ಹೆಚ್.ಡಿ.ಕೋಟೆ: ಕಳೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚಿಸಿರುವ ವಿಷಯಗಳ ಬಗ್ಗೆ ನೀಡಿರುವ ಅನು ಪಾಲನ ವರದಿಯನ್ನು ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನೀಡಿದ್ದಾರೆ. ನಾವು ಹೇಳಿರುವುದು ಒಂದು, ಇಲ್ಲಿ ಬರೆದಿರೋದು ಒಂದು, ಇಲ್ಲಿ ನಡೆದಿರುವುದು ಮತ್ತೊಂದು. ಈ ವಿಷಯ ಸಭೆಯಲ್ಲಿ ತೀರ್ಮಾನವೇ ಆಗಿಲ್ಲ, ಇದರ ಬಗ್ಗೆ ಚರ್ಚೆ ಆಗಿಲ್ಲ ಹೇಗ್ರಿ ಅನುಪಾಲನ ವರದಿ ನೀಡಿದ್ದೀರಿ? ಎಂದು ಪುರಸಭೆ ಸದಸ್ಯರು ಒಬ್ಬರ ಮೇಲೆ ಒಬ್ಬರಂತೆ ಪುರಸಭೆ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡ ಘಟನೆಗೆ ಇಂದಿನ ಸಭೆ ಸಾಕ್ಷಿ ಆಯಿತು.
ಪಟ್ಟಣದ ಪುರಸಭೆ ದಿವಂಗತ ಎಸ್.ಚಿಕ್ಕಮಾಧು ಸಭಾಂಗಣದಲ್ಲಿ ಶುಕ್ರವಾರ ಪುರಸಭೆ ಅಧ್ಯಕ್ಷ ಅನಿತಾ ನಿಂಗನಾಯಕ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಸಭೆ ಪ್ರಾರಂಭವಾಗುತ್ತಿದ್ದಂತೆ ಮುಂದೂಡಿದ ಸಾಮಾನ್ಯ ಸಭೆ ನಡಾವಳಿಯ ಅನುಪಾಲನ ವರದಿಯಲ್ಲಿ ಸದಸ್ಯರು ಚರ್ಚಿಸಿದ್ದ ವಿಷಯಗಳನ್ನು ಕೈ ಬಿಟ್ಟಿರುವುದು ಹಾಗೂ ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಅನು ಪಾಲನಾ ವರದಿ ನೀಡಿರುವುದಕ್ಕೆ ಗರಂ ಅದ ಸದಸ್ಯರು ಮುಖ್ಯ ಅಧಿಕಾರಿ ಸುರೇಶ್ ಸೇರಿದಂತೆ ಪುರಸಭೆ ಅಧಿಕಾರಿಗಳ ಮೇಲೆ ಮುಗಿಬಿದ್ದರು.
ಈ ವೇಳೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾದ ಮುಖ್ಯ ಅಧಿಕಾರಿ ಸುರೇಶ್ ಅವರನ್ನು ಸದಸ್ಯ ಮಿಲ್ ನಾಗರಾಜು. “ಏನ್ರೀ ಮುಖ್ಯ ಅಧಿಕಾರಿಗಳೇ ಕಳೆದ ಸಭೆಯಲ್ಲಿ ಶಾಸಕರು ಮತ್ತು ಸದಸ್ಯರು ಮಾತನಾಡಿದ ವಿಷಯಗಳು ಎಲ್ಲಿ? ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಪುರಸಭೆಯಲ್ಲಿ ನೀವು ಏನು ಮಾಡುತ್ತಿದ್ದೀರಾ ಗೊತ್ತಿದೆ, ಸ್ಟೇಷನರಿ ಮತ್ತು ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ಹೆಸರಲ್ಲಿ ಬೇಕಾಬಿಟ್ಟಿ ಹಣ ಖರ್ಚು ಮಾಡಿ ಬಡ ಜನರು ಪುರಸಭೆಗೆ ಕಟ್ಟುತ್ತಿರುವ ತೆರಿಗೆ ಹಣ ಪೋಲಾಗುತ್ತಿದೆ ಇಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ಪ್ರೇಮ್ ಕುಮಾರ್ ಮಾತನಾಡಿ, ನಾನು ಕಳೆದ ಸಭೆಯಲ್ಲಿ ಮಾತನಾಡಿದ ಸ್ಮಶಾನದ ದುರಸ್ತಿ ಕೆಲಸ ಯಾಕೆ ಮಾಡಿಲ್ಲ? ಜನರು ಶವ ಸಂಸ್ಕಾರ ಮಾಡಲು ಹೆಣಗಾಡುತ್ತಿದ್ದಾರೆ. ನಿಮ್ಮ ಮನೆಯಲ್ಲಿ ಯಾರಾದ್ರೂ ತೀರಿ ಹೋದರೆ ಗೊತ್ತಾಗುತ್ತೆ, ಕೆಲಸ ಮಾಡಲು ಆಗದಿದ್ದರೆ ನಿಮ್ಮ ಮನೆಯಲ್ಲಿ ಇರಿ ಇಲ್ಲಿ ಯಾಕೆ ಬಂದು ಕೆಲಸ ಮಾಡದೆ ಕಾಲಹರಣ ಮಾಡಿ ನಮ್ಮನ್ನು ಜನರಿಂದ ಬೈಸುತ್ತೀರಾ? ಬೀದಿ ದೀಪ ಅಳವಡಿಸಲು 15 ದಿನ ಬೇಕೆನ್ರಿ? ಇಂದು ಇಂಜಿನಿಯರ್ ಅವರನ್ನು ತರಾಟೆ ತೆಗೆದುಕೊಂಡು ಅಧ್ಯಕ್ಷರೇ ನೀವೇ ಬಂದು ನೋಡಿ ನಮ್ಮ ವಾರ್ಡ್ ಸಮಸ್ಯೆ ಎಂದು ಕಿಡಿಕಾರಿದರು.
2 ವರ್ಷದಲ್ಲಿ ಭ್ರಷ್ಟಾಚಾರ ಬಿಟ್ರೆ ನಿಮ್ಮಿಂದ ಏನು ಆಗಿಲ್ಲ.!, ಸದಸ್ಯ ಆರೋಪ.?,
ಈ ಮಧ್ಯೆ ಸದಸ್ಯ ಆಸಿಫ್ ಇಕ್ಬಾಲ್ ಎದ್ದು ನಿಂತು ನಮ್ಮ ಪುರಸಭೆ ಅಧಿಕಾರಿಗಳು ಕಳೆದ ಎರಡು ವರ್ಷದಲ್ಲಿ ಭ್ರಷ್ಟಾಚಾರ ಬಿಟ್ರೆ ಯಾವ ಅಭಿವೃದ್ಧಿನೂ ಮಾಡಿಲ್ಲ ಎಂದು ಸಿಟ್ಟು ಹೊರ ಹಾಕಿದರು.
ಶುಂಠಿ ಶುದ್ದಿಕರಣ ಘಟಕ ಮುಚ್ಚಿಸಲು ಮೀನಾ ಮೇಷ ಯಾಕೆ.?,
ಕಳೆದ ಎರಡು ವರ್ಷದಿಂದಲೂ ಎಲ್ಲಾ ಸಾಮಾನ್ಯ ಸಭೆಗಳಲ್ಲಿ ಸದಸ್ಯರುಗಳು ವ್ಯಾಪ್ತಿಯಲ್ಲಿ ಅಕ್ರಮವಾಗಿ ತಲೆಯೆತ್ತಿರುವ ಶುಂಠಿ ಶುದ್ದಿಕರಣ ಘಟಕಗಳನ್ನು ಮುಚ್ಚಿಸುವಂತೆ ಹೇಳುತ್ತಿದ್ದರು ಅಧಿಕಾರಿಗಳಾದ ನೀವು ಯಾಕೆ ಮುಚ್ಚಿಸಿಲ್ಲ ಎಂದು ಹಲವು ಸದಸ್ಯರು ಮುಖ್ಯ ಅಧಿಕಾರಿಯನ್ನು ಪ್ರಶ್ನಿಸಿದರು, ಇದಕ್ಕುತ್ತರಿಸಿದ ಮುಖ್ಯ ಅಧಿಕಾರಿ ಸುರೇಶ್ ಒಂದು ಘಟಕ ಹೊರತುಪಡಿಸಿ ಇನ್ನು ನಾಲ್ಕು ಘಟಕಗಳು ಕಂದಾಯ ಭೂಮಿಯಲ್ಲಿ ಇರುವುದರಿಂದ ನಮಗೆ ಬರುವುದಿಲ್ಲ ಎಂದು ಹೇಳಿದ್ದಕ್ಕೆ, ಕೆಂಡಮಂಡಲರಾದ ಸದಸ್ಯರು ಮತ್ತೆ ನೀ ಹೆಂಗಪ್ಪ ವಿದ್ಯುತ್ ಸಂಪರ್ಕಕ್ಕೆ ಎನ್ ಓಸಿ ಕೊಟ್ಟೆ ಎಂದು ಬೆವರಿಳಿಸಿದ ಸದಸ್ಯರು ಈ ವಿಚಾರವಾಗಿ ಅಧ್ಯಕ್ಷೆ ಅನಿತಾ ನಿಂಗನಾಯ್ಕ ಅವರನ್ನು ತರಾಟೆ ತೆಗೆದುಕೊಂಡ ಘಟನೆ ನಡೆಯಿತು, ಶೀಘ್ರದಲ್ಲೇ ಅಕ್ರಮವಾಗಿ ತಲೆಯೆತ್ತಿರುವ ಶುಂಠಿ ಶುದ್ದಿಕರಣ ಘಟಕ ಮುಚ್ಚಿಸಲು ಅಧ್ಯಕ್ಷೆ ಅನಿತಾ ನಿಂಗನಾಯಕ ಮುಖ್ಯ ಅಧಿಕಾರಿ ಸುರೇಶ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್, ಸದಸ್ಯರಾದ ಎಚ್.ಸಿ.ನರಸಿಂಹಮೂರ್ತಿ, ಪುಟ್ಟಬಸವ ನಾಯಕ, ಎಚ್.ವೈ.ಹರೀಶ್ ಗೌಡ, ಮಿಲ್ ನಾಗರಾಜು, ನಂಜಪ್ಪ, ಪ್ರೇಮ್ ಕುಮಾರ್, ಸೋಮಶೇಖರ್, ಶಾಂತಿಪುರ ಲೋಕೇಶ್, ಮಧು, ಆಸಿಫ್, ದರ್ಶಿನಿ, ಸರೋಜಮ್ಮ, ಶಿವಮ್ಮ, ನಂದಿನಿ, ಕವಿತಾ, ಶಾಂತಮ್ಮ, ನಾಗಮ್ಮ, ಕೆ.ಎಲ್. ಸುಹಾಸಿನಿ, ನಾಮನಿರ್ದೇಶನ ಸದಸ್ಯರಾದ ಕೆ.ಎನ್. ಮಹೇಶ್, ಸಿದ್ದರಾಜು, ಜೆ.ಸಿ.ಸಂತೋಷ್, ಜಿ.ಲೋಕೇಶ್, ಪುರಸಭೆ ಮುಖ್ಯ ಅಧಿಕಾರಿ ಸುರೇಶ್, ವ್ಯವಸ್ಥಾಪಕಿ ರೇಷ್ಮಾ, ಅಧಿಕಾರಿಗಳಾದ ರಘು, ಹರೀಶ್, ಪರಮೇಶ್, ಸಂತೋಷ್, ಕಿರಿಯ ಇಂಜಿನಿಯರ್ ಸುರೇಶ್ ಸೇರಿದಂತೆ ಇನ್ನಿತರರು ಇದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


