ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ಪ್ರಧಾನ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಯು ಸಾರ್ವಜನಿಕರಿಗೆ ಆಕರ್ಷಣೀಯವಾಗಿ, ಸ್ವಚ್ಛವಾಗಿ ಹಾಗೂ ಮಾದರಿಯಾಗಿ ಇರಬೇಕು ಎಂದು ಜಿಲ್ಲಾ ಕಾನೂನು ನ್ಯಾಯಾಧೀಶರು ಹಾಗೂ ಕೆರೆ ಮತ್ತು ಕಾಲುವೆಗಳ ಸಂರಕ್ಷಣಾ, ಪ್ರಾಧಿಕಾರ ಅಧ್ಯಕ್ಷರಾಗಿರುವ ಗಿರೀಶ್ ಅವರು ತಿಳಿಸಿದರು.
ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವಿವಿಧ ವಿಭಾಗಗಳಲ್ಲಿ ಪರಿಶೀಲನೆ ನಡೆಸಿದರು. ವೈದ್ಯಾಧಿಕಾರಿಯಾಗಿರುವ ಕುಮಾರನಾಯ್ಕ ಜೊತೆಗೂಡಿ ಆಸ್ಪತ್ರೆಯ ಹೆರಿಗೆವಿಭಾಗ, ಶಸ್ತ್ರಚಿಕಿತ್ಸೆ, ತುರ್ತು ಚಿಕಿತ್ಸಾ ವಿಭಾಗ, ಆಕ್ಸಿಜನ್ ಘಟಕ, ಒಳರೋಗಿಗಳ ವಿಭಾಗ, ಔಷಧಿ ಉಗ್ರಾಣ, ಆಸ್ಪತ್ರೆಯಲ್ಲಿರುವ ಶೌಚಾಲಯಗಳು ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಳರೋಗಿಗಳಾಗಿ ದಾಖಲಾಗಿದ್ದ ರೋಗಿಗಳೊಂದಿಗೆ ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ವಿಚಾರಿಸಿದರು.
ಔಷಧಿ ಉಗ್ರಾಣದಲ್ಲಿ ಅವಧಿ ಮೀರಿದ ಔಷಧಗಳ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿ, ಉಗ್ರಾಣದ ನಿರ್ವಹಣೆ ಬಗ್ಗೆ ಪರಿಶೀಲಿಸಿ ಉಗ್ರಾಣದಲ್ಲಿ ಸಾಕಷ್ಟು ಔಷಧಿಗಳ ಲಭ್ಯತೆ ಇರುವುದನ್ನು ಖಚಿತಪಡಿಸಿಕೊಂಡು ಪ್ರಶಂಸೆ ವ್ಯಕ್ತಪಡಿಸಿದರು.
ಬಡರೋಗಿಗಳಿಗೆ ಹೊರಗಡೆಗೆ ಔಷಧಿಗಳನ್ನು ಬರೆದುಕೊಡದಂತೆ ಸೂಚಿಸಿದರು. ಸರ್ಕಾರಿ ಆಸ್ಪತ್ರೆಯನ್ನು ನಂಬಿ ಬರುವ ರೋಗಿಗಳಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸಬೇಕು. ಆಸ್ಪತ್ರೆಯ ಶುಚಿತ್ವ, ತುರ್ತು ಚಿಕಿತ್ಸೆಯ ವಿಭಾಗದ ಕಡೆಗಳಿಗೆ ಹೆಚ್ಚು ಗಮನ ಹರಿಸುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾದ ಟಿ.ಹೆಚ್.ಓ. ವೆಂಕಟೇಶ್, ಕುಮಾರನಾಯ್ಕ ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್, ಹಿರಿಯೂರು ನಗರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್ ಹಾಗೂ ಪೋಲಿಸ್ ಸುರೇಶ್ ನಾಯ್ಕ, ಹೆಚ್. ಸಿ.ಶಿವಕುಮಾರ್ ಸೇರಿದಂತೆ ಇನ್ನು ಹಲವಾರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy