ಹುಬ್ಬಳ್ಳಿ: ಮಹಿಳೆಯೊಬ್ಬರ ಕಣ್ಣಿನ ಕೆಳಗೆ ಸಿಲುಕಿದ್ದ ಮುರಿದ ಟೂತ್ ಬ್ರಶ್ ವೊಂದನ್ನು ಹೊರ ತೆಗೆಯುವಲ್ಲಿ ಹುಬ್ಬಳ್ಳಿ ಕಿಮ್ಸ್ ವೈದ್ಯರು ಯಶಸ್ವಿಯಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ 28 ವರ್ಷದ ಮಹಿಳೆಯ ಕಣ್ಣಿನಲ್ಲಿ ಮುರಿದ 7 ಇಂಚಿನ ಟೂತ್ ಬ್ರಶ್ ಕಣ್ಣಿನ ಕೆಳಗೆ ಸಿಲುಕಿತ್ತು.ಹಾವೇರಿ ಜಿಲ್ಲೆ ಹಾನಗಲ್ ಬಳಿಯ ಹಿರೂರು ಗ್ರಾಮದ ಗೃಹಿಣಿ ವಿನೋದಾ ತಳವಾರ (28) ಅವರ ನಾಲ್ಕು ವರ್ಷದ ಮಗಳು ಆಗಸ್ಟ್ 14 ರಂದು ಬೆಳಗ್ಗೆ ಹಲ್ಲು ಉಜ್ಜುವಾಗ ಇದ್ದಕ್ಕಿದ್ದಂತೆ ಟೂತ್ ಬ್ರಶ್, ಆಕೆಯ ತಾಯಿಯ ಎಡಗಣ್ಣಿನ ಕೆಳಗೆ ಸಿಲುಕಿದೆ.
ನಂತರ ಕುಟುಂಬ ಸದಸ್ಯರು ಅದನ್ನು ತೆಗೆಯಲು ಪ್ರಯತ್ನಿಸಿದಾಗ ಮುರಿದಿದೆ.ಕೂಡಲೇ ಅವರು ಮಹಿಳೆಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ರೋಗಿಯನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲು ಶಿಫಾರಸು ಮಾಡಿದ್ದಾರೆ.
ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಮುಖದ ಸಿಟಿ ಸ್ಕ್ಯಾನ್, ಸಿಟಿ ಆಂಜಿಯೋಗ್ರಾಮ್ ಮಾಡಿದಾಗ ಕಣ್ಣಿನ ಕೆಳಗೆ ಬ್ರಶ್ ಸಿಲುಕಿರುವುದು ತಿಳಿದುಬಂದಿದೆ.ಸ್ಕ್ಯಾನ್ ವರದಿ ತನಿಖೆ ವೇಳೆ ಎಡಗಣ್ಣು ಸಂಪೂರ್ಣವಾಗಿ ಹಾನಿಯಾಗಿರುವುದು ಕಂಡುಬಂದಿತ್ತು.
ನಂತರ ನೇತ್ರಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಡಾ. ಮಂಜುನಾಥ್ ವಿಜಯಪುರ, ಡಾ. ವಸಂತ್ ಕಟ್ಟಿಮನಿ, ಡಾ. ಅನುರಾಧ ನಾಗನಗೌಡರ್, ಡಾ. ಸ್ಫೂರ್ತಿ ಶೆಟ್ಟಿ ಮತ್ತು ಅರವಳಿಕೆ ಮತ್ತು ನೇತ್ರಶಾಸ್ತ್ರ ವಿಭಾಗದ ಸಿಬ್ಬಂದಿಯ ನೆರವಿನಿಂದ ಶಸ್ತ್ರ ಚಿಕಿತ್ಸೆ ನಡೆಸಿ, 7 ಸೆಂಟಿ ಮೀಟರ್ ನಷ್ಟು ಉದ್ದದ ಮುರಿದು ಟೂತ್ ಬ್ರಶ್ ಚೂರೊಂದನ್ನು ಹೊರತೆಗೆಯಲಾಗಿದೆ.
ಶಸ್ತ್ರ ಚಿಕಿತ್ಸೆ ನಂತರ ರೋಗಿ ಆರೋಗ್ಯವಾಗಿದ್ದು, ಮೂರ್ನಾಲ್ಕು ದಿನಗಳಲ್ಲಿ ಅವರನ್ನು ಮನೆಗೆ ಕಳುಹಿಸಲಾಗುವುದು ಎಂದು ಕಿಮ್ಸ್ ಆಸ್ಪತ್ರೆಯ ವೈದ್ಯ ಡಾ. ಮಂಜುನಾಥ್ ವಿಜಯಪುರ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


