ್ನು ಕೊಲೆ ಮಾಡಿದ್ದಾನೆ.
ತಂದೆಯಂತಿದ್ದ ಗುರೂಜಿ:
ನಮ್ಮ ಹಾಗೂ ಚಂದ್ರಶೇಖರ ಗುರೂಜಿ ಜೊತೆಗೆ ಒಳ್ಳೆ ಸಂಬಂಧವಿದ್ದು, ಗುರೂಜಿ ನಮ್ಮ ತಂದೆಯಂತಿದ್ದು ಅವರನ್ನು ನಮ್ಮ ಯಜಮಾನರು ಕೊಲೆ ಮಾಡಿದ್ದು ತಪ್ಪು ಎಂದು ಆರೋಪಿ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ ಹೇಳಿದ್ದಾರೆ.
ನನಗೆ ಬೇಸರ ಆದಾಗ ಗುರೂಜಿ ಜೊತೆ ಮಾತನಾಡುತ್ತಿದ್ದೆ. ಬೇನಾಮಿ ಆಸ್ತಿ ವಿಚಾರವಾಗಿ ಕೊಲೆಯಾಗಿದೆ ಎನ್ನುವುದು ಸುಳ್ಳು ಸುದ್ದಿ. ನನ್ನ ಪತಿ ಸರಳ ವಾಸ್ತುನಲ್ಲಿ ಮುಂಬಯಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ಸಾಲ ಮಾಡಿ ಅಪಾರ್ಟ್‌ಮೆಂಟ್‌ನಲ್ಲಿ ಮನೆ ತೆಗೆದುಕೊಂಡಿದ್ದೇವೆ. ನನ್ನ ಹೆಸರಿಗೆ ಯಾವುದೇ ಆಸ್ತಿ ಇಲ್ಲ. ಕೊಲೆ ವಿಡಿಯೋ ನೋಡಿ ನೋವಾಗಿದೆ.
ಗುರೂಜಿ ಮೇಲೆ ನಮ್ಮ ಮನೆಯವರಿಗೆ ಇಷ್ಟು ಆಕ್ರೋಶ ಏಕೆ ಎಂದು ಗೊತ್ತಾಗುತ್ತಿಲ್ಲ. ಗುರೂಜಿ ಅಲ್ಲ, ಯಾರಿಗೆ ಆದರೂ ಈ ರೀತಿ ಬರ್ಬರ ಕೊಲೆ ಆಗಬಾರದು. ಪೊಲೀಸರೂ ಸಹ ವಿಚಾರಣೆಗೆ ಕರೆದೊಯ್ದಿದ್ದರು ವಿಚಾರಣೆಗೆ ಸಹಕರಿಸಿದ್ದೇನೆ. ನನ್ನ ಗಂಡ ಮಾಡಿದ್ದು ತಪ್ಪು ಎಂದಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


