ತುರುವೇಕೆರೆ: ಶಾಲಾ ಮಕ್ಕಳ ಶೌಚಾಲಯದ ಗುಂಡಿ ಕುಸಿದು ಬಿದ್ದು ವರ್ಷಗಳು ಕಳೆದರೂ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟವರು ಈ ಕಡೆಗೆ ಗಮನ ಹರಿಸದೇ ನಿರ್ಲಕ್ಷಿಸಿದ್ದು ಮಕ್ಕಳ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹೊಂದಿಕೊಂಡಂತೆ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳು ಬಳಸುತ್ತಿರುವ ಶೌಚಾಲಯದ ಗುಂಡಿ ವರ್ಷಗಳ ಹಿಂದೆ ಕುಸಿದು ಬಿದ್ದಿದೆ. ಆದರೆ ಈವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ, ಪಟ್ಟಣ ಪಂಚಾಯತಿ ಅಧಿಕಾರಿಗಳಾಗಲಿ, ಶಾಲಾ ಶಿಕ್ಷಕ ಸಿಬ್ಬಂದಿಯಾಗಲಿ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೇ ಮಕ್ಕಳ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ.
ಶಾಲೆಯ ಮುಂಭಾಗದಲ್ಲಿ ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ ಎಂಬ ಬರಹ ಕಾಣುತ್ತದೆ. ಆದರೆ, ದೇಗುಲದಂತೆ ಕಾಣಬೇಕಿದ್ದ ಶಾಲೆಯನ್ನು ಶಿಕ್ಷಕ ವರ್ಗ, ಸಿಬ್ಬಂದಿ ವರ್ಗ ಇಷ್ಟೊಂದು ನಿರ್ಲಕ್ಷಿಸಿದ್ದಾದರೂ ಯಾಕೆ ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.
ಶೌಚಾಲಯದ ಗುಂಡಿ ಕುಸಿದು ತೆರೆದುಕೊಂಡ ಸ್ಥಿತಿಯಲ್ಲಿದೆ. ಈ ಗುಂಡಿಗೆ ಯಾರಾದ್ರೂ ಮಕ್ಕಳು ಹೋಗಿ ಬಿದ್ದು, ಅನಾಹುತವಾದರೆ ಯಾರು ಜವಾಬ್ದಾರಿ ಅನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ಜೊತೆಗೆ ಮಕ್ಕಳು ಕಲಿಯುವ ಶಿಕ್ಷಣ ಮಂದಿರದ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕಲ್ವಾ? ಶೌಚಾಲಯದ ಗುಂಡಿ ತೆರೆದುಕೊಂಡು ಶಾಲೆಯ ಸುತ್ತಮುತ್ತ ಗಬ್ಬುನಾತ ಬರುತ್ತಿದ್ದು, ಶಾಲೆಯಲ್ಲಿರುವ ಶಿಕ್ಷಕ ವರ್ಗ, ಪಕ್ಕದಲ್ಲೇ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೂಗು ಇಲ್ಲವೇ? ಅನ್ನೋ ಆಕ್ರೋಶದ ಮಾತುಗಳು ಕೇಳಿ ಬಂದಿವೆ.
ಶಾಲೆಯ ಕಟ್ಟಡಕ್ಕೆ ಹೊಂದಿಕೊಂಡಂತೆ ತಾಲೂಕಿನ ದಂಡಾಧಿಕಾರಿಯವರ ಕಚೇರಿಯು ಸಹ ಇದೆ. ಇಷ್ಟಾದರೂ ಇಲ್ಲಿ ರೀತಿಯ ನಿರ್ಲಕ್ಷ್ಯ ಯಾಕೆ ವಹಿಸಲಾಗಿದೆ? ತನ್ನ ಪಕ್ಕದಲ್ಲೇ ಇರುವ ಗಂಭೀರ ಸಮಸ್ಯೆಗಳನ್ನು ಕಾಣದ ಇವರು, ಇನ್ನು ಇತರ ಪ್ರದೇಶಗಳ ಬಗ್ಗೆ ಎಷ್ಟೊಂದು ಗಮನ ಹರಿಸಬಹುದು ಅನ್ನೋ ಆಕ್ರೋಶದ ಮಾತುಗಳು ಕೇಳಿ ಬಂದಿವೆ.
ವರದಿ: ಸುರೇಶ್ ಬಾಬು, ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz