ಬೀದರ್: ಕೆ ಎಸ್ ಆರ್ ಟಿ ಸಿ ಬಸ್ಸುಗಳ ಸಂಚಾರ ಅವ್ಯವಸ್ಥೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ತಾಲೂಕು ಘಟಕ ವತಿಯಿಂದ ಔರಾದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನಲ್ಲಿ ಬಸ್ ಸಂಚಾರದ ಅವ್ಯವಸ್ಥೆ ಕುರಿತು ಹಲವಾರು ಬಾರಿ ತಾಲೂಕಿನ ಸಾರಿಗೆ ವ್ಯವಸ್ಥಾಪಕರನ್ನು ಸಂಪರ್ಕಿಸಿ ಮನವಿ ಪತ್ರ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ಬಸ್ ಪಾಸ್ ಇರುವ ಮಕ್ಕಳಿಗೆ ಶಾಲಾ ಅವಧಿಯಲ್ಲಿ ಬಸ್ಸುಗಳು ಸಿಗಬೇಕು, ಸಾರ್ವಜನಿಕರ ಸಂಚಾರಕ್ಕೆ ಸಮರ್ಪಕವಾಗಿ ಬಸ್ ಗಳು ಓಡಾಡಬೇಕು. ತಾಲೂಕಿನ ಹಳೆಯ ಬಸ್ ಗಳನ್ನು ಹಿಂಪಡೆದು ಹೊಸ ಬಸ್ ನೀಡಬೇಕು, ಬಸ್ ನಿಲ್ದಾಣವನ್ನು ಸ್ವಚ್ಛತೆಯಿಂದ ಕಾಪಾಡಬೇಕು, ಬಸ್ ನಿಲ್ದಾಣದ ನಿರ್ವಹಣೆಯನ್ನು ಹೊಸಬರಿಗೆ ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ತಾಲೂಕಿನ ಗಡಿ ಭಾಗದಲ್ಲಿ ಹಳ್ಳಿಗಳು, ತಾಂಡಾಗಳಿಗೆ ಬಸ್ ಗಳ ವ್ಯವಸ್ಥೆಯನ್ನು ಸರಿಯಾಗಿ ಮಾಡಬೇಕು, ದೂರದ ಮುಂಬೈ, ಬೆಂಗಳೂರು, ಗುಲ್ಬರ್ಗ, ಹೈದರಾಬಾದ್ ಈ ಊರುಗಳಿಗೆ ಹೋಗಲು ಉತ್ತಮ ಬಸ್ ಗಳ ವ್ಯವಸ್ಥೆ ಮಾಡಬೇಕು, ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬಸ್ ನಿಲ್ದಾಣದ ನಿರ್ವಾಹಕರು ಹೆಣ್ಣು ಮಕ್ಕಳನ್ನು, ವೃದ್ಧರನ್ನು ಅವಾಚ್ಯವಾಗಿ ನಿಂದಿಸುತ್ತಿದ್ದು, ಅಂತಹ ಅಧಿಕಾರಿಗಳನ್ನು ವಜಾಗೊಳಿಸಿ, ಜನಸ್ನೇಹಿ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದರು.
ಬಸ್ ಡಿಪೋ ಮ್ಯಾನೇಜರ್ ದುರ್ವರ್ತನೆ ಹಾಗೂ ದುರಾಡಳಿತ ನಿಲ್ಲಬೇಕು. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಗೌರವಯುತವಾಗಿ ಮಾತನಾಡಬೇಕು. ಇಲ್ಲವಾದರೆ, ಡಿಪೋ ಮ್ಯಾನೇಜರ್ ನ್ನು ಬೇರೆಡೆಗೆ ವರ್ಗಾವಣೆ ಮಾಡಿ, ಹೊಸ ಮ್ಯಾನೇಜರ್ ನ್ನು ಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯಕ್ಕೆ ಶಾಲೆಗೆ ತಲುಪುವಂತಾಗಲು ಸರಿಯಾದ ಬಸ್ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಿಗೆ ಪ್ರಯಾಣಿಸಲು ಸರಿಯಾದ ಸಮಯಕ್ಕೆ ಬಸ್ ಗಳ ವ್ಯವಸ್ಥೆಗಳನ್ನು ಮಾಡಿಕೊಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರವೇ ತಾಲೂಕು ಅಧ್ಯಕ್ಷ ಅನಿಲ ದೇವಕತ್ತೆ, ಗೌರವಾಧ್ಯಕ್ಷ ಬಸವರಾಜ ಶೇಟಕರ, ನರ್ಸಿಂಗ್ ಹಕ್ಕೆ ಅರ್ಜುನ್, ಬಂಗೆ ಯಾಕೋ ಕಾಂಬ್ಳೆ, ಬಾಬು ರಾತೋಡ್ , ರಮೇಶ್ ರಾಥೋಡ್, ಪಾಂಡುರಂಗ, ಬಾಲಾಜಿ, ಆಕಾಶ ದೇವಕತ್ತೆ ಹಾಗೂ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ


