ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ. ಮುಂದುವರೆದಿದ್ದು ಕೃಷ್ಣಾನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಪ್ರವಾಹ ತಲೆದೋರಿದೆ. ಕಳೆದ 15 ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿದ್ದ ಮಳೆಯಿಂದ ಹೈರಾಣಾಗಿದ್ದ ಉತ್ತರ ಕರ್ನಾಟಕದ ಜನ ಈಗ ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ.
ಬೆಳಗಾವಿ, ಬಾಗಲಕೋಟೆ, ಗೋಕಾಕ್ ಸೇರಿದಂತೆ ವಿವಿಧೆಡೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊಲಗದ್ದೆಗಳು ಜಲಾವೃತಗೊಂಡು ಮಾರುಕಟ್ಟೆಗಳಿಗೆ ನೀರು ನುಗ್ಗಿದೆ.ಕಳೆದ ಪ್ರವಾಹ ಸಂಕಷ್ಟದಿಂದ ಇನ್ನೂ ಜನ ಚೇತರಿಸಿಕೊಂಡಿಲ್ಲ. ಈಗ ಪ್ರವಾಹ ಎದುರಾಗುತ್ತಿರುವುದು ಜನರನ್ನು ಮತ್ತಷ್ಟು ಭೀತಿಗೆ ತಳ್ಳಿದೆ. ಯಾದಗಿರಿ ಜಿಲ್ಲೆಯ ಭೀಮಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಭೀಮಾ ತೀರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಬ್ಯಾರೇಜ್‍ನಿಂದ 35 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಆಲಮಟ್ಟಿಯಲ್ಲಿರುವ ಅಣೆಕಟ್ಟಿಗೆ 1.86 ಲಕ್ಷ ಕ್ಯೂಸೆಕ್ಸ್ ನೀರು ಬರುತ್ತಿದ್ದು, 2.25 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.ಮಹಾರಾಷ್ಟ್ರದಿಂದ ಇನ್ನು ಹೆಚ್ಚಿನ ನೀರು ಬಂದರೆ ಬಹುತೇಕ ಗ್ರಾಮಗಳು ಮುಳುಗಡೆ ಎದುರಿಸಬೇಕಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ, ಬಾಗಲಕೊಟೆ, ಜಮಖಂಡಿ, ರಬಕವಿ, ಬನಹಟ್ಟಿ ಹಲವು ಗ್ರಾಮಗಳಿಗೆ ಮುಳುಗಡೆ ಭೀತಿ ಎದುರಾಗಿದೆ.
ಇತ್ತ ಕಾಫಿನಾಡು ಚಿಕ್ಕಮಗಳೂರಿನಲ್ಲೂ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಬೆಟ್ಟಗುಡ್ಡಗಳು ಕುಸಿಯುವ ಪ್ರಮಾಣ ಹೆಚ್ಚಾಗಿದೆ. ಹಲವೆಡೆ ಮನೆಗಳು ಕುಸಿದಿವೆ.ಧಾರಾಕಾರ ಮಳೆಯಿಂದ ಬೆಳೆ ಹಾನಿಯಾಗಿದೆ. ನಿರಂತರ ಮಳೆಯಿಂದ ಸಾಕಷ್ಟು ಬೆಳೆ ಹಾನಿಯಾಗಿ ಮನನೊಂದ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೆರೂರು ಗ್ರಾಮದಲ್ಲಿ ನಡೆದಿದೆ.
ಭಾರೀ ಮಳೆಗೆ ಕೆಮ್ಮಣ್ಣುಗುಂಡಿ ಸಮೀಪ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ. ಮಲೆನಾಡು ಭಾಗದಲ್ಲಿ ಹಲವೆಡೆ ಮಳೆಯ ಅಬ್ಬರ ಕಡಿಮೆಯಾದರೂ ಅನಾಹುತಗಳು ಮಾತ್ರ ಕಡಿಮೆಯಾಗಿಲ್ಲ. ಬೆಟ್ಟಗುಡ್ಡಗಳ ಕುಸಿತ, ರಸ್ತೆ ಸಂಪರ್ಕ ಕಡಿತ, ತೋಟಗಳ ಮಣ್ಣು ಜರುಗುವುದು ನಡೆಯುತ್ತಲೇ ಇದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy