ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಇರಿಸಿಕೊಂಡ ಹಿನ್ನೆಲೆಯಲ್ಲಿ ಸೆಸ್ಕ್ ಸಂಪರ್ಕ ಕಡಿತಗೊಳಿಸಿದ್ದರಿಂದ ಚಾಮರಾಜನಗರದ ಐತಿಹಾಸಿಕ ದೇವಸ್ಥಾನದ ಚಾಮರಾಜೇಶ್ವರ ದೇವರಿಗೆ ಕತ್ತಲಲ್ಲಿ ಪೂಜೆ ನೆರವೇರಿಸಿದ ಘಟನೆ ಗುರುವಾರ ನಡೆದಿದೆ.
ಚಾಮಗರಾಜನಗರದ ಹೃದಯಭಾಗದಲ್ಲಿರುವ ಚಾಮರಾಜೇಶ್ವರ ದೇಗುಲದ 60ರಿಂದ 70 ಸಾವಿರ ರೂಪಾಯಿ ವಿದ್ಯುತ್ ಬಿಲ್ ಅನ್ನು ಮುಜರಾಯಿ ಇಲಾಖೆ ಬಾಕಿ ಉಳಿಸಿಕೊಂಡಿದೆ. ಪದೇಪದೆ ಗಡುವು ವಿಸ್ತರಿಸಿದರೂ ಬಿಲ್ ಪಾವತಿಸದ ಕಾರಣ ಸೆಸ್ಕ್ ಗುರುವಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.
ಸೆಸ್ಕ್ ಸಿಬ್ಬಂದಿ ದೇಗುಲದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಗುರುವಾರ ಸಂಜೆ ದೇವಸ್ಥಾನದಲ್ಲಿ ಕತ್ತಲಲ್ಲೇ ಪೂಜೆ ಮಾಡಲಾಗಿದ್ದು, ನೆರೆದಿದ್ದ ಭಕ್ತರು ಮೊಬೈಲ್ ಬ್ಯಾಟರಿ ಚೆಲ್ಲಿದರು.
ಕಾರ್ತಿಕ ಮಾಸವಾಗಿರುವುದರಿಂದ ಶಿವನ ಭಕ್ತರು ಅದರಲ್ಲೂ ಮಹಿಳೆಯರು ಚಾಮರಾಜೇಶ್ವರನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲ ಭೇಟಿ ನೀಡುತ್ತಿದ್ದಾರೆ. ವಿದ್ಯುತ್ ಇಲ್ಲದಿರುವುದರಿಂದ ಬಂದಿದ್ದ ಭಕ್ತರು ಕತ್ತಲಲ್ಲೇ ದರ್ಶನ ಪಡೆದು ಮರಳುವಂತಾಗಿದೆ.
ವಿದ್ಯುತ್ ಕಡಿತಗೊಳಿಸಲು ಮುಂದಾದ ವೇಳೆ 15 ದಿನ ಕಾಲಾವಕಾಶ ಪಡೆದು ವಿದ್ಯುತ್ ಪಾವತಿ ಮಾಡಲಾಗಿತ್ತು. ಆದರೆ, ಈ ಬಾರಿ ಗಡುವು ನೀಡ ಸೆಸ್ಕ್ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ.
40 ವರ್ಷಗಳಿಂದ ದೇವಾಲಯದಲ್ಲಿ ಕೆಲಸ ಮಾಡಿಕೊಂಡಿದ್ದು ಇದೇ ಮೊದಲ ಬಾರಿಗೆ ಹೀಗೆ ಕತ್ತಲಲ್ಲಿ ದೇವರಿರುವುದು ಎಂದು ದೇಗುಲದ ನೌಕರ ಮಹಾದೇವಶೆಟ್ಟಿ ಬೇಸರ ಹೊರಹಾಕಿದರು.
ಬ್ಯಾಟರಿ ಹಿಡಿದುಕೊಂಡು ದೇವರ ದರ್ಶನ ಮಾಡುವ ದುಸ್ಥಿತಿ ಬೇಕೆ? ಕತ್ತಲು ಆವರಿಸಿರುವುದರಿಂದ ನೂರಾರು ಮಹಿಳೆಯರು ದೇಗುಲಕ್ಕೆ ಒಳಗೆ ಬರದೇ ಹೊರಗೇ ಕೈ ಮುಗಿದು ಹೊರ ಹೋಗಿದ್ದಾರೆ ಎಂದು ಭಕ್ತರಾದ ಮಹಾದೇವ್ ಆಕ್ರೋಶ ಹೊರಹಾಕಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


