ಅಹಮದಾಬಾದ್ ಸೆಪ್ಟೆಂಬರ್ 3: ಗುಜರಾತ್ ಭೇಟಿಯ ಅಂತಿಮ ದಿನವಾದ ಇಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಕೇಸರಿ ಪಕ್ಷವನ್ನು ತೊರೆಯದೆ ‘ಒಳಗಿನಿಂದ’ ತಮ್ಮ ಪಕ್ಷಕ್ಕಾಗಿ ಕೆಲಸ ಮಾಡುವಂತೆ ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಬಿಜೆಪಿಯ ಭದ್ರಕೋಟೆಯಾದ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಹಾಗೂ ಎಎಪಿ ಭರ್ಜರಿ ಸಿದ್ಧತೆ ನಡೆದಿವೆ. ಅದರಲ್ಲೂ ಆಡಳಿತ ಪಕ್ಷಕ್ಕೆ ಆಮ್ ಆದ್ಮಿ ಪಕ್ಷ ನೇರ ಪೈಪೋಟಿ ನಡೆಸಲಿದೆ. ಈಗಾಗಲೇ ಎಎಪಿಯ ನಾಯಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗುಜರಾತ್‌ನಲ್ಲಿ ಮತಭೇಟೆಯನ್ನು ಆರಂಭಿಸಿದ್ದಾರೆ. ಹಲವಾರು ಭರವಸೆಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಗುಜರಾತ್ ಭೇಟಿಯ ಎರಡನೇ ದಿನವಾದ ಇಂದು ಅರವಿಂದ್ ಕೇಜ್ರಿವಾಲ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರು ಬಿಜೆಪಿಯಿಂದ “ಹಣ” ಪಡೆಯುವುದನ್ನು ಮುಂದುವರಿಸಬೇಕು. ಆದರೆ ಆಪ್‌ಗಾಗಿ “ಒಳಗಿನಿಂದ” ಕೆಲಸ ಮಾಡಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು. ಜೊತೆಗೆ ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ಬಿಜೆಪಿ ಕಾರ್ಯಕರ್ತರು ಜನರಿಗೆ ಭರವಸೆ ನೀಡುವ ಎಲ್ಲಾ “ಖಾತರಿ” ಗಳಿಂದ ಪ್ರಯೋಜನ ಪಡೆಯುತ್ತಾರೆ ಎಂದು ಅವರು ಹೇಳಿದರು.
ಗುಜರಾತ್‌ನಲ್ಲಿ ಕೇಜ್ರಿವಾಲ್ ಮಹತ್ವದ ಹೇಳಿಕೆ
“ನಮಗೆ ಬಿಜೆಪಿ ನಾಯಕರು ಬೇಡ, ಬಿಜೆಪಿ ತನ್ನ ನಾಯಕರನ್ನು ಉಳಿಸಿಕೊಳ್ಳಬಹುದು. ಬಿಜೆಪಿಯ ‘ಪನ್ನಾ ಪ್ರಮುಖರು’, ಗ್ರಾಮಗಳು, ಬೂತ್‌ಗಳು ಮತ್ತು ತಾಲೂಕುಗಳಲ್ಲಿ ಕಾರ್ಯಕರ್ತರು ಗುಂಪು ಗುಂಪಾಗಿ ನಮ್ಮೊಂದಿಗೆ ಸೇರುತ್ತಿದ್ದಾರೆ, ಅವರ ಸೇವೆಗೆ ಪ್ರತಿಯಾಗಿ ಬಿಜೆಪಿ ಏನು ನೀಡಿದೆ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ” ಎಂದು ಎಎಪಿ ರಾಷ್ಟ್ರೀಯ ಸಂಚಾಲಕರು ಕೇಳಿದ್ದಾರೆ.
“ನೀವು (ಬಿಜೆಪಿ ಕಾರ್ಯಕರ್ತರು) ಆ ಪಕ್ಷದಲ್ಲಿ ಉಳಿಯಬಹುದು. ಆದರೆ ಎಎಪಿಗಾಗಿ ಕೆಲಸ ಮಾಡಬಹುದು. ಅವರಲ್ಲಿ ಅನೇಕರು (ಬಿಜೆಪಿಯಿಂದ) ಹಣ ಪಡೆಯುತ್ತಾರೆ. ಆದ್ದರಿಂದ ಅಲ್ಲಿಂದ ಪಾವತಿಯನ್ನು ತೆಗೆದುಕೊಳ್ಳಿ ಆದರೆ ನಮಗಾಗಿ ಕೆಲಸ ಮಾಡಿ, ಏಕೆಂದರೆ ನಮ್ಮಲ್ಲಿ ಹಣವಿಲ್ಲ” ಎಂದು ಅವರು ಹೇಳಿದರು.
ಉಚಿತ ವಿದ್ಯುತ್ ಭರವಸೆ
ಕೇಜ್ರಿವಾಲ್ ಅವರು ಉತ್ತಮ ಗುಣಮಟ್ಟದ ಶಿಕ್ಷಣ, ಆರೋಗ್ಯ ಮತ್ತು ಉಚಿತ ವಿದ್ಯುತ್ ಭರವಸೆ ನೀಡಿದ್ದಾರೆ. ಬಿಜೆಪಿಯು ಅವರ ಕಾರ್ಯಕರ್ತರು ಮತ್ತು ಅವರ ಕುಟುಂಬಗಳಿಗೆ ಈ ಸೌಲಭ್ಯಗಳನ್ನು ಒದಗಿಸಿಲ್ಲ, ಆದರೆ ಎಎಪಿ ಮಾಡುತ್ತದೆ ಎಂದು ಹೇಳಿದರು.
“ನಾವು ಸರ್ಕಾರ ರಚಿಸಿದರೆ, ನಾವು ಉಚಿತ ವಿದ್ಯುತ್ ನೀಡುತ್ತೇವೆ ಮತ್ತು ಇದು ನಿಮ್ಮ ಮನೆಗಳನ್ನು ಬೆಳಗಿಸುತ್ತದೆ. ನಾವು ನಿಮಗೆ ಉಚಿತ 24 ಗಂಟೆಗಳ ವಿದ್ಯುತ್ ನೀಡುತ್ತೇವೆ ಮತ್ತು ನಿಮ್ಮ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಪಡೆಯುವಲ್ಲಿ ಉತ್ತಮ ಶಾಲೆಗಳನ್ನು ನಿರ್ಮಿಸುತ್ತೇವೆ. ನಿಮ್ಮ ಕುಟುಂಬದ ಸದಸ್ಯರಿಗೆ ಉಚಿತ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತೇವೆ ಮತ್ತು ನಿಮ್ಮ ಕುಟುಂಬದಲ್ಲಿನ ಮಹಿಳೆಯರಿಗೆ 1,000 ರೂ. ಭತ್ಯೆ ನೀಡುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ಭರವಸೆಗಳ ಸುರಿ ಮಳೆ ಸುರಿದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy