ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಕಳೆದ ತಿಂಗಳ ಹಿಂದೆ ಸುರಿದ ಮಳೆಯಿಂದ ಬೆಳೆ ಹಾನಿಯಾಗಿದ್ದು, ೀ ಹಿನ್ನೆಲೆಯಲ್ಲಿ ಸರ್ಕಾರದಿಂದ ವಿತರಿಸುತ್ತಿರುವ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಭಾರೀ ತಾರತಮ್ಯ ಮಾಡಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಹಾಗೂ ತಾಲ್ಲೂಕು ರೈತಸಂಘದ ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್ ಆರೋಪಿಸಿದ್ದಾರೆ.
ಜಿಲ್ಲೆಯ ಹಿರಿಯೂರು ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶಾಸಕಿ ಪೂರ್ಣಿಮಾಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳೆ ಪರಿಹಾರ ವಿತರಿಸುವಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ವಿಫಲವಾಗಿವೆ ಎಂದು ಆರೋಪಿಸಿದರು.
ತಾಲ್ಲೂಕಿನ ದೇವರಕೊಟ್ಟ ಗ್ರಾಮದ ತಿಪ್ಪೇಸ್ವಾಮಿ ಎಂಬುವವರಿಗೆ ಸೇರಿದ 5 ಎಕರೆ ಶೇಂಗಾ ಬೆಳೆ ಹಾನಿಗೊಳಗಾಗಿದ್ದು, ಎಕರೆಗೆ 2 ಸಾವಿರದಂತೆ 10 ಸಾವಿರ ಪರಿಹಾರ ಬಂದಿದೆ. ಅದೇ ಮಸ್ಕಲ್ ಗ್ರಾಮದ ನಾಗರಾಜ ಎಂಬುವವರಿಗೆ ಸೇರಿದ 5 ಎಕರೆ ಬೆಳೆಹಾನಿಗೆ ಕೇವಲ 2 ಸಾವಿರ ರೂಗಳ ಪರಿಹಾರ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದರು.
ಮಸ್ಕಲ್ ಗ್ರಾಮದ ಓಬಣ್ಣ ಮತ್ತು ತೇರುಮಲ್ಲಪ್ಪ ಎಂಬುವವರ 1 ಎಕರೆ ಶೇಂಗಾ ಬೆಳೆಹಾನಿಗೆ 5 ಸಾವಿರ ಹಣ ಬಂದಿದೆ, ನಾರಾಯಣ ಸ್ವಾಮಿ ಎಂಬುವವರಿಗೆ 1 ಎಕರೆ ಬೆಳೆಹಾನಿಗೆ 2 ಸಾವಿರ ಹಣ ಬಂದಿದೆ. ಅಲ್ಲದೆ ಅದೇ ಗ್ರಾಮದ ಹನುಮಕ್ಕ ಬಿನ್ ಪಾತಲಿಂಗಪ್ಪ 2 ಎಕರೆ ಬೆಳೆಹಾನಿಯಾಗಿದ್ದು ಹಾಗೂ ಭೀಮಣ್ಣ ಎಂಬುವವರ 11 ಎಕರೆ ಶೇಂಗಾ ಬೆಳೆನಾಶವಾಗಿದ್ದು, ಯಾವುದೇ ಪರಿಹಾರ ಬಂದಿಲ್ಲ ಎಂದರು.
ತಾಲ್ಲೂಕಿನ ಕಂದಾಯ ಇಲಾಖೆಯವರು ಯಾವ ಆಧಾರದ ಮೇಲೆ ಬೆಳೆಹಾನಿಗೊಳಗಾದ ರೈತರಿಗೆ ಈ ಬೆಳೆಪರಿಹಾರ ವಿತರಿಸಿದ್ದಾರೆ? ಕೃಷಿ ಹಾಗೂ ತೋಟಗಾರಿಕೆ ಇಲಾಖೆಯವರು ಬೆಳೆಹಾನಿ ಸರ್ವೇ ಮಾಡಲು ಯಾವ ಮಾನದಂಡ ಅನುಸರಿಸಿದ್ದಾರೆ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬೆಳೆಪರಿಹಾರ ದಾಖಲಾತಿಯಲ್ಲಿ ಸಹ ಭಾರೀ ಅನ್ಯಾಯ-ಅಕ್ರಮಗಳು ನಡೆದಿದ್ದು, ಕೈತುಂಬ ಹಣ ಕೊಟ್ಟವರಿಗೆ ಕೆಲವು ಗ್ರಾಮಲೆಕ್ಕಾಧಿಕಾರಿಗಳು ಬೆಳೆಹಾನಿ ದಾಖಲಿಸಿದ್ದು, ಆದರೆ ಅವರು ಕೇಳಿದಷ್ಟು ಹಣ ನೀಡದ ರೈತರಿಗೆ ಸರಿಯಾಗಿ ಬೆಳೆಪರಿಹಾರ ದಾಖಲಿಸದೇ, ಅನ್ಯಾಯವೆಸಗಲಾಗಿದೆ. ಈ ಬಗ್ಗೆ ರೈತರು ಪೋನ್ ಮಾಡಿದರೆ ಗ್ರಾಮಲೆಕ್ಕಾಧಿಕಾರಿಗಳು ಕರೆ ಸ್ವೀಕರಿಸುತ್ತಿಲ್ಲ ಎಂದರು.
ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಈ ಕೂಡಲೇ ತಾಲ್ಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿ ಪ್ರಶಾಂತ ಕೆ. ಪಾಟೀಲ ಅವರು ಹಾಗೂ ಕ್ಷೇತ್ರದ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ರವರು ಈ ಕಡೆ ಗಮನ ಹರಿಸಿ, ಅತಿವೃಷ್ಟಿಯಿಂದ ಹಾನಿಗೊಳಗಾದ ಎಲ್ಲಾ ರೈತರಿಗೆ ಸೂಕ್ತಪರಿಹಾರ ನೀಡಿ, ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಈ ಅನ್ಯಾಯದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


