ತಿಪಟೂರು: ನಗರದ ಇಂದಿರಾನಗರದಲ್ಲಿರುವ ಸರ್ಕಾರಿ ಜಾಗ ಹದ್ದಿ ಹದುಹಿಡಿದ ಹಳ್ಳದ ಸುಮಾರು ಕೋಟ್ಯಾಂತರ ರೂ ಬೆಲೆಬಾಳುವ ಜಾಗವನ್ನು ಜಿ.ಬಿ.ಗಂಗಯ್ಯನವರ ಮಕ್ಕಳಾದ ಪುಷ್ಪಾವತಿ ಮತ್ತು ಮೋಹನ ಕುಮಾರಿ ಎಂಬುವವರು ಒತ್ತುವರಿ ಮಾಡಿಕೊಂಡಿದ್ದರು ಈ ಬಗ್ಗೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಕ್ರಮ ಜರುಗಿಸಲು ಮೀನಾಮೇಷ ಎಣಿಸುತ್ತಿದ್ದಾರೆಂದು ವಾರ್ಡ್ ನಂ 18ರ ನಗರಸಭಾ ಸದಸ್ಯ ಮಹೇಶ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನಗರದಲ್ಲಿ ಅನೇಕ ಬಡವರು ವಾಸಿಸುತ್ತಿದ್ದಾರೆ. ಸರ್ಕಾರಿ ಜಾಗವನ್ನು ಮಂಜೂರು ಮಾಡಿಸಿಕೊಂಡು ಮನೆಕಟ್ಟಿಕೊಂಡು ವಾಸಿಸುತ್ತಿದ್ದು, ಇನ್ನು ಅನೇಕ ನಿರ್ಗತಿಕರು ನಿವೇಶನವಿಲ್ಲದೇ ಹೋರಾಡುತ್ತಿದ್ದಾರೆ. ಆದರೆ ಪ್ರಭಲ ಗಾಣಿಗ ಸಮುದಾಯಕ್ಕೆ ಸೇರಿದ ಮೋಹನ ಕುಮಾರಿ ಮತ್ತು ಪುಷ್ಪಾವತಿ ಎಂಬುವವರು ಒತ್ತುವರಿ ಮಾಡುತ್ತಿದ್ದು, ಸರ್ಕಾರ ನೋಟಿಸ್ ನೀಡಿದರು ಅದನ್ನು ತೆಗೆದುಕೊಳ್ಳದೇ ಕಟ್ಟಡದ ಕಾಮಗಾರಿಯನ್ನು ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹಾಗು ನಿವೇಶನ ರಹಿತರಿಗೆ ತುಂಬಾ ಅನ್ಯಾಯವಾಗುತ್ತಿದೆ ಎಂದು ಅವರು ದೂರಿದರು.
ಮಾರನಗೆರೆ ಗ್ರಾಮದ ಸರ್ವೇ ನಂ 11/2ರ ಜಮೀನನ್ನು ದಿನಾಂಕ: 14-09-2018ರಂದು ಮಾರನಗೆರೆ ಗಡಿಯನ್ನು ನಿರ್ಧರಿಸಿದ್ದರು. ಆದರೆ ತಿಪಟೂರು ಗಡಿಯನ್ನು ಇದುವರೆಗೂ ಗುರುತಿಸಿ ಸರ್ಕಾರಿ ಜಾಗವನ್ನು ಬಿಡಿಸಿಕೊಳ್ಳಲು ತಾಲ್ಲೂಕು ಕಂದಾಯ ಇಲಾಖೆಗೆ ಇದುವರೆಗೂ ಸಾಧ್ಯವಾಗಿಲ್ಲ. ಇಂತಹ ಸಮಯದಲ್ಲಿ ಇಲ್ಲಿ ಎಂಟು ಅಡಿಗೂ ಎತ್ತರದ ಗೋಡೆಯನ್ನು ನಿರ್ಮಿಸಿ ಅದರೊಳಗೆ ಕಟ್ಟಡವನ್ನು ಕಟ್ಟುವ ಹುನ್ನಾರವನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.
ಇವರು ಗಾಣಿಗ ಸಮುದಾಯದವರಾಗಿದ್ದು, ಇವರಿಗೆ ಇಡೀ ಸಮುದಾಯದ ಬೆಂಬಲ, ರಾಜಕೀಯ ಬೆಂಬಲವೂ ದೊರೆತಿದ್ದು, ಸರ್ಕಾರಿ ನೋಟೀಸ್ ನೀಡಿದರೂ, ಅದನ್ನು ತೆಗೆದುಕೊಳ್ಳುವುದಿಲ್ಲವೆಂದು ಹೇಳುವ ಮಟ್ಟಿಗೆ ತಲುಪಿದ್ದಾರೆ. ಮನೆಯ ಬಾಗಿಲಿಗೆ ನೋಟೀಸ್ ಅಂಟಿಸಿದರು ಯಾವುದಕ್ಕೂ ಕ್ಯಾರೆ ಎನ್ನದೇ ಕಟ್ಟಡದ ಕಾಮಗಾರಿಯನ್ನು ಮುಂದುವರೆಸುತ್ತಲೇ ಇದ್ದಾರೆ ಎಂದರು.
ಈ ಭೂ ಕಬಳಿಕೆಯ ಬಗ್ಗೆ ಹಿಂದಿನ ತಹಸೀಲ್ದಾರ್ ಆಗಿದ್ದ ಆರತಿಯವರಿಗೂ ದೂರು ನೀಡಿದ್ದರು. ಅವರು ಕ್ರಮ ಕೈಗೊಳ್ಳದೇ ಇದ್ದಾಗ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೆ. ಆಗ ಜಿಲ್ಲಾಧಿಕಾರಿಗಳು ಗಡಿಯನ್ನು ಗುರುತಿಸಿ ಸೂಕ್ತ ಬಂದೂ ಬಸ್ತ್ ಮಾಡಲು ಆದೇಶಿಸಿದಾಗ ತನ್ನ ಜನರಿಗೆ ತೊಂದರೆಯಾಗುತ್ತದೆಂದು ತಿಳಿದ ತಹಸೀಲ್ದಾರ್ ಆರತಿ, ಸರಣಿ ರಜೆ ಇರುವ ದಿನಾಂಕವನ್ನು ನೋಡಿ ಸರ್ವೆಗೆ ತಿಳಿಸಿದರು. ಆದರೆ ಸರಣಿ ರಜೆ ಇದ್ದಿದ್ದರಿಂದ ಸರ್ವೇ ಆಗಲೇ ಇಲ್ಲ. ಇನ್ನು ಈಗಿನ ತಹಸೀಲ್ದಾರ್ ಗೂ ಅರ್ಜಿಯನ್ನು ನೀಡಿದರು, ಅವರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ವರ್ಗಾವಣೆಗೊಂಡು ಹೋಗುತ್ತಾರೆ ಮುಂದೆ ಬರುವವರು ಏನು ಕ್ರಮ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಇದೇ ವೇಳೆ ಕಟ್ಟಡವನ್ನು ನಿರ್ಮಿಸಿ ಮುಂದಿನ ದಿನಗಳಲ್ಲಿ ನಾವೇ ಅನುಭೋಗದಲ್ಲಿದ್ಧೇವೆಂದು ತೋರಿಸಲು ಒತ್ತುವರಿದಾರರು ನಿರ್ಧರಿಸಿದಂತೆ ಕಾಣುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಒತ್ತುವರಿಯನ್ನು ತೆರವು ಗೊಳಿಸಿ ಕೋಟ್ಯಾತಂರ ರೂ. ಮೌಲ್ಯದ ಸರ್ಕಾರಿ ಜಾಗವನ್ನು ಉಳಿಸಿಕೊಟ್ಟು ಬಡ ಜನರಿಗೆ ನಿವೇಶನವನ್ನು ಕೊಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಸದಸ್ಯ ಯೋಗೀಶ್, ತಿಲಕ್‌ಕುಮಾರ್, ವಾರ್ಡ್ ನ ನಾಗರಿಕರಾದ ತುಳಸಿ ರಾಮ್, ಜಯಣ್ಣ, ಮತ್ತಿತರರು ಹಾಜರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1