ಬೆಂಗಳೂರು.ಅ.1 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿಗೊಳಿಸಲು ವಿಳಂಬ ಮಾಡುತ್ತಿರುವ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಹರಿಹಾಯ್ದಿತು. ಅಲ್ಲದೆ, ಒತ್ತುವರಿಗಳನ್ನು ತೆರವುಗೊಳಿಸದೇ ಹೋದಲ್ಲಿ ಪಾಲಿಕೆಯ ಮುಖ್ಯ ಆಯುಕ್ತರ ವಿರುದ್ಧ ಸೂಕ್ತ ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್ ವಾರ್ನಿಂಗ್ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧ ಕೋರಮಂಗಲದ ವಿಜಯ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯಪೀಠ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತು.
ಅಲ್ಲದೆ ‘ ಒಂದೂ ರಸ್ತೆ ಗುಂಡಿ ಮುಚ್ಚಿಲ್ಲ, ರಸ್ತೆ ಗುಂಡಿಗಳನ್ನು ತುಂಬುವ ಕಾಮಗಾರಿಯೂ ಸಮರ್ಪಕವಾಗಿಲ್ಲ. ಈ ರಸ್ತೆಗಳು ವಾಹನ ಸವಾರರಿಗೆ ಬಲು ಕಷ್ಟಕರವಾಗಿ ಪರಿಣಮಿಸಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿ ವಿಚಾರಣೆಯನ್ನು ಅ, 27ಕ್ಕೆ ಮುಂದೂಡಿತು.
ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸಿ, 2022ರ ಸೆಪ್ಟೆಂಬರ್ 19ರಿಂದ ಈವರೆಗೆ 10 ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 592 ಅತಿಕ್ರಮಣ ತೆರವುಗೊಳಿಸಬೇಕಾಗಿದ್ದು, ಅದಕ್ಕೆ ಸ್ವಲ್ಪ ಸಮಯಾವಕಾಶ ನೀಡಬೇಕೆಂದು ಕೋರಿದರು.
ದಾಖಲೆ ಪರಿಶೀಲಿಸಿದ ನ್ಯಾಯಪೀಠ, ವರದಿಯಲ್ಲಿ ಮೇಲ್ನೋಟಕ್ಕೆ ಏನೂ ಪ್ರಗತಿ ಕಾಣುತ್ತಿಲ್ಲ. ಈ ವಿಷಯದಲ್ಲಿ ಬಿಬಿಎಂಪಿ ತನ್ನ ಪ್ರಗತಿಯನ್ನು ತೋರಿಸದೇ ಹೋದಲ್ಲಿ ಎಂಜಿನಿಯರ್‌ಗಳ ವೇತನ ತಡೆ ಹಿಡಿಯಲು ಆದೇಶಿಸಬೇಕಾಗುತ್ತದೆ’ ಎಂದು ಮೌಖಿಕ ಎಚ್ಚರಿಕೆ ನೀಡಿತು.ಪಾಲಿಕೆ ಸಲ್ಲಿಸಿರುವ ವರದಿಯಲ್ಲಿ, ‘ನಗರದ ಪ್ರಮುಖ ರಸ್ತೆಗಳಲ್ಲಿನ 221 ಗುಂಡಿಗಳನ್ನು ಹಾಟ್ ಮಿಕ್ಸ್ ಬಳಸಿ ತುಂಬಲಾಗಿದೆ. ಮಹದೇವಪುರ ವಲಯದ 324 ಕಿ.ಮೀ ರಸ್ತೆಗಳನ್ನು ಮರು ಡಾಂಬರೀಕರಣ ಮಾಡಲಾಗುತ್ತಿದ್ದು, 427 ಕಿ.ಮೀ ಉದ್ದದ ರಸ್ತೆಗಳ ಮರು ಡಾಂಬರೀಕರಣ ಪ್ರಾರಂಭಿಸಲಾಗಿದೆ ಎಂದು ಹೇಳಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


