ಬೆಳಗಾವಿ: ಭಾರಪತೀಯ ಜನತಾ ಪಾರ್ಟಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಬ್ರಾಹ್ಮಣ ಸಮಾಜವೇ ಕಾರಣ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದ್ದಾರೆ.
ಇಲ್ಲಿನ ಭಾಗ್ಯ ನಗರದ ಸಿಟಿ ಹಾಲ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ರಾಹ್ಮಣ ಸಮಾಜದ ಸಾಧಕರಿಗೆ ವಿಪ್ರಶ್ರೀ ಪ್ರಶಸ್ತಿ ಪ್ರಧಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯ ಸ್ವಾಭಿಮಾನಿ ಸಮುದಾಯವಾಗಿದೆ. ಬಿಜೆಪಿ ಪಕ್ಷ ಬೆಳೆಯಲು ಬ್ರಾಹ್ಮಣ ಸಮುದಾಯದ ಕೊಡುಗೆ ದೊಡ್ಡದು. ಬ್ರಾಹ್ಮಣರಿಗೆ ಸೌಲಭ್ಯಗಳನ್ನು ಕೊಡುವಲ್ಲಿ ಹಿಂದೇಟು ಹಾಕುವುದು ಸರಿಯಲ್ಲ ಎಂದರು.
ಬೆಳಗಾವಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಗಾಯತ್ರಿ ಭವನಕ್ಕೆ ಶಾಸಕರ ಅಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡಿದ್ದೇನೆ. ಇನ್ನು 1ವಾರದೊಳಗೆ ಮತ್ತೆ 30 ಲಕ್ಷ ರೂ. ಅನುದಾನ ನೀಡುವುದಾಗಿ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್. ಎಸ್. ಸಚ್ಚಿದಾನಂದಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ, ರಾಜ್ಯದಲ್ಲಿ ಬ್ರಾಹ್ಮಣರ ಜನಸಂಖ್ಯೆ 47.50 ಲಕ್ಷದಷ್ಟಿದೆ. ಆದರೆ ಒಗ್ಗಟ್ಟಿಲ್ಲದ ಕಾರಣ ಸಮಾಜದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. 2015 ರಲ್ಲಿ ನಡೆದ ಜನಗಣತಿಯ ವೇಳೆ ಬಹಳಷ್ಟು ಜನ ಬ್ರಾಹ್ಮಣ ಎಂದು ನಮೂದಿಸದೆ ತಮ್ಮ ಉಪ ಜಾತಿಯ ಹೆಸರು ಹೇಳಿದ್ದರಿಂದ ಬ್ರಾಹ್ಮಣರ ಸಂಖ್ಯೆ ಕಡಿಮೆ ಕಾಣುತ್ತಿದೆ. ನಾನು ಮಂಡಳಿಯ ಅಧ್ಯಕ್ಷನಾದ ಮೂರು ವರ್ಷದಲ್ಲಿ ರಾಜ್ಯದ ಉದ್ದಗಲಕ್ಕೆ ಸುತ್ತಿ ಮಾಹಿತಿ ಕಲೆ ಹಾಕಿದ್ದೇನೆ. ಪ್ರಸ್ತುತ ರಾಜ್ಯದಲ್ಲಿ ಬ್ರಾಹ್ಮಣರ ಜನಸಂಖ್ಯೆ ರಾಜ್ಯದಲ್ಲಿ 4.40 ರಷ್ಟಿದೆ ಎಂದು ಹೇಳಿದರು.
ಬ್ರಾಹ್ಮಣರನ್ನು ಕೆಲವರು ವಿನಾಕಾರಣ ಅವಹೇಳನ ಮಾಡಿದರೂ ಸಹ ಸುಮ್ಮನಿರುತ್ತೇವೆ. ಇಂಥ ಅನ್ಯಾಯದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಿದೆ. ಹೋರಾಟ ಮಾಡಿದರೆ ಮಾತ್ರ ಪರಿಣಾಮ ಬೀರುತ್ತದೆ ಎಂಬುದಕ್ಕೆ ನಿದರ್ಶನಗಳಿವೆ. ಚೇತನ್ ಎಂಬುವವರು ಬ್ರಾಹ್ಮಣರನ್ನು ಭಯೋತ್ಪಾದಕರು ಎಂದು ಉಲ್ಲೇಖಿಸಿದ್ದರ ವಿರುದ್ಧ ರಾಜ್ಯಾದ್ಯಂತ 72 ಕಡೆ ಪ್ರತಿಭಟನೆ ಮಾಡಿ ದೂರು ದಾಖಲು ಮಾಡಿದ ಮೇಲೆ ಅವರು ಕ್ಷಮೆ ಕೇಳಿದ್ದಾರೆ.
ಪೊಗರು ಕನ್ನಡ ಚಲನ ಚಿತ್ರದಲ್ಲಿ ಜನಿವಾರದ ಮೇಲೆ ಬೂಟುಗಾಲಿಡುವ ದೃಷ್ಯವಿತ್ತು. ಬ್ರಾಹ್ಮಣರನ್ನು ಅವಹೇಳನ ಮಾಡುವ ಸಂಭಾಷಣೆಗಳು ಇದ್ದವು. ಚಿತ್ರರದ ನಿರ್ದೇಶಕನನ್ನು ಕರೆದು ರಾಜ್ಯಾದ್ಯಂತ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ ಮೇಲೆ 14 ದೃಶ್ಯಗಳು, 28 ಸಂಭಾಷಣೆಗಳನ್ನು ತೆಗೆಯಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಸಹ ಬ್ರಾಹ್ಮಣರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಬ್ರಾಹ್ಮಣರು ಒಗ್ಗಟ್ಟಾಗಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಅಂತವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ಬಳಿಕ ಎಸ್ ಎಸ್ ಎಲ್ ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ 15 ಸಾವಿರ ರೂ. ಪುರಸ್ಕಾರ ನೀಡಲಾಗುತ್ತಿದೆ. ಆದರೆ ಬಹಳಷ್ಟು ವಿದ್ಯಾರ್ಥಿಗಳು ಅರ್ಜಿಯನ್ನೇ ಹಾಕುತ್ತಿಲ್ಲ. ಸ್ವ ಉದ್ಯೋಗ ಮಾಡುವವರಿಗೂ ಸಾಲ ಮತ್ತು ಸಹಾಯಧನ ಯೋಜನೆ ಜಾರಿಗೆ ತಂದಿದ್ದೇನೆ. ಅದಕ್ಕೂ ನಿರೀಕ್ಷಿತ ಸಂಖ್ಯೆಯಲ್ಲಿ ಅರ್ಜಿ ಬಂದಿಲ್ಲ. ಈ ವರ್ಷ ೮-೯ ಸಾವಿರ ಅರ್ಜಿಗಳ ನಿರೀಕ್ಷೆ ಇತ್ತು. ಆದರೆ ಕೇವಲ ಒಂದೂವರೆ ಸಾವಿರ ಅರ್ಜಿಗಳು ಬಂದಿವೆ. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಹಾಕಬೇಕು. ಫೆ.26ರವರೆಗೂ ಆನ್ ಲೈನ್ ಮೂಲಕ ಅರ್ಜಿ ಹಾಕಲು ಅವಕಾಶವಿದೆ ಎಂದರು.
ಆರ್ಥಿಕವಾಗಿ ಹಿಂದುಳಿದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 1 ಲಕ್ಷ ರೂ. ಸಾಲ ಯೋಜನೆ, ಗಾಯತ್ರಿ ಮಹಿಳಾ ಸ್ವ ಸಹಾಯ ಸಂಘ ರಚಿಸಿಕೊಂಡವರಿಗೆ 1 ಲಕ್ಷ ರೂ. ಮೂಲ ಬಂಡವಾಳ, ಐಎಎಸ್, ಐಪಿಎಸ್ ಅಧ್ಯಯನಕ್ಕೆ ತರಬೇತಿ ಸೇರಿದಂತೆ ಹಲವು ಯೋಜನೆಗಳನ್ನು ತರಲಾಗಿದೆ. ಬ್ರಾಹ್ಮಣ ಸಮುದಾಯದವರು ಸರಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬ್ರಾಹ್ಮಣ ಸಮುದಾಯದ ಎಸ್.ಎಂ. ಕುಲಕರ್ಣಿ, ಪ್ರಿಯಾ ಪುರಾಣಿಕ, ಶಿರೀಶ ಕಾನೆಟ್ಕರ್, ಎಲ್. ಎಸ್. ಶಾಸ್ತ್ರಿ, ಎಂ.ಕೆ. ಹೆಗಡೆ, ಮಧು ದೇಸಾಯಿ, ಪ್ರಸಾದ ಕುಲಕರ್ಣಿ, ಭಾರತಿ ಕುಲಕರ್ಣಿ, ಅರವಿಂದ ಆಚಾರ್ಯ, ಶ್ರೀಕಾಂತ ಕುಲಕರ್ಣಿ ಅವರಿಗೆ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಬೆಳಗಾವಿ, ಚಿಕ್ಕೋಡಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಬೆಳಗಾವಿ ಜಿಲ್ಲಾ ಅಖಿಲ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್. ಎಂ. ಕುಲರ್ಣಿ ಅಧ್ಯಕ್ಷತೆ ವಹಿಸಿದ್ದರು. ವಸಂತ ನಾಡಜೋಶಿ ಪ್ರಸ್ತಾವಿಕ ಮಾತನಾಡಿದರು. ಪ್ರಿಯಾ ಪುರಾಣಿಕ, ಆರ್. ಎಸ್. ಮುತಾಲಿಕ್, ವತ್ಸಲಾ ನಾಗೇಶ, ಜಗನ್ನಾಥ ಕುಲಕರ್ಣಿ, ಶಿರಿಷ ಕಾನೆಟ್ಕರ್, ಗೋವಿಂದರಾವ್ ಫಟಕೆ, ಜಗದೀಶ ಹುನಗುಂದ, ಮಹಾನಗರ ಪಾಲಿಕೆ ಸದಸ್ಯರಾದ ಜಯತೀರ್ಥ ಸವದತ್ತಿ, ವಾಣಿ ಜೋಶಿ ಮೊದಲಾದವರು ಇದ್ದರು.
ಇದೇ ವೇಳೆ ಬೆಳಗಾವಿ ಬ್ರಾಹ್ಮಣ ಸಂಘ ಹಾಗೂ ಹವ್ಯಕ ಸಂಘದ ವತಿಯಿಂದ ಸಚ್ಚಿದಾನಂದ ಮೂರ್ತಿ ಅವರನ್ನು ಸತ್ಕರಿಸಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


