ತುಮಕೂರಿನ ದಾನಾ ಪ್ಯಾಲೇಸ್ ಬಳಿ ಕಳೆದ ಶನಿವಾರ ಮಧ್ಯಾಹ್ನ ಮಳೆ ನೀರಿಗೆ ಕೊಚ್ಚಿಹೋಗಿದ್ದ ಆಟೋ ಚಾಲಕ ಅಮ್ಜದ್ ಮೃತದೇಹ ಕೊನೆಗೆ ಪತ್ತೆಯಾಗಿದೆ. ಎನ್.ಡಿ.ಆರ್.ಎಫ್ ಸಿಬ್ಬಂದಿ, ಪೊಲೀಸರು ಮತ್ತು ಆಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆ ಯಶಸ್ವಿಯಾಗಿದೆ.
ತುಮಕೂರು ನಗರದ ದಾನ ಪ್ಯಾಲೇಸ್ ಸಮೀಪದ ರೈಲ್ವೆ ಬ್ರಿಡ್ಜ್ ಬಳಿ ಆಟೋ ಚಾಲಕ ಅಮ್ಜದ್ ನಿರ್ವಹಣೆಯಿಲ್ಲ ರಾಜಗಾಲುವೆಯಲ್ಲಿ ಕೊಚ್ಚಿ ಹೋಗಿದ್ದ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಅಮ್ದಜ್ ಪತ್ತೆಗಾಗಿ ಶೋಧಕಾರ್ಯ ನಡೆಸಿದ್ದರು. ಆದರೆ ಯಶಸ್ವಿಯಾಗಿರಲಿಲ್ಲ.
ಹೀಗಾಗಿ ಭಾನುವಾರ ಬೆಂಗಳೂರಿನಿಂದ ಎನ್.ಡಿ.ಆರ್.ಎಫ್ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ಕೈಗೊಂಡಿದ್ದರು. ಸತತ ಮೂರು ದಿನಗಳು ನಡೆಸಿದ ಶೋಧಕಾರ್ಯದಿಂದ ಅಮ್ಜದ್ ಮೃತದೇಹವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆಟೋ ಚಾಲಕ ಕೊಚ್ಚಿ ಹೋಗಿದ್ದ ದಾನ ಪ್ಯಾಲೇಸ್ ಸಮೀಪದ ರೈಲ್ವೆ ಬ್ರಿಡ್ಜ್ ಸ್ಥಳಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಸಹ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಎರಡು ಕಿಲೋ ಮೀಟರ್ ದೂರದವರೆಗೆ ಶೋಧ ಕಾರ್ಯ ನಡೆದಿತ್ತು.
ಭೀಮಸಂದ್ರ ಕೆರೆಗೂ ಮೊದಲೇ ಬರುವ ಕಾಲುವೆಯ ಕೊಳಚೆಯಲ್ಲಿ ಆಟೋ ಚಾಲಕ ಅಮ್ಜದ್ ಮೃತದೇಹ ಪತ್ತೆಯಾಗಿದೆ.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz