ತುರುವೇಕೆರೆ: ತುರುವೇಕೆರೆ.ತಾಲ್ಲೂಕಿನ ಆನೆಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಮೇನಹಳ್ಳಿ, ಆನೆಕೆರೆ ಮತ್ತು ಆನೆಕೆರೆ ಪಾಳ್ಯದಲ್ಲಿ ಶಾಸಕ ಮಸಾಲಾ ಜಯರಾಮ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕಾಮಗಾರಿಗಳಿಗೆ ಕ್ರಷರ್ ಗಳ ಮುಷ್ಕರದಿಂದಾಗಿ ಕಚ್ಚಾವಸ್ತುಗಳು ಲಭ್ಯವಿಲ್ಲದ ಕಾರಣ ಕಾಮಗಾರಿಗಳು ವಿಳಂಬವಾಗಿವೆ. ಆದರಿಂದ ತಡವಾಗಿ ಚಾಲನೆ ಕೊಟ್ಟಿದ್ದೇವೆ. ಇನ್ನು 40 ಕೋಟಿ ರೂ.ಗಳ ಕಾಮಗಾರಿಗಳು ಬಾಕಿಯಿವೆ. ಇನ್ನು ಒಂದು ತಿಂಗಳ ಒಳಗಾಗಿ ಬಾಕಿ ಇರುವ ಕಾಮಗಾರಿಗಳಿಗೆ ಚಾಲನೆ ಕೊಡಲಾಗುವುದು. ಇನ್ನು ಎರಡು ತಿಂಗಳ ಒಳಗಾಗಿ ಎಲ್ಲ 400 ಹಳ್ಳಿಗಳಿಗೆ ಸಿ.ಸಿ. ರಸ್ತೆ ಕಾಮಗಾರಿಯನ್ನು ಮಾಡಿ ಮುಗಿಸಲಾಗುವುದು. ಈಗಾಗಲೇ ಕಾಮಗಾರಿಗಳಿಗೆ ವೇಗವನ್ನು ಹೆಚ್ಚಿಸಿ ಎಂದು ಗುತ್ತಿಗೆದಾರರುಗಳಿಗೆ ತಾಕೀತು ಮಾಡಿದ್ದೇನೆ. ಫೆಬ್ರವರಿ ಒಳಗಾಗಿ ಕಾಮಗಾರಿಗಳನ್ನು ಮುಗಿಸಲಾಗುವುದು ಎಂದು ಹೇಳಿದರು.
ಸೋಮೇನಹಳ್ಳಿ ಗೆಟ್ ನಿಂದ ಮಲ್ಲಾಘಟ್ಟ ಆನೆಕೆರೆ ನಾಯಕನಘಟ್ಟ ರಸ್ತೆ ತುಂಬಾ ಹಾಳಾಗಿರುವುದರಿಂದ ಮತ್ತು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ರಸ್ತೆಯನ್ನು ಅಭಿವೃದ್ಧಿಪಡಿಸಲು 7.5 ಕೋಟಿ ರೂ.ಗಳು ಮಂಜೂರಾಗಿದ್ದು, ಅತಿಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ತಾಲ್ಲೂಕಿಗೆ ಸುಮಾರು 38 ಕೋಟಿ ರೂ.ಗಳು ಅಭಿವೃದ್ಧಿ ಕಾರ್ಯಕ್ಕೆ ಮಂಜೂರಾಗಿದೆ. ಈ ವಾರದಲ್ಲಿ ಸುಮಾರು 100 ಕೋಟಿ ಅನುದಾನ ಬಿಡುಗಡೆಯಾಗಿದೆ. ಏತ ನೀರಾವರಿ ಸೇರಿದಂತೆ ಈ ತಿಂಗಳ ಕೊನೆಯ ವಾರದಲ್ಲಿ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಬರುವ ಸಂಭವವಿದೆ. ಮುಂದಿನ ತಿಂಗಳು 13ರಂದು ಪ್ರಧಾನ ಮಂತ್ರಿಗಳು ಜಿಲ್ಲೆಗೆ ಆಗಮಿಸುವ ಕಾರ್ಯಕ್ರಮವಿರುವುದರಿಂದ ಕಾರ್ಯಕ್ರಮದಲ್ಲಿ ಬದಲಾವಣೆಗಳಾಗಬಹುದು. ಆನೆಕೆರೆ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು 1 ಕೋಟಿ ರೂಗಳ ಗುದ್ದಲಿ ಪೂಜೆಯನ್ನು ಮಾಡಲಾಗಿದೆ. ಇನ್ನು ಕಾಮಗಾರಿ ಬಾಕಿ ಇವೆ ಅವುಗಳಿಗೂ ಸಹ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ರಂಗನಾಥ್, ಮುಖಂಡರಾದ ಬಗರಹುಕುಂ ಕಮಿಟಿ ಸದಸ್ಯ ಜಗದೀಶ್, ಕೊಂಡಜ್ಜಿ ವಿಶ್ವನಾಥ್, ಕಾಳಂಜಿಹಳ್ಳಿ ಸೋಮಣ್ಣ, ವಿ.ಬಿ.ಸುರೇಶ್, ಶಂಕರಣ್ಣ,ಹುಚ್ಚೇಗೌಡ, ಯೋಗೀಶ್, ರಾಜಶೇಖರ್, ಮಧು. ರಾಮಕೃಷ್ಣಯ್ಯ, ರಘು, ರಂಗೇಗೌಡ ಮಾವಿನಹಳ್ಳಿ ಕುಮಾರ್ ಚೂಡಾಮಣಿ ಮತ್ತಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1