ಚಿಕ್ಕೋಡಿ:ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಬದುಕಿನಲ್ಲಿ ಮತ್ತೆ ಬೆಳಕು ತರುವ ದೃಷ್ಟಿಯಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಇಂದು ಆರಂಭಿಸಿದ ಪ್ರಜಾಧ್ವನಿ ಯಾತ್ರೆ ನಿಮಿತ್ತ ಚಿಕ್ಕೋಡಿಯಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ‘ಇದೊಂದು ಐತಿಹಾಸಿಕ ದಿನ. ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಸಮಸ್ಯೆ, ನೋವು, ಅಭಿಪ್ರಾಯವನ್ನು ಸಂಗ್ರಹಿಸಿ ಅದರ ಪ್ರತಿಧ್ವನಿಯಾಗಿ ನಿಮಗೆ ಶಕ್ತಿ ನೀಡಲು, ನಿಮ್ಮ ಬದುಕಿಗೆ ಬೆಳಕು ನೀಡಲು ನಾವು ಇಲ್ಲಿಗೆ ಬಂದಿದ್ದೇವೆ. ಜನರ ಸಂಕಷ್ಟ ಪರಿಹಾರ ಮಾಡುವುದೇ ಈ ಪ್ರಜಾಧ್ವನಿ ಯಾತ್ರೆಯ ಉದ್ದೇಶ.
ನಾವು ಈ ಯಾತ್ರೆಯನ್ನು ಬುದ್ಧ ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತನು ಶಿಲುಬೆಗೇರಿದ ಗಳಿಗೆಯಲ್ಲಿ, ಭೀಮಾಬಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮ ಕೊಟ್ಟ ಗಳಿಗೆಯಲ್ಲಿ, ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ ಇಂತಹ ಪವಿತ್ರ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
1924 ರಂದು ಬೆಳಗಾವಿಯಲ್ಲಿ ಗಾಂಧಿಜೀ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿ, ಬ್ರಿಟೀಷರನ್ನು ದೇಶದಿಂದ ತೊಲಗಿಸಿ ಜನರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಲು ಸಂಕಲ್ಪ ಮಾಡಿದರು. ಇಂದು ಅದೇ ಸ್ಥಳದಿಂದ ನಾವು ಈ ಯಾತ್ರೆಗೆ ನಾಂದಿ ಹಾಡಿದ್ದೇವೆ. ನಾಂದಿ ಎಂದರೆ ಯುದ್ಧದ ಆರಂಭ. ಹೆಜ್ಜೆ ಹಾಕಿ, ಪ್ರತಿಜ್ಞೆ ಮಾಡುತ್ತಿರುವ ಗಳಿಗೆ.
ನಾವು ಗಾಂಧಿ ಅವರ ಬಾವಿಯ ನೀರಿನಿಂದ ಬೆಳಗಾವಿಯಲ್ಲಿ ಬಿಜೆಪಿಯ ಕೊಳಕನ್ನು ತೊಳೆದು ಇಲ್ಲಿಗೆ ಬಂದಿದ್ದೇವೆ. ನಿಮ್ಮ ಜೀವನದಲ್ಲಿ ಜ್ಯೋತಿ ಬೆಳಗಬೇಕು. ನೀವು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದೀರಿ. ದಿನ ನಿತ್ಯ ನಿಮ್ಮ ಜೇಬಿಗೆ ಕತ್ತರಿ ಬೀಳುತ್ತಿದೆ. ಕಾಂಗ್ರೆಸ್ ಪಕ್ಷ ನಿಮಗೆ ಒಂದು ವಚನ ನೀಡಲು ಬದ್ಧವಾಗಿದೆ.
ತಮ್ಮೆಲ್ಲರಿಗೂ ಶುಭವಾಗಲಿ. ನಿಮ್ಮ ಮನೆಯಲ್ಲಿ ಕತ್ತಲು ಕಳೆದು ಬೆಳಕು ನೀಡಲು ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಸೇರಿ ಚರ್ಚೆ ಮಾಡಿ ಈ ಯಾತ್ರೆಯಲ್ಲಿ ಐದು ಭರವಸೆ ನೀಡುತ್ತಿದ್ದೇವೆ. ಅದರ ಪೈಕಿ ಮೊದಲ ಖಚಿತ ಭರವಸೆ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವುದು.
ಮಹಿಳೆಯರು, ಯುವಕರು, ರೈತರು 200 ಯುನಿಟ್ ವರೆಗೂ ವಿದ್ಯುತ್ ದರ ಕಟ್ಟುವಂತಿಲ್ಲ. ನಾವು ನುಡಿದಂತೆ ನಡೆದಿದ್ದೇವೆ. ನಡೆಯುತ್ತೇವೆ. ನಾಡಿನ ಜನರ ಭವಿಷ್ಯಕ್ಕಾಗಿ ನಾವು ಅನೇಕ ಯೋಜನೆ ಹಮ್ಮಿಕೊಂಡಿದ್ದೇವೆ.
ಅಡುಗೆ ಅನಿಲದ ಬೆಲೆ 400 ರಿಂದ 1100 ರು. ಆಗಿದೆ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಮೋದಿ ಸರ್ಕಾರ ವಚನ ನೀಡಿತ್ತು. ಯಾರಾದರೂ ರೈತನ ಆದಾಯ ಡಬಲ್ ಆಗಿದೆಯಾ? ಕಳೆದ ಚುನಾವಣೆ ಸಮಯದಲ್ಲಿ ನಿಮ್ಮ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುತ್ತೇವೆ ಎಂದರು.
ಸಾಲ ಮನ್ನಾ ಆಗಿದೆಯಾ? 10 ಹೆಚ್ ಪಿ 10 ಗಂಟೆ ವಿದ್ಯುತ್ ನೀಡುತ್ತೇವೆ ಎಂದರು. ನೀಡಿದರಾ? ಬಂಗಾರಪ್ಪ ಅವರ ಕಾಲದಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ಉಚಿತ ವಿದ್ಯುತ್ ನೀಡಲು ಆರಂಭಿಸಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, ನಾನು ಇಂಧನ ಸಚಿವನಾಗಿದ್ದಾಗ ರೈತರಿಗೆ ವಿದ್ಯುತ್ ನೀಡುವ ಸಮಯವನ್ನು 6 ರಿಂದ 7 ಗಂಟೆಗೆ ಹೆಚ್ಚಿಸಿದೆವು.
ರೈತರ ಬದುಕು ಯಶಸ್ವಿಯಾಗಬೇಕು ಎಂದು ಕಾಂಗ್ರೆಸ್ ನುಡಿದಂತೆ ನಡೆದಿದೆ. ಬಿಜೆಪಿ ಕಳೆದ ಮೂರುವರೆ ವರ್ಷಗಳಲ್ಲಿ ನುಡಿದಂತೆ ನಡೆಯಲಿಲ್ಲ. ಬದಲಿಗೆ ಬಿಜೆಪಿಯವರು ನಿಮ್ಮ ಬದುಕಿನಲ್ಲಿ ಚೆಲ್ಲಾಟವಾಡುತ್ತಾ ಬಂದರು.
ಮೂರು ವರ್ಷಗಳ ಹಿಂದೆ ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಅಧಿಕಾರ ಹಿಡಿದರು. ಈ ಸರ್ಕಾರದಲ್ಲಿ ಕೊಟ್ಟ ಮಾತು ಈಡೇರಿಸಿದರಾ? ನಿಮ್ಮ ಬದುಕಿನಲ್ಲಿ ಬೆಳಕು ಕೊಟ್ಟರಾ? ಹೀಗಾಗಿ ನಾವು ಬಿಜೆಪಿ ಪಾಪದ ಪುರಾಣ ಬಿಡುಗಡೆ ಮಾಡಿದ್ದೇವೆ. ಬಿಜೆಪಿಯ ಲಂಚಾವತಾರ, ಬಿಡುಗಡೆ ಮಾಡಿದ್ದೇವೆ.
ಈ ಸರ್ಕಾರ ಬಿ ರಿಪೋರ್ಟ್ ಸರ್ಕಾರ. ಮಂತ್ರಿಗಳು ಯಾವುದೇ ಪ್ರಕರಣದಲ್ಲಿ ಸಿಕ್ಕಿಬಿದ್ದರೂ ಅವರಿಗೆ ಬಿ ರಿಪೋರ್ಟ್ ಕೊಟ್ಟು, ಅವರು ಯಾವುದೇ ತಪ್ಪು ಕೆಲಸ ಮಾಡಿಲ್ಲ, ನಿರ್ದೇಷಿಯಾಗುತ್ತಾರೆ ಎಂದು ಮುಖ್ಯಮಂತ್ರಿಗಳು, ಗೃಹ ಸಚಿವರು ಸಂದೇಶ ನೀಡುತ್ತಾರೆ. ಈ ಸರ್ಕಾರ ಬೇಕಾ ಎಂದು ನೀವು ಆಲೋಚಿಸಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


