ಇನ್ನೆರಡು ವರ್ಷದಲ್ಲಿ ಮೈಸೂರು ವಿವಿ ವ್ಯಾಪ್ತಿಗೆ ಒಳಪಡುವ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿರುವ ತಾಳೆಗರಿ ಹಾಗೂ ಹಸ್ತಪ್ರತಿಗೆ ಡಿಜಿಟಲ್ ಸ್ಪರ್ಶ ಸಿಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯ ಮತ್ತು ದಿ ಮಿಥಿಕ್ ಸೊಸೈಟಿ ಸಹಯೋಗದೊಂದಿಗೆ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ನಡೆದ ಹಸ್ತಪ್ರತಿ ಸಂರಕ್ಷಣಾ ಮತ್ತು ಪ್ರಧೂಮೀಕರಣ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ನಮ್ಮ ಪ್ರಾಚೀನ ಪರಂಪರೆ ಹಾಗೂ ಜ್ಞಾನ ಭಂಡಾರವನ್ನು ಹಿರಿಯರು ತಾಳೆಗರಿಯಲ್ಲಿ ಸಂಗ್ರಹಿಸಿದ್ದಾರೆ. ತಾಳೆಗರಿಯಲ್ಲಿ ಸಾಧಕರ ಬಗ್ಗೆ ಮಾಹಿತಿ ಇದೆ. ಇದು ಸಂರಕ್ಷಣೆ ಆಗಬೇಕು. ಇದರ ಪ್ರಯೋಜನ ಮುಂದಿನ ಪೀಳಿಗೆಗೆ ಸಿಗಬೇಕೆಂಬ ಉದ್ದೇಶದಿಂದ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಡಿಜಿಟಲೀಕರಣ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಐದು ತಿಂಗಳ ಕೆಲಸ ಮುಗಿದಿದೆ. ಇನ್ನೆರಡು ವರ್ಷದಲ್ಲಿ ತಾಳೆಗರಿ ಮತ್ತು ಹಸ್ತಪ್ರತಿ ಸಂಪೂರ್ಣ ಡಿಜಿಟಲ್ ಆಗಲಿದೆ ಎಂದು ತಿಳಿಸಿದರು.
ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಜ್ಞಾನದ ಸಂಪನ್ಮೂಲ ತಾಳೆಗರಿ. ಮೈಸೂರು ವಿವಿ ಜಗತ್ತಿಗೆ ಜ್ಞಾನದ ದಾಸೋಹ ಕೊಟ್ಟಿದೆ. ಮೈಸೂರು ವಿವಿ ಶುರುವಾಗುವ ಮುನ್ನ ಪ್ರಾಚ್ಯ ವಸ್ತುಸಂಗ್ರಹಾಲಯ ಕೇಂದ್ರ ಶುರುವಾಗಿತ್ತು. ಇಲ್ಲಿಂದಲೇ ಜ್ಞಾನ ಸಂಪನ್ಮೂಲ ಹಂಚಿಕೆ ಆಯಿತು. ಹೀಗಾಗಿ ಮೈಸೂರು ಸಂಸ್ಥಾನ ವಿಶ್ವದಲ್ಲೇ ಗಮನ ಸೆಳೆದಿದೆ. ನಾವು ಸಮಾಜದ ಅಭಿವೃದ್ಧಿಗೆ ಮರಳಿಕೊಡುವ ಕೆಲಸವನ್ನು ಮಾಡಬೇಕು.ಈ ನಿಟ್ಟಿನಲ್ಲಿ ಇದೊಂದು ಉತ್ತಮ ಕಾರ್ಯ ಎಂದರು.
ಮೈಸೂರು ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ 16 ಸಾವಿರ ತಾಳೆಗರಿ, ಐದು ಸಾವಿರ ಹಸ್ತಪ್ರತಿ ಇವೆ. ಇವೆಲ್ಲದಕ್ಕೂ ಡಿಜಿಟಲ್ ಸ್ಪರ್ಶ ಸಿಗುಲಿದೆ. ಮುಂದಿನ ಪೀಳಿಗೆಗೆ ಇದು ಲಭ್ಯವಾಗಲಿದೆ. ಸಂಶೋಧನಾ ವಿದ್ಯಾರ್ಥಿಗಳಿಗೂ ಇದರಿಂದ ಅನುಕೂಲವಾಗಲಿದೆ. 21 ನೇ ಶತಮಾನ ಜ್ಞಾನವನ್ನೇ ಅವಲಂಬಿಸಿದೆ. ಜ್ಞಾನಕ್ಕೆ ಪೂರಕವಾದ ಕೆಲಸಕ್ಕೆ ಹಸ್ತಪ್ರತಿ ಗಳೇ ಆಧಾರ. ಹಾಗೆ ದ್ವೇಷ, ವೈಷಮ್ಯಕ್ಕೆ ಜ್ಞಾನವೇ ಪರಿಹಾರ. ಜ್ಞಾನ ಧಾರೆ ಹೆಚ್ಚಿಸುವ ಕೆಲಸ ಇದು ಎಂದು ಶ್ಲಾಘಿಸಿದರು.
ಜನಸಂಖ್ಯೆ ಗೆ ಅನುಗುಣವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿಲಾಗಿದೆ. ಸ್ವಾತಂತ್ರ್ಯ ಬಂದ ಮೇಲೆ ಅನುಷ್ಠಾನಕ್ಕೆ ತರುತ್ತಿರುವ ಮೂರನೇ ಶಿಕ್ಷಣ ನೀತಿ ಇದು. ಜ್ಞಾನದ ಜೊತೆಗೆ ಕೌಶಲ್ಯ ವೃದ್ದಿಗೂ ಇದು ಅವಕಾಶ ಮಾಡಿಕೊಟ್ಟಿದೆ. ಇದೊಂದು ಅತ್ಯುನ್ನತ ಶಿಕ್ಷಣ ನೀತಿ ಎಂದು ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಸಿಎಂ ಸಲಹೆಗಾರರಾದ ಬೇಳೂರು ಸುದರ್ಶನ್, ಮಿಥಿಕ್ ಸೊಸೈಟಿ ಗೌ.ಕಾರ್ಯದರ್ಶಿ ವಿ. ನಾಗರಾಜ್, ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ರಾಮಪ್ರಿಯ ಸೇರಿದಂತೆ ಇತರರು ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


