ನಾಡಹಬ್ಬ ಮೈಸೂರು ದಸರಾದಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಗಜಪಡೆಯ ಭಾಗವಾಗಿದ್ದ ಗೋಪಾಲಸ್ವಾಮಿ (40) ಆನೆ ಕಾಡಾನೆ ದಾಳಿಗೆ ಬಲಿಯಾಗಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಹೋಬಳಿ ಬಳಿ ಕಾಡಾನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಗೋಪಾಲಸ್ವಾಮಿ ಆನೆ ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.
ಇತ್ತೀಚೆಗಷ್ಟೇ ನಡೆದ ದಸರಾ ಮಹೋತ್ಸವದಲ್ಲೂ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಗೋಪಾಲಸ್ವಾಮಿ ಎಂಬ ಆನೆ ಎಲ್ಲರ ಗಮನ ಸೆಳೆದಿತ್ತು.
ಗೋಪಾಲಸ್ವಾಮಿ ಆನೆಯನ್ನು ಮೇಯಲು ಬಿಟ್ಟಿದ್ದ ವೇಳೆ ಕೊಡಗಿನ ಭಾಗದಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ (ಅಯ್ಯಪ್ಪ) ನಡುವೆ ಗುದ್ದಾಟ ನಡೆದಿದೆ. ಕಾಲರ್ ಐಡಿ ಅಳವಡಿಸಲಾಗಿದ್ದ ಅಯ್ಯಪ್ಪ ಆನೆಯ ದಾಳಿಗೆ ಸಿಲುಕಿದ ಗೋಪಾಲಸ್ವಾಮಿಗೆ ಕಾಲು ಮುರಿದಿದೆ. ಈ ವೇಳೆ ದಂತದಿಂದ ಅಯ್ಯಪ್ಪ ಮನ ಬಂದಂತೆ ತಿವಿದು ದಾಳಿ ನಡೆಸಿದ್ದರಿಂಧ ತೀವ್ರ ರಕ್ತಸ್ರಾವಕ್ಕೊಳಗಾದ ಆನೆ ಚಿಂತಾಜನಕ ಸ್ಥಿತಿಗೆ ತಲುಪಿತು.
ಗೋಪಾಲಸ್ವಾಮಿ ಆನೆಯ ಮಾವುತ ಮಂಜು ಹಾಗೂ ಕಾವಾಡಿ ಆನೆಯನ್ನು ಕರೆತರಲು ಕಾಡಿಗೆ ಹೋದ ವೇಳೆ ಕಾದಾಟವನ್ನು ಕಣ್ಣಾರೆ ಕಂಡು ಆನೆಯನ್ನು ಬೆದರಿಸಲು ಹೋಗುತ್ತಿದ್ದಂತೆ ಅವರ ಮೇಲೆಯೇ ಕಾಡಾನೆ ದಾಳಿ ಮಾಡಲು ಮುಂದಾಗಿದೆ. ಮಾವುತ ತಪ್ಪಿಸಿಕೊಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ದಯಾನಂದ್, ಆರ್‌ಎಫ್‌ಓ ಗಣರಾಜ್ ಪಟಗಾರ್ ಭೇಟಿ ಇತ್ತು, ವೈದ್ಯಾಧಿಕಾರಿಗಳ ತಂಡವನ್ನು ಕರೆಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ಗೋಪಾಲಸ್ವಾಮಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ಯಂತ ಆಕರ್ಷಕ ಮೈಕಟ್ಟನ್ನು ಹೊಂದಿದ್ದ ಗೋಪಾಲಸ್ವಾಮಿ ಮುಂಬರುವ ವರ್ಷಗಳಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗಲು ಅಣಿಯಾಗುತ್ತಿದ್ದ.ಈ ಬಾರಿಯ ದಸರಾ ಮಹೋತ್ಸವದಲ್ಲೂ ಮರದ ಅಂಬಾರಿಯನ್ನು ಹೊರುವ ತಾಲೀಮಿನಲ್ಲೂ ಭಾಗಿಯಾಗಿ ಸೈ ಎನಿಸಿಕೊಂಡಿದ್ದ ,ಗೋಪಾಲಸ್ವಾಮಿಯ ಹಠಾತ್ ನಿಧನದಿಂದ ಅರಣ್ಯ ಇಲಾಖೆಗೆ ತುಂಬಲಾರದ ನಷ್ಟವಾಗಿದೆ.ಅನುಭವಿ ಆನೆಗಳ ಕೊರತೆ ಎದುರಿಸುತ್ತಿರುವ ಅರಣ್ಯ ಇಲಾಖೆಗೆ ಭಾರೀ ಹೊಡೆತ ಬಿದ್ದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


