ತುರುವೇಕೆರೆ: ಸರ್ಕಾರವು ಜನರಿಗೆ ತಲುಪಬೇಕಾದ ಸವಲತ್ತುಗಳ ಅರಿವು ಮತ್ತು ಜನರಿಗೆ ತಲುಪುವಂತಹ ಕಾರ್ಯಕ್ರಮ ಏರ್ಪಡಿಸಿದೆ. ಇದನ್ನು ಸಾರ್ವಜನಿಕರು ಮತ್ತು ರೈತರು ಸದುಪಯೋಗಪಡಿಸಿಕೊಳ್ಳಿ ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಲೋಕಮ್ಮನಹಳ್ಳಿಯಲ್ಲಿ ಏರ್ಪಡಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಸೂಚನೆಯಂತೆ ಈ ಕಾರ್ಯಕ್ರಮ ಸರ್ಕಾರದ ಯೋಜನೆಗಳು ಜನರಿಗೆ ನೇರವಾಗಿ ತಲುಪಿಸುವಂಥಹ ಕಾರ್ಯಕ್ರಮ ನಡೆಯುತ್ತಿದೆ. ನಿಮ್ಮ ಕುಂದು ಕೊರತೆ ಮತ್ತು ಕಂದಾಯ ಇಲಾಖೆಗೆ ಸಂಬಂಧಪಟ್ಟ ದೂರುಗಳು ಇದ್ದಲ್ಲಿ ಅವುಗಳನ್ನು ಕಾನೂನಿನ ಅಡಿಯಲ್ಲಿ ಸ್ಥಳದಲ್ಲೇ ಬಗೆಹರಿಸಲಾಗುವುದು. ಮಾಶಾಸನಗಳಿಗೆ ಸಂಬಂಧಪಟ್ಟ ಅರ್ಜಿಗಳನ್ನು ನೀಡಿದರೆ ಅವುಗಳನ್ನು 74 ಘಂಟೆಗಳಲ್ಲಿ ಸ್ಥಳದಲ್ಲೇ ಅರ್ಜಿ ವಿಲೇವಾರಿ ಮಾಡಿಲಾಗುವುದು. ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ 2022ರ ಜುಲೈ ನಿಂದ ಡಿಸೆಂಬರ್ ವರೆಗೆ 2541 ಪಾವತಿ ಖಾತೆ ಮಾಡಿಕೊಡಲಾಗಿದೆ ಹಿಂದೆ ಪಾವತಿ ಖಾತೆ ಮಾಡಲು 30 ದಿನಗಳ ಅವಧಿ ಇತ್ತು ಇದನ್ನು ಸರ್ಕಾರ 15 ದಿನಗಳಿಗೆ ಇಳಿಸಿ ರೈತರಿಗೆ ಆಗುತಿದ್ದ ತೊಂದರೆಯನ್ನು ನಿವಾರಿಸಿದೆ ಎಂದು ತಿಳಿಸಿದರು.
ಪ್ರತೀ ಕಂದಾಯ ಅಧಿಕಾರಿಗಳಿಗೆ ವಾರಕ್ಕೆ 5 ಸ್ಮಶಾನಗಳನ್ನು ಅಳತೆ ಮಾಡಿ ಸರಿಪಡಿಸಲು ಗುರಿ ನಿಗದಿಪಡಿಸಿದೆ. ಇದಕ್ಕೆ ಸಿಬ್ಬಂದಿ ಕೊರತೆಯಿಂದ ಸ್ವಲ್ಪ ಹಿನ್ನಡೆಯಾಗಿದೆ. ರೈತರ ಜಮೀನಿನ ರಸ್ತೆಗಳ ಒತ್ತುವರಿಗಳು ಬಹಳ ದೊಡ್ಡ ಸಮಸ್ಯೆಯಾಗಿದ್ದು, ಇವುಗಳನ್ನು ಆದ್ಯತೆಯ ಮೇರೆಗೆ ಒತ್ತುವರಿ ತೆರವುಗೊಳಿಸಿ ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದೇವೆ. ಹಾಗೆಯೇ ಪಹಣಿ ತಿದ್ದುಪಡಿಗೆ ಚಾಲನೆಯನ್ನು ಕೊಟ್ಟಿದ್ದೇವೆ. ಈಗಾಗಲೇ 980 ಆರ್.ಟಿ.ಸಿ. ಗಳನ್ನು ತಿದ್ದುಪಡಿ ಮಾಡಲಾಗಿದೆ. 880 ಕಾರಣಾಂತರಗಳಿಂದ ಬಾಕಿ ಉಳಿದಿವೆ ಎಂದರು.
ತಾಲ್ಲೂಕು ಕಚೇರಿಯಲ್ಲಿ ದಲ್ಲಾಳಿಗಳಿಗೆ ಅವಕಾಶವಿಲ್ಲ, ರೈತರು ಮತ್ತು ಸಾರ್ವಜನಿಕರು ನೇರವಾಗಿ ಬಂದು ಅಧಿಕಾರಿಗಳನ್ನು ಭೇಟಿ ಮಾಡಬಹುದು. ರೈತರು ತಾವು ಬೆಳೆದ ರಾಗಿಯನ್ನು ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಿ, ಯಾವುದೇ ಮಧ್ಯವರ್ತಿಗಳ ಬಳಿ ತೆರಳಬೇಡಿ ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ನರೇಗಾ 15 ವರ್ಷವಾದರೂ ಸಹ ಮೊದಲನೆಯ ಕಾರ್ಯಕ್ರಮವಾಗಿ ನಡೆಯುತ್ತಿದೆ. 2006 ರಲ್ಲಿ ಜಾರಿಗೆ ಬಂದಂತಹ ಯೋಜನೆಯಲ್ಲಿ 250 ತರದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ 15 ಕೋಟಿ ಹಣವನ್ನು ಮೀಸಲಿಟ್ಟಿದೆ. ನಮ್ಮ ರಾಜ್ಯ ಸರ್ಕಾರವು ನಿಗದಿಪಡಿಸಿದಕ್ಕಿಂತ ಹೆಚ್ಚಿನ ಕಾಮಗಾರಿಗಳನ್ನು ಮಾಡಿದೆ. ಜಿಲ್ಲೆಯಲ್ಲಿ ನರೇಗಾ ಕಾಮಗಾರಿಯಲ್ಲಿ ಎಲ್ಲಾ ತಾಲ್ಲೂಕುಗಳಿಗಿಂತ ನಮ್ಮ ತಾಲೂಕು ಮೊದಲನೆಯದು ಎಂದರು. ನಮ್ಮ ರೈತರು ಕೃಷಿ ಹೊಂಡಗಳ ಮಹತ್ವವನ್ನು ಹಾಗೂ ಉಪಯೋಗಗಳನ್ನು ಮರೆತಿದ್ದಾರೆ. ಅವುಗಳನ್ನು ಮುಚ್ಚಿಹಾಕುವ ಕಾರ್ಯದಲ್ಲಿ ಕೆಲವು ರೈತರು ತೊಡಗಿದ್ದಾರೆ ಇದು ದುರಂತ. ಇವುಗಳ ಉಪಯೋಗವನ್ನು ಅರಿಯಬೇಕು. ಕೇಂದ್ರ ಸರ್ಕಾರವು ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತೀ ಮನೆಗೆ ಶುದ್ಧ ಕುಡಿಯುವ ನೀರನ್ನು 2024ರ ಒಳಗೆ ಒದಗಿಸುವ ಗುರಿಯನ್ನು ಹಾಕಿಕೊಂಡಿದೆ. ಇದರ ನಿಟ್ಟಿನಲ್ಲಿ ಕಾಮಗಾರಿಗಳು ತ್ವರಿತವಾಗಿ ನಡೆಯುತ್ತಿವೆ ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ವಸತಿಕಲ್ಪಿಸುವ ಕೆಲಸಗಳು ನಡೆಯುತ್ತಿವೆ ಎಂದರು.
ಕೃಷಿ ಇಲಾಖೆಯ ಉಪನಿರ್ದೇಶಕಿ ಪೂಜಾ ಮಾತನಾಡಿ, ಕೃಷಿ ಯಂತ್ರೋಪಕರಣಗಳು ಮತ್ತು ಬೀಜಗಳು ಸೇರಿದಂತೆ ಹತ್ತು ಹಲವಾರು ಉಪಕರಣಗಳ ಲಭ್ಯತೆ ಇದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಿ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಬೆಳೆನಷ್ಟ ಪಡೆಯಲು ಬೆಳೆ ಸಮೀಕ್ಷೆ ಆಪ್ ನಲ್ಲಿ ನಮೂದಿಸಬಹುದಾಗಿದೆ.ಇದನ್ನು ನೇರವಾಗಿ ರೈತರೇ ನಮೂದಿಸಬಹುದಾಗಿದ್ದು ಇದರಲ್ಲಿ ನಮೂದಿಸಿ ಬೆಲೆ ನಷ್ಟದ ಪರಿಹಾರ ಪಡೆಯಿರಿ ಎಂದು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಆಂಜನೇಯ ರೆಡ್ಡಿ ಮಾತನಾಡಿ, ತಮ್ಮ ಇಲಾಖೆಯಲ್ಲಿ ಹನಿ ನೀರಾವರಿ ಸೇರಿದಂತೆ ರೈತರಿಗೆ ಸಿಗುವಂತಹ ಸವಲತ್ತುಗಳ ಬಗ್ಗೆ ತಿಳಿಸಿದರು. ಜೊತೆಗೆ ಸಬ್ಸಿಡಿ ದರದಲ್ಲಿ ರೈತರಿಗೆ ಬೇಕಾದ ಸಲಕರಣೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎ. ಡಿ. ಎಲ್. ಆರ್. ಶಿವಶಂಕರ್, ಬೆಸ್ಕಾಂ ಎ.ಇ ಇ ಚಂದ್ರನಾಯಕ್, ಟಿ.ಎಚ್.ಓ ಡಾ.ಸುಪ್ರಿಯಾ, ಆಹಾರ ಇಲಾಖೆಯ ಪ್ರೇಮಾ, ಆರ್.ಐ. ಶಿವಕುಮಾರ್, ಪಿ.ಡಿ.ಓ ಸಂತೋಷ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾ.ಪಂ ಸದಸ್ಯರು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1