ಬಿಜೆಪಿಯವರು ಚುನಾವಣೆಯಲ್ಲಿ ಅಕ್ರಮ ಮಾಡಲು ಮತದಾರರ ಪಟ್ಟಿ ಪರಿಷ್ಕರಣೆಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ಕೊಟ್ಟಿದ್ದಾರೆ. ಇದು ಮಂತ್ರಿಗಳ ಬೇನಾಮಿ ಹೆಸರಿನಲ್ಲಿ ಇರುವ ಕಂಪನಿ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇವಿಎಂ ಇರುವವರೆಗೆ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ. ಅಕ್ರಮದ ರೀತಿಯಲ್ಲೇ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದರ ಬಗ್ಗೆ ನಾನು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ನಾನು ಸಾಫ್ಟ್ ಆಗಿಲ್ಲ. ಬಿಜೆಪಿ ಎಷ್ಟೇ ಕುತಂತ್ರ ಮಾಡಿದರೂ ಅಧಿಕಾರಕ್ಕೆ ಬರಲು ಆಗುವುದಿಲ್ಲ. ಮುಂದೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಆಗ ಅಕ್ರಮ ಎಸಗಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಚನ್ನಪಟ್ಟಣ ತಾಲೂಕಿಗೆ ಮನೆಗಳ ಮಂಜೂರಾತಿ ವಿಚಾರದಲ್ಲಿ ಆಗಿರುವ ಸಮಸ್ಯೆಗಳ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನನ್ನ ಪತ್ರಗಳಿಗೆ ಸೋಮಣ್ಣ ಹೇಗೆ ಸ್ಪಂದಿಸಿದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೂರು ಸಾವಿರ ಮನೆಗಳಿಗೆ 60 ಕೋಟಿ ಬೇಕಿತ್ತು. ಆದರೆ ಚುನಾವಣೆಗಾಗಿ ಮನೆಗಳು ಮಂಜೂರಾಗಿದೆ ಎಂದು ಆದೇಶ ಮಾಡಿಕೊಂಡಿದ್ದಾರೆ. ಹಣ ಕೊಡುತ್ತಾರೋ ಇಲ್ಲವೋ ನೋಡಬೇಕು. ಮನೆಗಳಿಗೆ ಒಪ್ಪಿಗೆ ಕೊಡಲು ನನ್ನ ಮುಂದೇಯೇ ಬರಬೇಕು. ತಾಲೂಕಿನಲ್ಲಿ ಜೆಡಿಎಸ್ನ ಪಂಚಾಯತಿಗಳೇ ಹೆಚ್ಚಿವೆ ಎಂದಿದ್ದಾರೆ. ಮುಂದಿನ ಆರು ತಿಂಗಳು ಪತ್ರದ ಮೂಲಕ ಮತ್ತಷ್ಟು ಆದೇಶಗಳು ಬರುತ್ತಿರುತ್ತವೆ. ಚುನಾವಣೆಗಾಗಿ ಇಂಥ ಕಸರತ್ತುಗಳು ಸಾಕಷ್ಟು ನಡೆಯಬಹುದು. ಇವು ಕಾಗದದಲ್ಲಿ ಮಾತ್ರವೇ ಉಳಿಯುವ ಆದೇಶಗಳು. ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ಬರುತ್ತವೆಯೋ ನೋಡಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೋಲಾರದಲ್ಲಿ ನಮ್ಮ ಅಭ್ಯರ್ಥಿ ಯಾರು ಎಂಬುದನ್ನು ಈಗಾಗಲೇ ಘೋಷಿಸಿದ್ದೇವೆ. ಶ್ರೀನಾಥ್ ಅಲ್ಲಿ ನಿಲ್ಲುತ್ತಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಈಗಿನ ಸರ್ಕಾರವು ಯಾವುದೇ ಜನಪರ ಕಾರ್ಯಕ್ರಮ ಮಾಡದೆ ಆಕ್ರಮ ರೀತಿಯಲ್ಲಿ ಮತ್ತೆ ಅಧಿಕಾರಕ್ಕೆ ತರಲು ಪ್ರಯತ್ನ ನಡೆಯುತ್ತಿದೆ. ಇದರಲ್ಲಿ ಆಶ್ಚರ್ಯ ಪಡುವಂಥದ್ದು ಏನೂ ಇಲ್ಲ. ಎವಿಎಂ ಯಂತ್ರಗಳನ್ನು ತಯಾರು ಮಾಡಿದ ಕಂಪನಿಯಲ್ಲಿ ಇವರೆಲ್ಲರೂ ಕೆಲಸ ಮಾಡಿದ್ದಾರೆ. ಅವರನ್ನೇ ಡೇಟಾ ಕಲೆಕ್ಟ್ ಮಾಡಲು ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


