ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಗೆ ಹೊಂದಿಕೊಂಡಿರುವ ಮುತ್ತುರಾಯನಗರ ಬಡಾವಣೆಯಲ್ಲಿ ಮಂಜುಳಾ ಅನಂತ್ ಕುಮಾರ್ ಎಂಬುವರ ಮನೆಗೆ ಹಾಡಹಗಲೇ ಕನ್ನ ಹಾಕಿರುವ ಘಟನೆ ನಡೆದಿದೆ
ಮಧ್ಯಾಹ್ನ ಸುಮಾರು 2:30 ರಿಂದ ಸಂಜೆ 5:00 ಒಳಗೆ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕನ್ನ ಹಾಕಿದ ಕಳ್ಳರು, 100 ರಿಂದ 110 ಗ್ರಾಂ ಚಿನ್ನ, ಒಂದು ಕೆ.ಜಿ. ಬೆಳ್ಳಿ 2,70,000 ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಮನೆಯ ಮಾಲೀಕರಾದ ಮಂಜುಳಾರವರು ಎರಡು ದಿನಗಳ ಹಿಂದೆ ಯಾವುದೋ ಕಾರ್ಯನಿಮಿತ್ತ ತಮ್ಮ ಸಂಬಂಧಿಕರ ಊರಿಗೆ ತೆರಳಿದ್ದಾರೆ ಮನೆಯಲ್ಲಿ ಅವರ ಪತಿ ಆನಂದ್ ಕುಮಾರ್ ಒಬ್ಬರೇ ಇದ್ದು, ಇವರು ಬೆಸ್ಕಾಂ ಇಲಾಖೆಯಲ್ಲಿ ಮೀಟರ್ ರೀಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಎಂದಿನಂತೆ ಅವರು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದಾರೆ . ಮಧ್ಯಾಹ್ನ 2 ಗಂಟೆಗೆ ಮನೆಗೆ ಊಟಕ್ಕೆಂದು ಬಂದಿದ್ದಾರೆ, ಊಟ ಮುಗಿಸಿಕೊಂಡು ನಂತರ ಮನೆಯ ಬೀಗ ಹಾಕಿಕೊಂಡು ಮೀಟರ್ ರೀಡಿಂಗ್ ಕೆಲಸಕ್ಕೆ ಹೊರಗೆ ಹೋಗಿದ್ದಾರೆ.
ಇದನ್ನೇ ಕಾದು ಕುಳಿತು ಕಳ್ಳರು ಮನೆಯ ಮುಖ್ಯ ದ್ವಾರದ ಪಕ್ಕದಲ್ಲಿರುವ ಕಿಟಕಿಯನ್ನು ಮುರಿದು ಕಿಟಕಿಯ ಸರಳಿನ ಒಳಗಿಂದ ಕೈಯನ್ನು ಹಾಕಿ ಒಳಗಿನಿಂದ ಲಾಕ್ ಓಪನ್ ಮಾಡಿ ಅವರ ಕೈಚಳಕವನ್ನು ತೋರಿದ್ದಾರೆ. ಕೆಲಸವನ್ನು ಮುಗಿಸಿಕೊಂಡು ಬಂದ ಆನಂದ್ ಕುಮಾರ್ ರವರು ಮನೆಗೆ ಬಂದು ನೋಡಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.
ಘಟನೆಯಿಂದ ಕಂಗಾಲಾದ ಆನಂದ್ ಕುಮಾರ್ ತನ್ನ ಸ್ನೇಹಿತರನ್ನು ಕರೆದುಕೊಂಡು ತುರುವೇಕೆರೆ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕರಾದ ಗೋಪಾಲ್ ನಾಯಕ್, ಸಬ್ ಇನ್ಸ್ಪೆಕ್ಟರ್ ಹೊನ್ನೇಗೌಡ ಸ್ಥಳಕ್ಕೆ ಶ್ವಾನದಳ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಸಂಬಂಧ ಪಟ್ಟವರಿಂದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1