ಅನಾರೋಗ್ಯದಿಂದ ಮೃತಪಟ್ಟ ಗೆಳತಿಯ ಮೃತದೇಹಕ್ಕೆ ತಾಳಿ ಕಟ್ಟುವ ಮೂಲಕ ಪ್ರಿಯಕರ ಆಕೆಯ ಕೊನೆಯ ಆಸೆ ಈಡೇರಿಸಿದ ಮನಕಲಕುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಈ ಘಟನೆ ನಡೆದಿದೆ. ಮೊಯಿರ್‌ಗಾಂವ್ ನಿವಾಸಿ ಬಿಟುಪಾನ್ ತಮುಲಿ ಮೃತಪಟ್ಟ ಗೆಳತಿ ಕೊಸುವಾ ಗ್ರಾಮ ನಿವಾಸಿ ಪ್ರಾರ್ಥನಾ ಬೋರಾ ಮೃತದೇಹಕ್ಕೆ ತಾಳಿ ಕಟ್ಟಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಜೀವನದಲ್ಲಿ ಮದುವೆ ಆಗದೇ ಇರುವುದಾಗಿ ಘೋಷಿಸಿದ್ದಾರೆ.
ಬಿಟುಪಾನ್ ತಮುಲಿ ಮತ್ತು ಪ್ರಾರ್ಥನಾ ಬೋರಾ ಪರಸ್ಪರ ಪ್ರೀತಿಸುತ್ತಿದ್ದು, ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿದ್ದವು.
ಕೆಲ ದಿನಗಳ ಹಿಂದೆ ಪ್ರಾರ್ಥನಾ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಕೆಯನ್ನು ಗುವಾಹಟಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಂಜೆ ಪ್ರಾರ್ಥನಾ ಮೃತಪಟ್ಟಿದ್ದರು. ಗೆಳೆತಿಯ ಸಾವಿನ ಸುದ್ದಿ ತಿಳಿದ ಬಿಟುಪಾನ್ ತಮುಲಿಯ ದುಃಖ ತಡೆಯಲಾರದೇ ಮದುವೆಯ ಸಾಮಗ್ರಿಗಳೊಂದಿಗೆ ಅಂತ್ಯಕ್ರಿಯೆಗೆ ಬಂದಿದ್ದಾನೆ. ಅಲ್ಲಿಯೇ ಮೃತ ಗೆಳತಿ ಪ್ರಾರ್ಥನಾಳನ್ನೇ ಮದುವೆಯಾಗುವುದಾಗಿ ಘೋಷಿಸಿದ್ದಾನೆ.
ಬಿಕ್ಕಿ ಬಿಕ್ಕಿ ಅಳುತ್ತಲೇ ಮದುವೆ ಕಾರ್ಯ ನೆರವೇರಿಸಿದ್ದಾನೆ. ಇದನ್ನು ನಾವ್ಯಾರೂ ಊಹೆ ಕೂಡ ಮಾಡಿರಲಿಲ್ಲ. ನನ್ನ ಸಹೋದರಿ ನಿಜವಾಗಿಯೂ ಅದೃಷ್ಟಶಾಲಿ. ಆಕೆ ಬಿಟುಪಾನ್‌ನ ಮದುವೆ ಆಗಲು ಬಯಸಿದ್ದಳು. ಅವಳ ಕೊನೆಯ ಆಸೆಯನ್ನು ಬಿಟುಪಾನ್ ಪೂರೈಸಿದ್ದಾನೆ ಎಂದು ಸಂಬಂಧಿ ಬೋರಾ ಹೇಳಿದ್ದಾರೆ.
27 ವರ್ಷದ ಬಿಟುಪಾನ್, ನೆಲದ ಮೇಲೆ ಮಲಗಿಸಿದ್ದ ಗೆಳೆತಿಯ ಮೃತದೇಹಕ್ಕೆ ಹಾರ ಹಾಕಿ, ಮತ್ತೊಂದು ಹಾರವನ್ನು ಆಕೆಯ ದೇಹಕ್ಕೆ ಮುಟ್ಟಿಸಿ ತಾನೇ ಹಾಕಿಕೊಂಡಿದ್ದಾನೆ. ಜೊತೆಗೆ ಹಣೆ ಮತ್ತು ಕೆನ್ನೆಗೆ ಸಿಂಧೂರವಿಟ್ಟು ಮದುವೆಯಾಗಿದ್ದಾನೆ. ಸದ್ಯ ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


