ತುಮಕೂರು: ನರೇಂದ್ರ ಮೋದಿ ಹೇಳುವ ಸಬ್ ಕ ಸಾಥ್ ಸಬ್ ಕ ವಿಕಾಸ್ ನಲ್ಲಿ ಮಕ್ಕಳು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಯುವಕರನ್ನು ಹೊರಗಿಟ್ಟಿದ್ದಾರೆ. ಮೋದಿಜೀ ಯಾಕ್ರೀ ಇಂಥಾ ಸುಳ್ಳುಗಳನ್ನು ಹೇಳುತ್ತೀರಿ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ತುಮಕೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಅವರು ಈ ದೇಶವನ್ನು ಸಾಲಗಾರರ ದೇಶವಾಗಿ ಮಾಡಿದ್ದಾರೆ. ಸ್ವಾತಂತ್ರ್ಯ ನಂತರದಿಂದ ಮನಮೋಹನ್ ಸಿಂಗ್ ಅವರ ಸರ್ಕಾರದ ಕೊನೆಯವರೆಗೆ ದೇಶದ ಒಟ್ಟು ಸಾಲ ಇದ್ದದ್ದು 53 ಲಕ್ಷ ಕೋಟಿ. ಈ ವರ್ಷದ ಮಾರ್ಚ್ ಅಂತ್ಯಕ್ಕೆ ದೇಶದ ಒಟ್ಟು ಸಾಲ 153 ಲಕ್ಷ ಕೋಟಿಗೆ ತಲುಪಲಿದೆ. 9 ವರ್ಷದಲ್ಲಿ ಮೋದಿ ಅವರು 100 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದರು.
ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು, ಮಾಡಿದ್ದಾರ? ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಪೆಟ್ರೋಲ್, ಡೀಸೆಲ್, ಗ್ಯಾಸ್, ಅಕ್ಕಿ, ಗೋದಿ, ಕಬ್ಬು, ಅಡುಗೆ ಎಣ್ಣೆ ಬೆಲೆಗಳು ಎಷ್ಟಿತ್ತು ಎಂದು ಕಾಂಗ್ರೆಸ್ ಪಕ್ಷ ಇಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಬಸವರಾಜ ಬೊಮ್ಮಾಯಿ ಅವರಿಗೆ ತಾಕತ್ ಇದ್ದರೆ ಈ ಲೆಕ್ಕ ತಪ್ಪು ಎಂದು ಹೇಳಲಿ. 414 ರೂ. ಇದ್ದ ಗ್ಯಾಸ್ ಬೆಲೆ ಇಂದು 1150 ರೂ. ಆಗಿದೆ. ಇಷ್ಟು ದುಡ್ಡು ಕೊಡಲು ರಾಜ್ಯದ ತಾಯಂದಿರಿಗೆ ಕಷ್ಟವಾಗಲ್ವ? ರೈತರು ಬಳಸುವ ಡಿಎಪಿ ಬೆಲೆ 450 ರೂ. ಇದ್ದದ್ದು ಇಂದು 1400 ರೂ. ಆಗಿದೆ. ಇದೇನಾ ಅಚ್ಚೇದಿನ್? ಇದಕ್ಕೆ ಕಾರಣವಾದ ಬಿಜೆಪಿ ಸರ್ಕಾರ ಇರಬೇಕ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy