ಕರ್ತವ್ಯದಲ್ಲಿರುವ ಪೊಲೀಸರು ಹಾಗೂ ಠಾಣೆಗಳ ಮೇಲೆ ಪೆಟ್ರೋಲ್ ತುಂಬಿದ ಬಾಟಲಿಗಳನ್ನು ಬಳಸಿ ದಾಳಿ ಮಾಡಿರುವುದು ‘ಭಯೋತ್ಪಾದನಾ ಕೃತ್ಯ’ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ದಾಳಿ ಪ್ರಕರಣದಲ್ಲಿ ಭಾಗಿಯಾಗಿರುವ ಅತೀಕ್ ಅಹ್ಮದ್ ಇನ್ನಿತರರು ಜಾಮೀನು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್ ಹಾಗೂ ಶಿವಶಂಕರ್ ಅಮರಣ್ಣವರ್ ಅವರಿದ್ದ ಹೈಕೋರ್ಟ್ ನ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಉದ್ರಿಕ್ತರುಗಳು ಪೊಲೀಸ್ ಠಾಣೆಯ ಮುಂದೆ ಗುಂಪು ಗೂಡುವುದು, ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯ ಮೇಲೆ ಕಬ್ಬಿಣದ ರಾಡ್, ಪೆಟ್ರೋಲ್ ತುಂಬಿದ ಬಾಟಲ್‌ಗಳು ಸೇರಿದಂತೆ ಮಾರಕಾಸ್ತ್ರಗಳಿಂದ ದಾಳಿ ನಡೆಸುವುದು, ಗಲಭೆ ಉಂಟು ಮಾಡುವುದು ಇವೆಲ್ಲವೂ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಮಾಡಿದ ಭಯೋತ್ಪಾದನಾ ಚಟುವಟಿಕೆಗಳು ಎನಿಸುತ್ತದೆ ಎಂದು ತಿಳಿಸಿದ್ದಾರೆ.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣ ಕುರಿತು ರಾಷ್ಟ್ರೀಯ ತನಿಖಾ ದಳ( ಎನ್‌ಐಎ) ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಆರೋಪಿಗಳು ಭಯೋತ್ಪದನಾ ಕೃತ್ಯ ಎಸಗುವ ಉದ್ದೇಶದಿಂದಲೇ ಘಟನಾ ಸ್ಥಳದಲ್ಲಿ ಸೇರಿದ್ದರು ಎಂಬುದು ಮೆಲ್ನೋಟಕ್ಕೆ ಸಾಬೀತಾಗಿರುತ್ತದೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಯುಎಪಿಎ ಕಾಯಿದೆ ಸೆಕ್ಷನ್ ೪೩ಡಿ (೫) ಅನ್ವಯವಾಗುತ್ತದೆ. ಆರೋಪ ಪಟ್ಟಿಯಲ್ಲಿ ಎನ್‌ಐಎ ಉಲ್ಲೇಖಿಸಿರುವ ಅಂಶಗಳು, ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳು ಮೇಲ್ನೋಟಕ್ಕೆ ನಿಜ ಎನಿಸುತ್ತಿವೆ ಎಂದು ತಿಳಿಸಿದರು.
ಅರ್ಜಿದಾರರನ್ನು ಪರವಾಗಿ ಜಾಮೀನು ನೀಡುವಂತೆ ವಾದಿಸಿದ ವಕೀಲ ಮೊಹಮ್ಮದ್ ತಾಹೀರ್ ಅವರು ಎನ್‌ಐಎ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಕೆಲವು ಸಾಕ್ಷಿಗಳು ನೀಡಿರುವ ಹೇಳಿಕೆಗಳು ಮತ್ತು ಅದೇ ಸಾಕ್ಷಿಗಳು ಸಿಸಿಬಿ ಪೊಲೀಸರ ಮುಂದೆ ನೀಡಿದ್ದ ಹೇಳಿಕೆಗಳಿಗೆ ವ್ಯತ್ಯಾಸವಿದೆ. ಎನ್‌ಐಎ ತನಗೆ ಹೇಗೆ ಬೇಕೋ ಹಾಗೆ ಸಾಕ್ಷಿಗಳ ಹೇಳಿಕೆಗಳನ್ನು ತಿರುಚಿದೆ. ಲಭ್ಯವಿರುವ ಸಾಕ್ಷ್ಯಗಳ ಪ್ರಕಾರ ಆರೋಪಿಗಳು ದೊಂಬಿ ಅಥವಾ ಗಲಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಪ್ರತಿಪಾದಿಸಿದರು. ಇದಕ್ಕೆ ಪ್ರತಿಯಾಗಿ ಎನ್‌ಐಎ ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು ಯುಎಪಿಎ ಕಾಯಿದೆ ಸೆಕ್ಷನ್ ೪೩ಡಿ (೫)ರ ಅಡಿ ಪ್ರಕರಣದ ಡೈರಿ ಮತ್ತು ಅಂತಿಮ ವರದಿಯನ್ನು ಆಧರಿಸಿ ಆರೋಪಿಗಳ ಜಾಮೀನು ಅರ್ಜಿ ಕುರಿತು ನಿರ್ಧರಿಸಬಹುದು. ಮೇಲ್ನೋಟಕ್ಕೆ ಆರೋಪಿಗಳು ಭಯೋತ್ಪಾದನಾ ಕೃತ್ಯ ಎಸಗಲು ಮುಂದಾಗಿರುವುದು ದೃಢಪಟ್ಟಿದೆ.
ಅದು ಯುಎಪಿಎ ಕಾಯಿದೆ ಸೆಕ್ಷನ್ ೨(೧)(ಎ) ಮತ್ತು ಸೆಕ್ಷನ್ ೨(೧)(ಕೆ) ವ್ಯಾಪ್ತಿಗೆ ಒಳಪಡುತ್ತದೆ. ಜೊತೆಗೆ ಸೆಕ್ಷನ್ ೧೫ರ ಪ್ರಕಾರ ’ಭಯೋತ್ಪಾದನಾ ಕೃತ್ಯ’ ಎಸಗುವ ಉದ್ದೇಶದಿಂದಲೇ ಮಾರಕಾಸ್ತ್ರಗಳನ್ನು ಹೊಂದಿರುವುದು ಕಂಡುಬಂದಿದೆ. ಆದ್ದರಿಂದ ಆರೋಪಿಗಳಿಗೆ ಜಾಮೀನು ನೀಡಲು ತಮ್ಮ ವಿರೋಧವಿದೆಯೆಂದು ಹೇಳಿದ್ದರು. ಎರಡೂ ಕಡೆಯ ವಾದ ವಿವಾದ ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠವು ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿ ತೀರ್ಪು ನೀಡಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy