ತರಗತಿಯಲ್ಲಿ ವಿದ್ಯಾರ್ಥಿಯೊಬ್ಬನನ್ನು ಪ್ರಾಧ್ಯಾಪಕರೊಬ್ಬರು ಟೆರರಿಸ್ಟ್ ಎಂದು ನಿಂದಿಸಿದ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದ ಎಂಐಟಿ ಕಾಲೇಜಿನಲ್ಲಿ ನಡೆದಿದ್ದು, ವೀಡಿಯೊ ವೈರಲ್ ಆಗುತ್ತಿದ್ದಂತೆ ಪ್ರಾಧ್ಯಾಪಕರನ್ನು ಅಮಾನತು ಮಾಡಲಾಗಿದೆ.
ನವೆಂಬರ್ 26ರಂದು ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಪ್ರಾಧ್ಯಾಪಕ ಮುಸ್ಲಿಮರು ಟೆರರಿಸ್ಟ್ ಗಳು ಎಂದು ವಿದ್ಯಾರ್ಥಿಯನ್ನು ನಿಂದಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದು, ಮುಸ್ಲಿಂ ಕಮ್ಯೂನಿಟಿಯನ್ನು ಟೆರರಿಸ್ಟ್ ಎಂದು ಕರೆಯಬೇಡಿ, ಅನಗತ್ಯವಾಗಿ ಈ ರೀತಿ ಮಾತನಾಡಬೇಡಿ ಎಂದು ತಿರುಗೇಟು ನೀಡಿದ್ದಾನೆ.
ವಿದ್ಯಾರ್ಥಿ ಕೆರಳುತ್ತಿದ್ದಂತೆ ಪ್ರಾಧ್ಯಾಪಕರು ವಿದ್ಯಾರ್ಥಿ ತನ್ನ ಮಗನಂತೆ ಎಂದು ಹೇಳಿದ್ದಾರೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿ `ನೀವು ನಿಮ್ಮ ಮಗನಿಗೆ ಹೀಗೆ ಮಾತನಾಡುತ್ತೀರಾ? ನೀವು ಅವನನ್ನು ಭಯೋತ್ಪಾದಕ ಎಂದು ಕರೆಯುತ್ತೀರಾ? ನೀವು ಎಷ್ಟು ಜನರ ಮುಂದೆ ನನ್ನನ್ನು ಹಾಗೆ ಕರೆಯುತ್ತೀರಿ? ಇದು ತರಗತಿ, ನೀವು ವೃತ್ತಿಪರರಾಗಿ ಕಲಿಸುತ್ತಿದ್ದೀರಿ, ಮುಸ್ಲಿಮನಾಗಿ ದಿನನಿತ್ಯ ಇದನ್ನು ಎದುರಿಸುವುದು ತಮಾಷೆಯಲ್ಲ. ನೀವು ನನ್ನನ್ನು ಹಾಗೆ ಕರೆಯಬೇಡಿ” ಎಂದು ವಿದ್ಯಾರ್ಥಿ ವಾಗ್ವಾದಕ್ಕಿಳಿದಿದ್ದಾನೆ. ವಿದ್ಯಾರ್ಥಿ ಆಕ್ಷೇಪಿಸುತ್ತಿದ್ದಂತೆ ಪ್ರೊಫೆಸರ್ ವಿಷಾದ ವ್ಯಕ್ತಪಡಿಸಿ, ಸ್ಥಳದಲ್ಲೇ ಕ್ಷಮೆ ಕೋರಿದ್ದಾರೆ.
ನೀವು ಕ್ಷಮೆ ಕೇಳಿದ ತಕ್ಷಣ ಮಾಡಿರುವ ಆರೋಪ ಬದಲಾಗಲ್ಲ ಎಂದು ವಿದ್ಯಾರ್ಥಿ ಆಕ್ಷೇಪಿಸಿದ್ದಾನೆ. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಉಪನ್ಯಾಸಕನ ವಿರುದ್ಧ ಮಾಹೆ ವಿಶ್ವವಿದ್ಯಾನಿಲಯ ಕ್ರಮ ಕೈಗೊಂಡಿದೆ. ವಿವಿಯ ಉಪನ್ಯಾಸಕನನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ನಿರ್ಧರಿಸಿದೆ. ವಿದ್ಯಾರ್ಥಿಗೆ ಕೌನ್ಸಿಲಿಂಗ್ ಮೂಲಕ ಸಾಂತ್ವನ ಹೇಳಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


