ತುಮಕೂರು ಜಿಲ್ಲೆಯಾದ್ಯಾಂತ ಮನೆಮಾತಾಗಿರುವ ಕರ್ನಾಟಕ ಜನತೆಯಿಂದ ಮೆಚ್ಚುಗೆ ಪಡೆದಿರುವ ನಮ್ಮ ತುಮಕೂರು ಚಾನಲ್ ಗೆ ಪ್ರಥಮ ವಸಂತವನ್ನು ಪೂರೈಸಿ 2ನೇ ವಸಂತಕ್ಕೆ ಕಾಲಿಡುತ್ತಿದೆ. ನಮ್ಮ ತುಮಕೂರು ನವೆಂಬರ್ 1, 2021ರಲ್ಲಿ ತನ್ನ ವೆಬ್’ಸೈಟ್ www.nammatumakuru.com ಅನ್ನು ಲೋಕಾರ್ಪಣೆ ಮಾಡಿತು. ನಟರಾಜ್ ಜಿ.ಎಲ್. ಸಾರಥ್ಯದಲ್ಲಿ ಪ್ರಾರಂಭವಾದ ನಮ್ಮ ತುಮಕೂರು ವೆಬ್’ಸೈಟ್ ತುಮಕೂರಿನಾದ್ಯಂತ ನಡೆಯುವ ಸುದ್ದಿಗಳನ್ನು ಓದುಗರಿಗೆ ತಲುಪಿಸಲು ಕಾರ್ಯಪ್ರವೃತವಾಯಿತು. ಜನವರಿ 1, 2022ರಿಂದ ನಮ್ಮ ತುಮಕೂರು ಯೂಟ್ಯೂಬ್ ಚಾನಲ್ ಅನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು ಮತ್ತು ನಮ್ಮ ತುಮಕೂರು.ಕಾಂ ಸ್ಲೇಷ್ ಲೈವ್ ಲಿಂಕ್ ಮೂಲಕ ದಿನದ 24 ಗಂಟೆ ಲೈವ್ ನ್ಯೂಸ್ ನೋಡಲು ನಮ್ಮ ತುಮಕೂರು ಲೈವ್ ಅನ್ನು ಪ್ರಾರಂಭಿಸಲಾಯಿತು. ಹೀಗೆ ಹಲವು ಹೊಸತನವನ್ನು ಕನ್ನಡಿಗರಿಗೆ ನೀಡುವ ಉದ್ದೇಶದಿಂದ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ನಮ್ಮ ತುಮಕೂರು ಮುಂದೆ ಸಾಗುತ್ತಿದೆ.
ನಮ್ಮ ತುಮಕೂರು ಚಾನೆಲ್ ಕೇವಲ ತುಮಕೂರಿನಲ್ಲಿ ನಡೆಯುವ ಸುದ್ದಿಗಳಿಗೆ ಸೀಮಿತವಾಗಿರದೆ ರಾಜ್ಯ, ದೇಶ , ಅಂತರಾಷ್ಟ್ರೀಯ ಸುದ್ದಿಗಳು ಮತ್ತು ಆರೋಗ್ಯ, ವೈರಲ್ ಸುದ್ದಿಗಳನ್ನು ತನ್ನ ವೆಬ್’ಸೈಟ್ ಹಾಗೂ ಯೂಟ್ಯೂಬ್ ಮೂಲಕ ಜನರಿಗೆ ತಲುಪಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಶೇಷ ಕಾರ್ಯಕ್ರಮಗಳನ್ನು ನೀಡಲು ಮಾಧ್ಯಮ ಚಿಂತನೆ ನಡೆಸಿದೆ.
ನಮ್ಮತುಮಕೂರು ಮಾಧ್ಯಮವು ಒಂದು ಜನ ಸ್ನೇಹಿ ಮಾಧ್ಯಮವಾಗಿ ಮುನ್ನಡೆಯುತ್ತಿದೆ. ಕಳೆದ ಒಂದು ವರ್ಷಗಳಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಮಾಧ್ಯಮವು, ನೊಂದ ಜನರ ಪರವಾಗಿ ನಿಂತು ಕೆಲಸ ಮಾಡುತ್ತಿದೆ. ಮಾಧ್ಯಮವು ಜನರ ಸಮಸ್ಯೆಗಳ ಕುರಿತಾಗಿ ಮಾಡುವ ಪ್ರತಿಯೊಂದು ವರದಿಗೂ ಉತ್ತಮ ಫಲಿತಾಂಶ ಲಭಿಸಿದೆ. ನಮ್ಮತುಮಕೂರು ಮಾಧ್ಯಮವನ್ನು ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಗಮನಿಸುತ್ತಿದ್ದಾರೆ. ಸಮಸ್ಯೆಗಳ ಕುರಿತು ಪ್ರಕಟವಾಗುವ ಸುದ್ದಿಗಳಿಗೆ ಶೀಘ್ರವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಾಧ್ಯಮದ ಕುರಿತಾಗಿ ಓದುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೆಚ್ಚುಗೆಗಳು ನಮ್ಮತುಮಕೂರು ಮಾಧ್ಯಮಕ್ಕೆ ಸಾರ್ಥಕತೆಯ ಅನುಭವವನ್ನು ತಂದಿದೆ.
ಕೆಲವೊಂದು ಜನರು ನಮ್ಮತುಮಕೂರು ಮಾಧ್ಯಮಕ್ಕೆ ಏನು ಲಾಭ ಇದೆ? ಎಂಬ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಆದರೆ ನಮ್ಮತುಮಕೂರು ಮಾಧ್ಯಮವು ಸಾಮಾಜಿಕ ಬದಲಾವಣೆಯ ಲಾಭವನ್ನು ಮಾತ್ರವೇ ಬಯಸುತ್ತದೆ. ಸಾಮಾಜಿಕ ಬದಲಾವಣೆಯ ವಿಚಾರದಲ್ಲಿ ನಮ್ಮತುಮಕೂರು ಮಾಧ್ಯಮ ಲಾಭದಲ್ಲಿದೆ. ಯಾಕೆಂದರೆ, ಮಾಧ್ಯಮ ಆರಂಭಗೊಂಡು ಒಂದು ವರ್ಷಗೊಳಗೆ ಹಲವಾರು ಫಲಶ್ರುತಿಗಳು ಬಂದಿವೆ. ನೊಂದ ಜನರಿಗೆ ನಮ್ಮತುಮಕೂರು ಮಾಧ್ಯಮದ ಮೂಲಕ ಸಮಸ್ಯೆಗಳಿಗೆ ಪರಿಹಾರ ದೊರಕಿದಾಗ ಕಣ್ತುಂಬಿಕೊಂಡು, ನಮಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದು ಮಾಧ್ಯಮಕ್ಕೆ ಹೆಮ್ಮೆಯ ವಿಚಾರವಾಗಿದೆ.
ಒಂದು ವರ್ಷಗಳ ಕಾಲ ಮಾಧ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಲು ಸಹಕರಿಸಿದ ನಮ್ಮ ವರದಿಗಾರರಿಗೆ, ಏಜೆಂಟರಿಗೆ, ಸಾಹಿತಿಗಳು, ಲೇಖಕರಿಗೆ, ಟೆಕ್ನಿಕಲ್ ಟೀಮ್ ಗೆ ಹಾಗೂ ಮಾರ್ಗದರ್ಶಕರಿಗೆ ಈ ಸಂದರ್ಭದಲ್ಲಿ ನಾವು ವಿಶೇಷವಾದ ಧನ್ಯವಾದಗಳನ್ನು ಹೇಳುತ್ತೇವೆ. ಅದರಲ್ಲೂ ನಮ್ಮ ಯಾವುದೇ ಆಮಿಷಕ್ಕೆ ಒಳಗಾಗದೇ ಹೇಗೆ ಸಮಾಜದ ಪರವಾಗಿರಬೇಕು ಅನ್ನೋದನ್ನು ತೋರಿಸುವಂತಹ ಮಾದರಿ ಪತ್ರಕರ್ತರು ನಮ್ಮತುಮಕೂರು ಮಾಧ್ಯಮದಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ.
ಒಂದು ವರ್ಷಗಳ ಈ ಕಠಿಣ ಪ್ರಯಾಣದಲ್ಲಿ ನಮ್ಮತುಮಕೂರು ಮಾಧ್ಯಮವು ತನ್ನ ಸ್ವಂತ ಶಕ್ತಿಯಿಂದ ಮುನ್ನಡೆದಿದೆ. ಇಂತಹ ಸಂದರ್ಭದಲ್ಲಿ ಸಮಾಜದ ಹಲವು ಸಮಸ್ಯೆಗಳಿಗೆ ಧ್ವನಿಯಾಗಿ ನ್ಯಾಯ ದೊರಕಿಸಿದೆ.
ರೈತರಿಗೆ ಅನುಕೂಲವಾದ ವರದಿ:
ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೆಟ್ಟ ಶಂಭೋನಹಳ್ಳಿ ಗ್ರಾಮದ ಸರ್ವೇ ನಂಬರ್ 52,10,11,14 ,15 ರ ಜಾಮೀನಿನ ರೈತರು ಜಮೀನಿಗೆ ಸಂಚಾರ ಮಾಡಲು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದ ರೈತರು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ನಮ್ಮತುಮಕೂರು ವರದಿ ಬೆನ್ನಲ್ಲೇ ಒತ್ತುವರಿ ತೆರವು ಮಾಡಲಾಯಿತು.
ಚಿತ್ರದುರ್ಗ ಜಿಲ್ಲೆಯಲ್ಲೂ ನಮ್ಮತುಮಕೂರು ಪ್ರಭಾವ:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಳಿಯಾರ್ ರಸ್ತೆಯಲ್ಲಿನ ಪೌದಿಯಮ್ಮ(ಭಗವತಿ) ಅಮ್ಮನ ದೇವಸ್ಥಾನಕ್ಕೆ ತಿರುಗುವ ತಿರುವಿನಲ್ಲಿರುವ ಸೇತುವೆ ಭೂಮಿಯಿಂದ ಬೇರ್ಪಟ್ಟು ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಾಮಿಸಿತ್ತು. ಈ ಸಂಬಂಧ ನಮ್ಮತುಮಕೂರು.ಕಾಂನ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟರು.
ಅಂಬೇಡ್ಕರ್ ಭವನಕ್ಕೆ ಗಿಡಗಂಟಿಗಳಿಂದ ಮುಕ್ತಿ:
ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ನೆಲ್ಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಗ್ಗಾವೆ ಗ್ರಾಮದ ಕಾಲೋನಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಗಿಡಗಂಟೆಗಳ ಮಧ್ಯೆ ಮುಚ್ಚಿ ಹೋದ ಸ್ಥಿತಿಯಲ್ಲಿದ್ದ ಬಗ್ಗೆ ‘ನಮ್ಮ ತುಮಕೂರು.ಕಾಂ’ ವರದಿ ಪ್ರಕಟಿಸಿತ್ತು. ವರದಿ ಪ್ರಕಟಿಸಿ ಕೇವಲ ಎರಡೇ ದಿನದಲ್ಲಿ ಎಚ್ಚೆತ್ತುಕೊಂಡ ಗ್ರಾಮ ಪಂಚಾಯತ್ ಅಧಿಕಾರಿಗಳು ಗಿಡಗಂಟಿಗಳಿಂದ ಅಂಬೇಡ್ಕರ್ ಭವನಕ್ಕೆ ಮುಕ್ತಿ ನೀಡಿದ್ದರು. ಈ ಮೂಲಕ ನಮ್ಮ ತುಮಕೂರು ಮಾಧ್ಯಮ ಸಾರ್ವಜನಿಕರ ಪ್ರಸಂಶೆ ಪಡೆದಿತ್ತು.
ಚರಂಡಿ ನೀರಿನಿಂದ ಸಾರ್ವಜನಿಕರಿಗೆ ಮುಕ್ತಿ:
ಸರಗೂರು ತಾಲೂಕಿನ ಲಂಕೆ ಗ್ರಾಮದಲ್ಲಿ ಚರಂಡಿ ನೀರು ಮನೆಗೆ ನುಗ್ಗುತ್ತಿರುವ ವಿಚಾರವಾಗಿ ನಮ್ಮತುಮಕೂರು ಮಾಧ್ಯಮದ ವರದಿ ಮಾಡಿತ್ತು. ವರದಿಯ ಬೆನ್ನಲ್ಲೇ ಗ್ರಾಮ ಪಂಚಾಯತ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಚರಂಡಿ ಸ್ವಚ್ಛತೆಗೊಳಿಸಿದ್ದರು.
ಸರಗೂರು ತಾಲ್ಲೂಕಿನ ಮನುಗನಹಳ್ಳಿ ಗ್ರಾಪಂ ವ್ಯಾಪ್ತಿಯ ಬರುವ ಲಂಕೆ ಗ್ರಾಮದಲ್ಲಿ ವರ್ಷದ ಆರಂಭದಲ್ಲಿ ಮಳೆಯಾದ ಕಾರಣ, ಚರಂಡಿಯಲ್ಲಿ ನೀರು ನಿಂತು ಮನೆಗಳಿಗೆ ನುಗ್ಗಿದ್ದವು. ಈ ಸಂಬಂಧ ವಿವರವಾದ ವರದಿಯನ್ನು ನಮ್ಮ ತುಮಕೂರು ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಚರಂಡಿ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟರು.
ಸಾರ್ವಜನಿಕರ ಜೀವ ಉಳಿಸಿದ ನಮ್ಮತುಮಕೂರು ವರದಿ:
ತಿಪಟೂರು ತಾಲೂಕಿನ ಹೊನವಳ್ಳಿ ಹೋಬಳಿ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾಲೋನಿಯಲ್ಲಿ ವಿದ್ಯುತ್ ಕಂಬ ಬೀಳುವ ಸ್ಥಿತಿಗೆ ತಲುಪಿತ್ತು. ಸಾರ್ವಜನಿಕರ ಪ್ರಾಣಕ್ಕೆ ಇದು ಅಪಾಯಕಾರಿಯಾಗಿ ಪರಿಣಮಿಸಿತ್ತು. ಈ ಬಗ್ಗೆ ನಮ್ಮತುಮಕೂರು.ಕಾಂ ಸವಿವರವಾದ ವರದಿ ಪ್ರಕಟಿಸಿತ್ತು. ವರದಿಯ ಬೆನ್ನಲ್ಲೇ ಬೆಸ್ಕಾಂ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಲ್ಪಿಸಿ, ಸಾರ್ವಜನಿಕರ ಸುರಕ್ಷತೆಗೆ ಕ್ರಮವಹಿಸಿದ್ದರು.
ಶಾಲೆಯ ಸ್ವಚ್ಛತೆ ವಿದ್ಯಾರ್ಥಿಗಳ ಸುರಕ್ಷತೆ:
ಮಧುಗಿರಿ ತಾಲೂಕು ಕಸಬಾ ಹೋಬಳಿ ಸಿದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಂಭಾಗದಲ್ಲಿ ಪಂಚಾಯತಿ ವತಿಯಿಂದ ಕಸದ ತೊಟ್ಟಿಯನ್ನು ಇಟ್ಟಿದ್ದು, ಇದರಿಂದ ಶಾಲೆಯ ಸ್ವಚ್ಛ ಆವರಣಕ್ಕೆ ಧಕ್ಕೆಯಾಗುತ್ತಿತ್ತು. ಜೊತೆಗೆ ಶಾಲೆಯ ಮುಂಭಾಗದಲ್ಲಿ ಹಾದು ಹೋಗಿದ್ದ ತುಕ್ಕು ಹಿಡಿದ ನೀರಿನ ಪೈಪ್ ಮಕ್ಕಳಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ಈ ಕುರಿತು ನಮ್ಮತುಮಕೂರು ಮಾಧ್ಯಮ ಸವಿವರವಾದ ವರದಿಯನ್ನು ಮಾಡಿತ್ತು. ವರದಿಯಿಂದ ಎಚ್ಚೆತ್ತ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಕ್ಷಣವೇ ಕ್ರಮಕೈಗೊಂಡು ಕಸದ ತೊಟ್ಟಿ ಹಾಗೂ ಪೈಪ್ ನ್ನು ತೆರವುಗೊಳಿಸಿ, ಮಕ್ಕಳ ಸುರಕ್ಷತೆಗೆ ಕ್ರಮಕೈಗೊಂಡರು.
7 ವರ್ಷಗಳಿಂದ ಬಗೆಹರಿಯದ ಸಮಸ್ಯೆಗೆ ಪರಿಹಾರ:
ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ಧರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಟೇನಹಳ್ಳಿ ಗ್ರಾಮವು ಕಂದಾಯ ಗ್ರಾಮಕ್ಕೆ ಒಳಪಟ್ಟಿದ್ದು, ಮೂಲ ಸೌಕರ್ಯಗಳಿಂದ ವಂಚಿತವಾಗಿತ್ತು. ಸುಮಾರು 25ಕ್ಕೂ ಹೆಚ್ಚು ಮನೆಗಳಿದ್ದು 150ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮಕ್ಕೆ ರಸ್ತೆಯೇ ಇಲ್ಲವಾಗಿತ್ತು. ಈ ಗ್ರಾಮಕ್ಕೆ ನಕಾಶೆ ರಸ್ತೆ ಇದ್ದೂ ಇಲ್ಲದಂತೆ ಮಾಯವಾಗಿತ್ತು. ಸುಮಾರು ಏಳು ವರ್ಷಗಳಿಂದ ಮೂಲಭೂತ ಸೌಕರ್ಯಗಳ ಕೊರತೆ ಅನುಭವಿಸುತ್ತಿತ್ತು. ಈ ಸಂಬಂಧ ನಮ್ಮತುಮಕೂರು ವರದಿ ಮಾಡಿದ್ದು, ಸುದ್ದಿ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ತಹಶೀಲ್ದಾರ್ ನಹೀದಾ ಜಂ ಜಂ ಸಂದಿಸಿದ್ದು, ನಕಾಶೆ ರಸ್ತೆ ತೆರವು ಕಾರ್ಯಾಚರಣೆ ನಡೆಸಿದ್ದರು. ಹಲವು ವರ್ಷಗಳ ಸಮಸ್ಯೆಗೆ ನಮ್ಮತುಮಕೂರು ವರದಿ ಮೂಲಕ ಪರಿಹಾರ ದೊರಕಿದಂತಾಯಿತು.
ಕುರುಬ ಜನಾಂಗದ ಮಸಣದ ಹೋರಾಟಕ್ಕೆ ಧ್ವನಿ:
ಸರಗೂರು ತಾಲೂಕಿನ ಆಲನಹಳ್ಳಿ ಹಾಡಿಯ ಕುರುಬ ಜನಾಂಗದವರಿಗೆ ಸರಿಯಾದ ಮಸಣ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಮೃತದೇಹದ ಅಂತ್ಯಸಂಸ್ಕಾರಕ್ಕೂ ಪರದಾಡಿದ ಘಟನೆ ನಡೆದಿತ್ತು. ಈ ಸಂಬಂಧ ನಮ್ಮತುಮಕೂರು ವಿವರವಾದ ವರದಿ ಮಾಡಿತ್ತು. ನಮ್ಮತುಮಕೂರು ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು.
ನಮ್ಮತುಮಕೂರು ವರದಿಯಿಂದ ಸಿಕ್ತು ಶುದ್ಧ ಕುಡಿಯುವ ನೀರು:
ಮಧುಗಿರಿ ಪಟ್ಟಣದ 19 ವಾರ್ಡ್ ನಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ನವರು ಸುಮಾರು ಎಂಟು ಲಕ್ಷದ ಮೌಲ್ಯದ ಶುದ್ಧ ನೀರಿನ ಘಟಕವನ್ನು ಉದ್ಘಾಟನೆ ಮಾಡಿದ್ದರು. ಆದರೆ ಶುದ್ಧ ನೀರಿನ ಘಟಕ ನೋಡಿಕೊಳ್ಳುವವರು ಯಾರು ಇಲ್ಲದ, ಕಾರಣ ಸುತ್ತಮುತ್ತ ನಿಂತಿರುವ ಕೊಚ್ಚೆ ನೀರು ತೊಟ್ಟಿಗೆ ಬಂದು, ಅದೇ ನೀರು ಶುದ್ಧವಾಗಿ ಬರುತ್ತಿತ್ತು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚ ಮಾಡಿ ಕುಡಿಯುವ ನೀರಿನ ಘಟಕ ತೆರೆದಿದ್ದರೂ, ಕುಡಿಯಲು ನೀರು ಯೋಗ್ಯವಲ್ಲದ ಕಾರಣ ಸಾರ್ವಜನಿಕರು ಯಾರು ನೀರನ್ನೂ ಕುಡಿಯುತ್ತಿರಲಿಲ್ಲ ಈ ಸಂಬಂಧ ನಮ್ಮತುಮಕೂರು ಮಾಧ್ಯಮವು ವರದಿ ಮಾಡಿತ್ತು. ವರದಿ ಪ್ರಕಟವಾಗುತ್ತಲೇ ಸಮಸ್ಯೆಯನ್ನು ಮನವರಿಕೆ ಮಾಡಿಕೊಂಡ ಅಧಿಕಾರಿಗಳು, ಕೇವಲ ಐದು ದಿನಗಳಲ್ಲಿ ಶುದ್ಧ ನೀರಿನ ಘಟಕ ರಿಪೇರಿ ಮಾಡಿಸಿ, ಸ್ವತಃ ಪುರಸಭಾ ಮುಖ್ಯಾಧಿಕಾರಿ ಫಿರೋಜ್ ಅಮಿರ್ ಮತ್ತು ಪುರಸಭೆ ಜೆ.ಇ. ಇಂಜಿನಿಯರ್ ಸಂಜೀವ್ ಮೂರ್ತಿ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ, ಸಮಸ್ಯೆಗೆ ಪರಿಹಾರ ನೀಡಿದರು. ಈ ಮೂಲಕವಾಗಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸಿಗುವಂತಾಯಿತು.
ಗಬ್ಬುನಾರುತ್ತಿದ್ದ ಬಸ್ ನಿಲ್ದಾಣಕ್ಕೆ ಮುಕ್ತಿ:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಲ್ಲಿರುವ ಸಾರಿಗೆ ಸಂಸ್ಥೆಯ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿರುವ ಶೌಚಾಲಯವು ಗಬ್ಬುನಾರುತ್ತಿದ್ದ ಹಿನ್ನೆಲೆ ಸಾರ್ವಜನಿಕರ ದೂರಿನ ಪ್ರಕಾರ ನಮ್ಮ ತುಮಕೂರು ಮಾಧ್ಯಮವು ಸಾರಿಗೆ ಬಸ್ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ವಿವರವಾದ ವರದಿ ಪ್ರಕಟಿಸಿತ್ತು.
ಈ ವರದಿಯನ್ನು ಗಮನಿಸಿದ ಹಿರಿಯೂರು ನಗರ ಸಭೆ ಅಧ್ಯಕ್ಷೆ ಶಿವರಂಜನಿ ಯಾದವ್ ಅವರು ನಗರಸಭೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಾದ ಅಶೋಕ್, ಮೀನಾಕ್ಷಿ ಹಾಗೂ ಸಂಧ್ಯಾ ಅವರೊಡನೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಾರಿಗೆ ಸಂಸ್ಥೆಯ ಗಣಕಿ ಸಹಾಯಕರನ್ನು ತರಾಟೆಗೆತ್ತಕೊಂಡಿದ್ದರು. ಬಳಿಕ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ಸ್ವಚ್ಛತೆಗೆ ಕ್ರಮಕೈಗೊಂಡರು.
ಕಳಪೆ ಕಾಮಗಾರಿಯಿಂದ ಗ್ರಾಮಸ್ಥರಿಗೆ ಮುಕ್ತಿ:
ಸರಗೂರು ತಾಲ್ಲೂಕಿನ ಬಿ ಮಟಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಣೇಗಾಲ ಗ್ರಾಮದಲ್ಲಿ ತಾಲ್ಲೂಕು ಪಂಚಾಯಿತಿ ವತಿಯಿಂದ ನಿರ್ಮಾಣವಾಗಿರುವ ನೀರಿನ ತೊಂಬೆಯ ಕಳಪೆ ಕಾಮಗಾರಿಯಿಂದಾಗಿ ಜನರು ನೀರಿನ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ನಮ್ಮತುಮಕೂರು ವರದಿ ಮಾಡಿದ್ದು, ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಮತ್ತು ಇಂಜಿನಿಯರ್ ಇದೀಗ ಕಾಮಗಾರಿ ಮತ್ತೆ ಆರಂಭಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದರು.
ನಮ್ಮತುಮಕೂರು ಮಾಧ್ಯಮ ತಂಡವು ಇಂತಹ ಹತ್ತು ಹಲವು ಸಾಮಾಜಿಕ ಕೆಲಸಗಳನ್ನು ಮಾಡುತ್ತಲೇ ಬಂದಿದೆ. ಈ ಕೆಲಸಗಳು ಇನ್ನೂ ಮುಂದುವರಿಯುತ್ತದೆ. ಇನ್ನಷ್ಟು ವೇಗ ಪಡೆದುಕೊಳ್ಳುತ್ತದೆ. ಇದೀಗ ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ಮಾಧ್ಯಮ ಇನ್ನಷ್ಟು ಸಾಧನೆಗಳನ್ನು ಮಾಡುವ ಹುಮ್ಮಸ್ಸಿನಿಂದ ಮುಂದೆ ಸಾಗುತ್ತಿದೆ. ನಮ್ಮ ಪ್ರಯತ್ನಕ್ಕೆ ಜಿಲ್ಲೆಯ ಓದುಗರ ಸಹಕಾರ ಇರಲಿ. ನಮ್ಮತುಮಕೂರು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಓದುಗರನ್ನು ಪಡೆದಿದೆ. ನೊಂದ ಸಮಾಜಗಳ ಕತ್ತು ಹಿಸುಕುತ್ತಿರುವ ಭ್ರಷ್ಟಾಚಾರ, ಸಾಮಾಜಿಕ ಅಸಮಾನತೆ, ಅಧಿಕಾರಿಗಳ ದೌರ್ಜನ್ಯ, ಯುವಜನರ, ಮಹಿಳೆಯರ ಸಮಸ್ಯೆ ಹೀಗೆ ಸಮಾಜದಲ್ಲಿನ ಪ್ರತಿಯೊಂದು ಸಮಸ್ಯೆಗಳನ್ನು ಎದುರಿಸಲು ನಮ್ಮೊಂದಿಗೆ ಖಂಡಿತಾ ಓದುಗರು ಇರುತ್ತೀರಿ ಎಂಬ ಭರವಸೆಯೊಂದಿಗೆ ಮತ್ತೊಮ್ಮೆ ಗೆಲುವಿನ ಹಾದಿಯಲ್ಲಿ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ನಮ್ಮೊಂದಿಗೆ ಸಹಕರಿಸಿದ ಎಲ್ಲರಿಗೂ ಅನಂತ, ಅನಂತ ಧನ್ಯವಾದಗಳು.
–ನಟರಾಜ್ ಜಿ.ಎಲ್.
ಪ್ರಧಾನ ಸಂಪಾದಕರು