ಮಳೆಯಿಂದ ಕೂಡಿರುವ ಈ ಚಳಿಗಾಲದಲ್ಲಿ ಎಷ್ಟೆಲ್ಲ ಎಚ್ಚರಿಕೆ ವಹಿಸಿದರೂ ಶೀತ, ನೆಗಡಿ, ಜ್ವರ ಸೇರಿದಂತೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ ದೂರವಿರುವುದು ಪ್ರಯಾಸಕರ. ಹೀಗಿರುವಾಗ ಒಮ್ಮೆ ಲಿಂಬೆ ಶುಂಠಿ ರಸಂ ಸೇವಿಸಿ ನೋಡಿ.
ನಾವು ಶೀತ ಸಂಬಂಧಿ ಸೋಂಕು, ವೈರಾಣುಗಳನ್ನು ಬರದಂತೆ ತಡೆಯುವ ಹಾಗೂ ಬಂದರೂ ಸುಲಭವಾಗಿ ಅದನ್ನು ಮಣಿಸುವುದಕ್ಕೆ ಅಗತ್ಯವಿರುವಂತೆ ದೇಹವನ್ನು ಸಿದ್ಧವಿರಿಸಿಕೊಂಡರೆ ಉತ್ತಮ. ಸಾಮಾನ್ಯವಾಗಿ ಈ ವಾತಾವರಣದಲ್ಲಿ ಎಲ್ಲರೂ ಬಿಸಿ ಬಿಸಿ ಆಹಾರ, ಪೇಯಗಳನ್ನೇ ಇಷ್ಟಪಡುತ್ತಾರೆ.
ಸಾಮಾನ್ಯವಾಗಿ ಬಿಸಿ ಅನ್ನ, ರಸಂ ಈ ಚಳಿ ಹಾಗೂ ಶೀತದ ಮಧ್ಯೆ ವಿಶೇಷ ತೃಪ್ತಿ ಮತ್ತು ರುಚಿ ನೀಡುತ್ತದೆ. ಈ ಶೀತ ಹವಾಮಾನದಲ್ಲಿ ದೇಹವನ್ನು ಬೆಚ್ಚಗಿಡಲು ಲಿಂಬೆ ಮತ್ತು ಶುಂಠಿ ಮಿಶ್ರಿತ ರಸಂ ಬಹಳ ಸಹಕಾರಿ, ಇದು ಸವಿಯುವುದಕ್ಕೂ , ಊಟ ಮಾಡುವುದಕ್ಕೂ ಬಹುಅಚ್ಚುಮೆಚ್ಚಾಗುತ್ತದೆ. ಹುಳಿ, ಸಿಹಿ ಮತ್ತು ಖಾರದ ಮಿಶ್ರಣದ ರಸಂ ಜೊತೆ ಅನ್ನದ ರುಚಿಗೆ ಸಾಟಿಯೇ ಇಲ್ಲ. ಬಿಸಿ ಬಿಸಿ ಕಷಾಯದಂತೆಯೂ ಸೇವಿಸುತ್ತಾ ಎಂಜಾಯ್ ಮಾಡಬಹುದು. ಗಂಟಲ ಕೆರತ ಅಥವಾ ಶೀತದ ಇದ್ದರೆ ಈ ರಸಂ ಸೇವನೆ ನೀಡುವ ಆನಂದವೇ ಬೇರೆ. ಇದನ್ನು ಹೇಗೆ ತಯಾರಿಸುವುದು ತಿಳಿದುಕೊಳ್ಳಿ
ಲಿಂಬೆ ಶುಂಠಿ ರಸಂ ಇಬ್ಬರಿಗೆ ಬೇಕಾಗುವಷ್ಟು ಮಾಡಲು ಬೇಕಿರುವ ಸಾಮಗ್ರಿ: ಎರಡು ಕಪ್ ಬೇಳೆ, ಒಗ್ಗರಣೆಗೆ ಎರಡು ಚಮಚ ತುಪ್ಪ ಮತ್ತು ಸಾಸಿವೆ, ಕರಿಬೇವು, ಒಂದು ಚಮಚ ಜೀರಿಗೆ, ಅರ್ಧ ಚಮಚ ಕರಿಮೆಣಸು, 1 ನಿಂಬೆಹಣ್ಣು, 1 ಟೊಮೆಟೋ , 3 ಇಂಚು ಶುಂಠಿ, 6 ಹಸಿಮೆಣಸಿನಕಾಯಿ, ಚಿಟಿಕೆಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ತೊಗರಿ ಬೇಳೆಯನ್ನು ತೊಳೆದುಕೊಂಡು ಕುಕ್ಕರ್ನಲ್ಲಿ ನೀರು ಅರಶೀಣ ಸೇರಿಸಿ ಮೃದುವಾಗಿ ಬೇಯಿಸಿ ಕೊಳ್ಳಬೇಕು.ಬಾಣಲೆಯಲ್ಲಿ ಕಾಳು ಮೆಣಸು ಮತ್ತು ಜೀರಿಗೆ ಸೇರಿಸಿ ಒಣ ರೂಪದಲ್ಲಿಯೇ ಹುರಿಯಬೇಕು. ನಂತರ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಸಾಸಿವೆ ಮತ್ತು ಜೀರಿಗೆ ಸೇರಿಸಿ ಹುರಿದು ಹೆಚ್ಚಿಕೊಂಡ ಶುಂಠಿ ಚೂರು, ಹಸಿಮೆಣಸಿನ ಕಾಯಿ, ಕರಿಬೇವಿನ ಎಲೆ ಸೇರಿಸಿ ಹುರಿಯಬೇಕು. ಹೆಚ್ಚಿಕೊಂಡ ಟೊಮ್ಯಾಟೋ ಹಾಕಿ ಚೆನ್ನಾಗಿ ಬೆಂದ ನಂತರ ಬೇಯಿಸಿಕೊಂಡ ತೊಗರಿ ಬೇಳೆಯನ್ನು ಸೇರಿಸಬೇಕು. ರುಬ್ಬಿಕೊಂಡ ಕಾಳು ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 4-5 ನಿಮಿಷ ಕುದಿಸಿ ಬಳಿಕ ಉರಿಯನ್ನು ಆರಿಸಿ ನಿಂಬೆ ರಸವನ್ನು ಸೇರಿಸಬೇಕು. ಆಗ ನಿಂಬೆ ಶುಂಠಿ ರಸಂ ಸಿದ್ಧವಾಗುವುದು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


