ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಕ್ಲಸ್ಟರ್ ವ್ಯಾಪ್ತಿಯಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆಯ್ದ 120 ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ವಿವಿಧ ಕೌಶಲ್ಯಗಳನ್ನು ವಿಶೇಷವಾಗಿ ಕಲಿಸಿ, ನಲಿಯುತ್ತಾ ಕಲಿಯುತ್ತಾ ಪ್ರತಿಭೆಯನ್ನು ಪ್ರದರ್ಶಿಸುವ ಹಬ್ಬವೇ ಕಲಿಕಾ ಹಬ್ಬ ಎಂದು ಶಿಕ್ಷಕರ ಸಂಘದ ಗೌರವಾಧ್ಯಕ್ಷ ಐ.ಎ.ನಾರಾಯಣಪ್ಪ ತಿಳಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೈ.ಎನ್.ಹೊಸಕೋಟೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಮಾತನಾಡಿದ ಅವರು, ಅವಕಾಶಗಳು ಎಲ್ಲರಿಗೂ ದೊರೆಯುವುದಿಲ್ಲ. ದೊರೆತಾಗ ಸದ್ವಿನಿಯೋಗ ಮಾಡಿಕೊಂಡು ಬೆಳೆಯಬೇಕು. ಇಲ್ಲಿ ಕಲಿತ ಕೌಶಲ್ಯವನ್ನು ನಿಮ್ಮ ಇನ್ನಿತರೆ ಸಂಗಡಿಗರಿಗೂ ಕಲಿಸಿ ಅವರೊಂದಿಗೆ ನೀವು ಪ್ರಗತಿ ಕಾಣಬೇಕು. ಶಿಕ್ಷಕರು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರಪ್ಪ, ಕಲಿಕೆ ನಿರಂತರ ಪ್ರಕ್ರಿಯೆ. ವಿದ್ಯೆಯನ್ನು ಕಲಿತು ಹಂಚಿದಷ್ಟು ಅದು ದ್ವಿಗುಣವಾಗುತ್ತದೆ. ಹಾಗಾಗಿ ಇಲ್ಲಿ ಕಲಿತ ವಿದ್ಯಾರ್ಥಿಗಳು ಸಹಪಾಠಿಗಳಿಗೂ ಕಲಿಸಬೇಕು ಎಂದರು.
ಶಿಕ್ಷಕರ ಸಂಘದ ರಾಜ್ಯ ನಿರ್ದೇಶಕ ರಾಮಾಂಜಿ ಮಾತನಾಡಿ, ಈ ಕಲಿಕಾ ಹಬ್ಬದಲ್ಲಿ ನಾಲ್ಕು ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಕಲಿಕಾ ತರಬೇತಿಯನ್ನು ನೀಡಲಾಗುತ್ತಿದೆ. ಈ ಕಾರ್ಯಕ್ರಮ ರಾಜ್ಯದೆಲ್ಲೆಡೆ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಿದೆ ಎಂದರು. ಮುಂದಿನ ರಾಷ್ಟ್ರೀಯ ಶಿಕ್ಷಣ ನೀತಿಗೆ ಇದು ಪೂರಕವಾದ ಕಾರ್ಯಕ್ರಮವಾಗಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೆ ಮುಂಚೆ ವಿದ್ಯಾರ್ಥಿಗಳು ಕಳಶಗಳೊಂದಿಗೆ ಪುರಮೆರವಣಿಗೆ ನಡೆಸಿದರು.ವಿವಿಧ ವೇಷಭೂಷಣಗಳಲ್ಲಿ ವಿದ್ಯಾರ್ಥಿಗಳು ಗಮನ ಸೆಳೆದರು. ತರಗತಿಗಳಲ್ಲಿ ವಿವಿಧ ಮಾದರಿಯ ಕ್ರಾಪ್ಟ್ ಕಟಿಂಗ್ನಲ್ಲಿ ವಿವಿದ್ಯ ವಿನ್ಯಾಸಗಳು ಮೂಡಿಬಂದವು.
ನೃತ್ಯ, ಲೇಜೀಮ್ಸ್, ಡಂಬಲ್ಸ್ ಪ್ರದರ್ಶನಗೊಂಡವು. ಹಾಡುಗಳ ಮೂಲಕ ವಿದ್ಯಾರ್ಥಿಗಳು ರಂಜಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 13 ಸರ್ಕಾರಿ ಪ್ರಾಥಮಿಕ ಮತ್ತು 2 ಪ್ರೌಢಶಾಲೆಗಳಿಂದ ತಲಾ 8ರಂತೆ ಒಟ್ಟು 120 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಗ್ರಾಮಪಂಚಾಯಿತಿ ಅಧ್ಯಕ್ಷರಾದ ಲೀಲಾವತಿ ತಿಪ್ಪೇಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿ.ಆರ್.ಪಿಗಳಾದ ಬಂಗಾರಲಿಂಗ, ನರೇಂದ್ರನಾಯ್ಕ, ಗ್ರಾ.ಪಂ. ಕಾರ್ಯದರ್ಶಿ ಹನುಮಂತರಾಯಪ್ಪ, ಬಿ.ಆರ್.ಸಿ ಮುರುಗೇಶ್ಮಠ್, ಶಿಕ್ಷಕರಾದ ಚನ್ನಮಲ್ಲಿಕಾರ್ಜುನ, ಮಂಜುನಾಥ, ಗುರುಮೂರ್ತಿ, ಹನುಮಂತರಾಯಪ್ಪ, ರಾಮಾಂಜಿ, ಸಿದ್ದರಾಜು, ಕರಿಯಾಲಪ್ಪ, ಪ್ರಹ್ಲಾದ್, ಮುಖಂಡರಾದ ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy