ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರಕ್ಕೆ ಪೋಲಿಸ್ ಅಧಿಕಾರಿಯೊಬ್ಬರು ರಾಜಕಾರಣದ ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಅಥಣಿಯಲ್ಲಿ ಪಿಎಸ್ಐ ಆಗಿದ್ದ ಸಂದರ್ಭದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದು, ಸದ್ಯ ವಿಜಯಪುರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸಿದ ಬಸವರಾಜ ಬಿಸನಕೊಪ್ಪ ಈಗ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಈ ಹಿಂದೆಯೇ ಬಸವರಾಜ ತಮ್ಮ ಪೊಲೀಸ್ ವೃತ್ತಿ ತೊರೆದು ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಸದ್ಯ ಅಥಣಿ ಮತಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ನಿರ್ಧರಿಸಿರುವ ಅವರು ಈಗಾಗಲೇ ತಮ್ಮ ಸಿಪಿಐ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
ಮಾಜಿ ಡಿಸಿಎಂ ಲಕ್ಷಣ ಸವದಿ, ಶಾಸಕ ಮಹೇಶ್ ಕುಮಠಳ್ಳಿ ಅವರಂತಹ ಘಟಾನುಘಟಿ ರಾಜಕಾರಣಿಗಳನ್ನು ಹೊಂದಿರುವ ಅಥಣಿ ಕ್ಷೇತ್ರಕ್ಕೆ ಸದ್ಯ ಖಡಕ್ ಪೊಲೀಸ್ ಅಧಿಕಾರಿ ಅಥಣಿಯ ಸಿಂಗಂ ಎಂದೇ ಖ್ಯಾತಿ ಹೊಂದಿರುವ ಬಸವರಾಜ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು ಚುನಾವಣೆಯ ಕಾವು ರಂಗೇರುವಂತೆ ಮಾಡಿದೆ.
ಇನ್ನೂ ಬಸವರಾಜ ಬಿಸನಕೊಪ್ಪ ಮೂಲತಃ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದವರಾಗಿದ್ದು, ಪ್ರಬಲ ಪಂಚಮಸಾಲಿ ಸಮುದಾಯದವರಾಗಿದ್ದಾರೆ. ಅಥಣಿ ಮತಕ್ಷೇತ್ರದಲ್ಲಿ ಪಂಚಮಸಾಲಿ ಮತಗಳು ಅಧಿಕವಾಗಿದ್ದು ಬಸವರಾಜ ಬಿಸನಕೊಪ್ಪ ಅವರಿಗೆ ಯುವಕರ ತಂಡ ಬೆಂಬಲಕ್ಕೆ ನಿಂತಿದೆ.


