ಕೆಲವೇ ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ವೈದ್ಯ ದಂಪತಿ ಕರೆಂಟ್ ಶಾಕ್ ಹೊಡೆದು ಮೃತಪಟ್ಟ ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ಸಂಭವಿಸಿದೆ.
ಬಾತ್ ರೂಮ್ ಗೀಸರ್ ಗೆ ವಯರ್ ಕನೆಕ್ಷನ್ ತಪ್ಪಾಗಿ ನೀಡಿದ್ದರಿಂದ ಈ ದುರಂತ ಸಂಭವಿಸಿದೆ. ಖಾದೇರ್ ಭಾಗ್ ಪ್ರದೇಶದಲ್ಲಿರುವ ಮನೆಯಲ್ಲಿ ಶುಕ್ರವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದ್ದು, 26 ವರ್ಷದ ಡಾ. ಸೈಯ್ಯದ್ ನಿಸಾರುದ್ದೀನ್ ಮತ್ತು 22 ವರ್ಷದ ಪತ್ನಿ ಸೈಮಾ ಇಬ್ಬರೂ ಮೃತಪಟ್ಟಿದ್ದಾರೆ.
ಇಂಟರ್ನಿ ಆಗಿ ಕೆಲಸ ಮಾಡುತ್ತಿದ್ದ ಸೈಯ್ಯದ್ ಸೂರ್ಯಪೇಟ್ ನಿಂದ ಬುಧವಾರ ರಾತ್ರಿಯಷ್ಟೇ ಹಿಂತಿರುಗಿದ್ದರು. ಶುಕ್ರವಾರ ಬೆಳಿಗ್ಗೆ ಸೈಮಾ ಅವರ ಕುಟುಂಬಸ್ಥರು ಮನೆಗೆ ತೆರಳಿದಾಗ ಏನೋ ಅನಾಹುತ ಸಂಭವಿಸಿದೆ ಎಂದು ಅನುಮಾನದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮನೆಯೊಳಗೆ ಪ್ರವೇಶಿಸಿದ ದಂಪತಿ ಶವ ಕಂಡು ಹೌಹಾರಿದ್ದಾರೆ.
ದಂಪತಿ ಗುರುವಾರ ಬೆಳಿಗ್ಗೆಯೇ ಮೃತಪಟ್ಟಿದ್ದು, ಯಾರಿಗೂ ಮಾಹಿತಿ ಲಭ್ಯವಾಗಿಲ್ಲ. ಗುರುವಾರ ಬೆಳಿಗ್ಗೆ ತಂದೆ ಕರೆ ಮಾಡಿದಾಗ ಆಮೇಲೆ ಮಾಡುವುದಾಗಿ ಸೈಮಾ ಹೇಳಿದ್ದರು. ಆದರೆ ನಂತರ ಯಾರೂ ಕರೆ ಸ್ವೀಕರಿಸದೇ ಇದ್ದಿದ್ದರಿಂದ ಅನುಮಾನಗೊಂಡು ಶುಕ್ರವಾರ ಬೆಳಿಗ್ಗೆ ಸೈಮಾ ಕುಟುಂಬದವರು ಬಂದಿದ್ದಾರೆ.
ಮೂಲಗಳ ಪ್ರಕಾರ ಸೈಮಾಗೆ ಕರೆಂಟ್ ಹೊಡೆದಿದ್ದು, ಪತ್ನಿಯನ್ನು ರಕ್ಷಿಸಲು ಹೋಗಿ ಪತಿ ಕೂಡ ಮೃತಪಟ್ಟಿದ್ದಾರೆ. ಸೈಮಾ ಇನ್ನೂ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz