ಅಡಿಕೆ ಎಲೆಚುಕ್ಕೆ ರೋಗದ ನಿವಾರಣೆ ಹಾಗೂ ಹರಡದಂತೆ ಕ್ರಮ ವಹಿಸಲು ಸರ್ಕಾರ ಸಂಪೂರ್ಣ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಡೂರಿನ ಪೊಲೀಸ್ ತರಬೇತಿ ಕೇಂದ್ರ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದ್ದು, ವಿಶ್ವವಿದ್ಯಾಲಯಗಳು, ಸಂಬಂಧಪಟ್ಟ ಇಲಾಖೆ, ಕೇಂದ್ರ ಸರ್ಕಾರದ ಸಂಸ್ಥೆಗಳು ರೋಗ ಪರಿಹಾರ ಕಂಡುಕೊಳ್ಳುವಲ್ಲಿ ಕಾರ್ಯೋನ್ಮುಖವಾಗಿವೆ. ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಔಷಧಿ ಸಿಂಪಡನೆಗೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದಿದ್ದಾರೆ.
ಎಲೆಚುಕ್ಕೆ ರೋಗದ ಮೂಲಕಾರಣ ಹಾಗೂ ಔಷಧಿಯ ಬಗ್ಗೆ ವಿಜ್ಞಾನಿಗಳು ಅಧ್ಯಯನ ಮಾಡಿ ಪರಿಹಾರ ಮಾರ್ಗ ಕಂಡುಹಿಡಿದರೆ, ಅದರಂತೆ ಸರ್ಕಾರ ಕ್ರಮಕೈಗೊಳ್ಳುವುದು. ಈ ರೋಗ ದೊಡ್ಡ ಪ್ರಮಾಣದಲ್ಲಿ ಹರುಡುತ್ತಿರುವುದರಿಂದ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಮಲೆನಾಡು ಹಾಗೂ ಬಯಲುಸೀಗಳಲ್ಲಿ ಈರುಳ್ಳಿ ಸೇರಿದಂತೆ ಹಲವು ಬೆಳೆಗಳ ನಾಶಕ್ಕೆ ಪರಿಹಾರ ನೀಡುವ ಬಗ್ಗೆ ಪ್ರತಿಕ್ರಿಯಿಸಿ, ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಸರ್ಕಾರ ಈಗಾಗಲೇ ದುಪ್ಪಟ್ಟು ಪರಿಹಾರ ನೀಡುತ್ತಿದೆ. ಈಗಾಗಲೇ 99 ಕೋಟಿ ರೂ. ಬೆಳೆ ಪರಿಹಾರವನ್ನು ವಿತರಿಸಲಾಗಿದೆ. ಜಿಲ್ಲಾಡಳಿತ ಬೆಳೆನಾಶಕ್ಕೆ ಜಂಟಿ ಸರ್ವೆ ಮಾಡಿ ವರದಿ ನೀಡಿದರೆ, ಅದಕ್ಕೂ ಸರ್ಕಾರ ಪರಿಹಾರ ನೀಡಲಿದೆ ಎಂದು ಸಿಎಂ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


