ಬಾಗಲಕೋಟೆ: ಹದಿಹರೆಯದಲ್ಲಿ ಸಾಧಿಸುವ ಹಠದೊಂದಿಗೆ ಹೆಜ್ಜೆ ಹಾಕಬೇಕು. ಸಾಧಕರಾಗಲು ನಿರಂತರ ಅಭ್ಯಾಸ ಅವಶ್ಯಕ. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ನಿಮ್ಮ ಬದುಕನ್ನು ರೂಪಿಸಬಲ್ಲವು ಎಂದು ಗುಣದಾಳದ ಕಲ್ಯಾಣ ಹೀರೆಮಠದ ಡಾ. ವಿವೇಕಾನಂದ ದೇವರು ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಸಾನಿಧ್ಯ ಮತ್ತು ಗೌರವ ಅತಿಥಿಗಳಾಗಿ ಮಾತನಾಡಿದರು.
ನಮ್ಮದು ಸನಾತನ ಪರಂಪರೆ ಎಂದುಕೊಳ್ಳುವುದೆ ಹೆಮ್ಮೆ. ಜೀವನದಲ್ಲಿ ಏನಾದರೂ ಸಾಧಿಸುವ ಹಠ, ಚಲ ಬರುವುದೇ ಹದಿಹರೆಯದ ವಯಸ್ಸಿನಲ್ಲಿ. ಇಲ್ಲಿ ಹಚ್ಚಿದ ದೀಪ ನಮ್ಮ ಬದುಕಿನ ಉದ್ದಕ್ಕೂ ಕರೆದುಕೊಂಡು ಹೋಗುತ್ತದೆ. ಪದವಿ ಯಾವುದೆ ಇರಲಿ ಕಲಿಕೆಯಲ್ಲಿ ನಿಷ್ಟೆ ಪ್ರಾಮಾಣಿಕತೆ ಅವಶ್ಯ. ಜಾತಿಯತೆ, ರಾಜಕೀಯ, ಸಮುದಾಯ ಗಲಬೆಗಳನ್ನು ಮೆಟ್ಟಿ ಏಕತೆ ಸಾರುವ ಶಕ್ತಿ ನಿಮ್ಮಲ್ಲಿದೆ ಅದನ್ನು ಅರಿತುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿ ಜೀವನ ಬಂಗಾರದಂತೆ ಅದನ್ನು ಮೌಲ್ಯಯುತವಾಗಿ ಬಳಸಿಕೊಳ್ಳಬೇಕು. ಮೂಬೈಲ್ ಮತ್ತು ಕಂಪ್ಯೂಟರ್ ಬಲೆಗೆ ಬೀಳದೆ ಗುರಿಯತ್ತ ಗಮನವಿರಲಿ. ತಾತ್ಕಾಲಿಕ ಮನರಂಜನೆ ಬದುಕನ್ನು ರೂಪಿಸುವುದಿಲ್ಲ. ಯಾವ ವಯಸ್ಸಿನಲ್ಲಿ ಏನು ಮಾಡಬೇಕು ಅದಕ್ಕೆ ಪ್ರಾಮುಖ್ಯತೆ ಕೊಡಿ. ಆದಿ ಕಾಲದಿಂದಲೂ ಮಹಿಳೆಯರನ್ನು ದೇವಿ ಸ್ವರೂಪದಲ್ಲಿ ಗೌರವಿಸಿಕೊಂಡು ಬರಲಾಗಿದೆ ಅದನ್ನು ಪಾಲಿಸಿ ಎಲ್ಲರೂ ಒಂದೇ ಎಂಬ ಭಾವ ಇರಲಿ ಎಂದರು.
ಪ್ರಾಚಾರ್ಯರಾದ ಡಾ. ವಿ.ಎಸ್.ಕಟಗಿಹಳ್ಳಿಮಠ ಮಾತನಾಡಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗುವುದಷ್ಟೆ ಮುಖ್ಯವಲ್ಲ. ಹಸಿದವರಿಗೆ ಒಂದು ಹೊತ್ತು ಊಟ ಕೊಡುವುದೆ ನಿಜವಾದ ಸಾಧನೆ. ಭಾರತದಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು. ಶಿಕ್ಷಣದ ಜೊತೆಗೆ ಸಂಸ್ಕಾರ ಮುಖ್ಯ ಅದನ್ನು ಬೆಳಸಿಕೊಳ್ಳಿ. ಮೌಲ್ಯಯುತ ಕಾರ್ಯಕ್ರಮಗಳಿಗೆ ತಪ್ಪದೆ ಹಾಜರಾಗಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಪ್ರಾ.ಎಮ್.ಪಿ.ಬಡಿಗೇರ ವಾರ್ಷಿಕ ವರದಿ ವಾಚನ ಮಾಡಿದರು.ಎಮ್.ಎಮ್.ದೇವನಾಳ, ಆರ್.ಎಮ್.ಬೆಣ್ಣೂರ, ವಿದ್ಯಾರ್ಥಿ ಪ್ರತಿನಿಧಿಗಳಾದ ವಿಜಯ ತಳವಾರ, ಪವಿತ್ರಾ ಯಲಿಗಾರ ಸೇರಿದಂತೆ ಕಾಲೇಜು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


