ಶಾಲಾ ವಿದ್ಯಾರ್ಥಿಗಳಿಗೆ ಬಟ್ಟೆ, ಶೂ, ಸಾಕ್ಸ್ ಕೊಡುವ ಅಗತ್ಯವಿಲ್ಲ ಎಂಬ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದು, ಸರ್ಕಾರದ ಬಳಿ ಹಣ ಇಲ್ಲದಿದ್ದರೆ ಹೇಳಿ, ಕಾಂಗ್ರೆಸ್ ಪಕ್ಷ ಭಿಕ್ಷೆ ಬೇಡಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಕೊಡಲು ಸಿದ್ಧ ಎಂದಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಚಿವ ನಾಗೇಶ್‌ರವರ ಹೇಳಿಕೆ ಸರಿಯಾದುದಲ್ಲ, ಇದು ಅಗೌರವದ ಹೇಳಿಕೆ. ಇದು ಮಾನವೀಯತೆಗೆ ಮಾಡಿದ ಅವಮಾನ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಕೊಡಲು ಹಣ ಇಲ್ಲ ಎಂದರೆ ಹೇಳಿ, ವಿವಿಧ ಕಂಪನಿಗಳ ಸಿಎಸ್‌ಆರ್ ಫಂಡ್‌ನ್ನು ಬಳಕೆ ಮಾಡಿ, ಭಿಕ್ಷೆ ಎತ್ತಿ ಮಕ್ಕಳಿಗೆ ಎಲ್ಲವನ್ನೂ ಕೊಡುತ್ತೇವೆ ಎಂದು ಸಿಟ್ಟಿನಿಂದ ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ದೊಡ್ಡ ದೊಡ್ಡ ಸ್ಥಾನಕ್ಕೆ ಹೋಗಿದ್ದಾರೆ. ಪೋಷಕರು ಮಕ್ಕಳಿಗೆ ಒಳ್ಳೆ ಬಟ್ಟೆ ಕೊಟ್ಟು, ಒಳ್ಳೆ ಶಾಲೆಯಲ್ಲಿ ಓದಿಸಲು ಬಯಸುತ್ತಾರೆ. ಸರ್ಕಾರಿ ಶಾಲೆ ಮಕ್ಕಳಿಗೂ ಯಾವುದೇ ಕೊರತೆಯಾಗಬಾರದು ಎಂದು ಈ ಹಿಂದಿನ ಸರ್ಕಾರ ಶೂ, ಸಾಕ್ಸ್ ಸಮವಸ್ತ್ರ ಯೋಜನೆಯನ್ನು ಜಾರಿ ಮಾಡಿತ್ತು. ಇದು ರಾಜ್ಯದ ಎಲ್ಲ ಮಕ್ಕಳ ಸ್ವಾಭಿಮಾನದ ವಿಚಾರ, ನೀವು ಮಕ್ಕಳನ್ನು ಅಗೌರವದಿಂದ ಕಾಣುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಶಾಲಾ ಮಕ್ಕಳ ಬಗ್ಗೆ ಶಿಕ್ಷಣ ಸಚಿವರು ಇನ್ನಾದರು ಗೌರವದಿಂದ ಮಾತನಾಡುವುದನ್ನು ಕಲಿಯಲಿ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


