ಪೊಲೀಸ್ ವಿಚಾರಣೆಗೆ ಹೆದರಿ ತನ್ನ ಮೂರು ವರ್ಷದ ಮಗಳನ್ನು ಕೊಂದು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರಿನ ಬಾಗಲೂರು ರಾಗಾ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದ ಗುಜರಾತ್ ಮೂಲದ ವ್ಯಕ್ತಿ ರಾಹುಲ್ ಹಾಗೂ ಮೂರು ವರ್ಷದ ಮಗು ಜಿಯಾ ಶವ ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಕೆರೆಯಲ್ಲಿ ಕಳೆದ ರಾತ್ರಿ ಪತ್ತೆಯಾಗಿದೆ.
ಕೆರೆಯ ದಡದಲ್ಲೇ ನೀಲಿ ಬಣ್ಣದ I-20 ಕಾರು ಸಹ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದಾಗ ತಂದೆ-ಮಗಳ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಬಂದ ಪತ್ನಿ ಭವ್ಯ, ಪತಿ ಹಾಗೂ ಮಗು ಜಿಯಾಳನ್ನು ಗುರುತಿಸಿದ್ದಾರೆ. ಬುಧವಾರ ಬೆಳಗ್ಗೆ ಮಗುವನ್ನು ಶಾಲೆಗೆ ಬಿಟ್ಟು ಬರೋದಾಗಿ ರಾಹುಲ್ ಹೇಳಿ ಹೋಗಿದ್ದರು. ಬಳಿಕ ಫೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
2-3 ವರ್ಷಗಳ ಹಿಂದೆಯಷ್ಟೇ ರಾಹುಲ್ – ಭವ್ಯ ದಂಪತಿ ಗುಜರಾತ್‌ನಿಂದ (Gujarat) ಬೆಂಗಳೂರಿನಲ್ಲಿ ಬಂದು ನೆಲೆಸಿದ್ದರು. ಕಳೆದ 6 ತಿಂಗಳಿನಿಂದ ರಾಹುಲ್ ಕೆಲಸವಿಲ್ಲದೆ ಮನೆಯಲ್ಲೇ ಇದ್ದರು. ಇದರಿಂದ ಸಾಲದ ಹೊರೆ ಹೆಚ್ಚಾಯಿತು.
ರಾಹುಲ್ ತಮ್ಮ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ ಎಂದು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪದೇ-ಪದೇ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿ ಬರುತ್ತಿದ್ದರು. ಪೊಲೀಸರು ದೂರಿನ ಅನ್ವಯ ತನಿಖೆ ನಡೆಸಿದಾಗ, ಮನೆಯಲ್ಲಿ ಇದ್ದ ಒಡವೆಯನ್ನು ರಾಹುಲ್ ತಾನೇ ಕದ್ದು ಚೆಮ್ಮನೂರ್ ಜ್ಯುವೆಲರ್ಸ್‌ನಲ್ಲಿ ಅಡವಿಟ್ಟು, ಬಳಿಕ ಕಳ್ಳತನದ ನಾಟಕವಾಡಿ ಸುಳ್ಳು ದೂರು ನೀಡಿದ್ದ ವಿಚಾರ ತಿಳಿದು ಬಂದಿದೆ.
ಪೊಲೀಸರು ರಾಹುಲ್ ಮೇಲೆ ಕೋಪಗೊಂಡು ಠಾಣೆಗೆ ಬರುವಂತೆ ತಾಕೀತು ಮಾಡಿದ್ದಾರೆ. ಮನೆಗೂ ಬಂದು ಹೇಳಿ ಹೋಗಿದ್ದಾರೆ. ಇದರಿಂದ ಬಂಧನ ಭೀತಿಯಿಂದ ರಾಹುಲ್ ಆತ್ಮಹತ್ಯೆ ಮಾಡಿಕೊಂಡರಾ ಎಂಬ ಅನುಮಾನ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


