ಯಮಕನಮರಡಿ: ಮಹಿಳೆಯರು ಪ್ರಸ್ತುತ ಪುರುಷರಷ್ಟೇ ಸಮಾನರು. ಅವರಿಲ್ಲದ ಕ್ಷೇತ್ರವಿಲ್ಲ, ಅವರು ಮಾಡದ ಸಾಧನೆ ಇಲ್ಲ. ತೊಟ್ಟಿಲನ್ನು ತೂಗುವ ಕೈ ಇಂದು ಜಗತ್ತನ್ನೇ ಆಳುತ್ತಿದೆ. ಸಣ್ಣ ಪದವಿ, ಕೆಲಸ, ಮನೆಗೆಲಸದಿಂದ ಹಿಡಿದು ಅತ್ಯುತ್ತಮ ಪದವಿಯವರೆಗೂ ಮಹಿಳೆ ಸ್ಥಾನ ಪಡೆದುಕೊಂಡಿದ್ದಾಳೆ. ಹೀಗೆ ಮಹಿಳೆಯರ ಸಾಧನೆ, ಕೊಡುಗೆ ಸ್ಮರಿಸಲು ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಕುರಣಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಪ್ರತಿ ವರ್ಷ ಮಾರ್ಚ್ 8 ರಂದು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಮಹಿಳೆಯರ ತ್ಯಾಗ, ಪರಿಶ್ರಮ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳಲ್ಲಿನ ಅವರ ಸಾಧನೆ, ಸಮಾಜಕ್ಕೆ ಅವರ ಅಗತ್ಯತೆ, ಕೊಡುಗೆ, ಅವರಿಗೆ ಗೌರವ ಸಲ್ಲಿಸಲು ಹೀಗೆ ಹತ್ತಾರು ಕಾರಣಕ್ಕೆ ಈ ದಿನವನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಮಹಿಳಾ ದಿನಾಚರಣೆ ಮೊದಲು ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಆಚರಿಸಲಾಗುತ್ತಿತ್ತು. ಆದರೆ ಇಂದು ಪ್ರತಿ ಹಳ್ಳಿಗಳಲ್ಲಿಯೂ ಮಹಿಳಾ ದಿನಾಚರಣೆ ಆಚರಣೆ ಮಾಡುತ್ತಿದ್ದು, ಈ ಆಚರಣೆಯಲ್ಲಿ ಹೆಚ್ಚು ಮಹಿಳೆಯರ ಸಮಸ್ಯೆಗಳ ಮುಕ್ತಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಕರೆ ನೀಡಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಲ್ಲ, ಪ್ರತಿದಿನವೂ ನೀಡಬೇಕಾದ ಗೌರವ ಆಕೆಗೆ ಸಂದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಮಹಿಳೆಯರಿಗೆ ವಿಶೇಷ ಸ್ಥಾನ ಮಾನ ನೀಡಬೇಕು, ಮನೆ ಮನಗಳಲ್ಲಿ ಮಹಿಳೆಗೆ ಗೌರವ ದೊರೆಯಬೇಕು, ಮಹಿಳೆಯ ಸಾಮರ್ಥ್ಯ ಗುರುತಿಸುವ ಕೆಲಸವಾಗಬೇಕು, ಅಂದಾಗ ಮಾತ್ರ ಈ ರೀತಿಯ ಆಚರಣೆಗಳಿಗೆ ಅರ್ಥ ಬರುತ್ತದೆ, ಆರೋಗ್ಯಕರ ಬದುಕು ಹಾಗೂ ಶಿಕ್ಷಣವು ಇಲ್ಲಿ ಮುಖ್ಯವಾಗುತ್ತದೆ, ಕಾಯಿದೆಗಳಿಂತಲೂ ಮುಖ್ಯವಾಗಿ ಮನಃಪರಿವರ್ತನೆಯ ಮೂಲಕ ಹೃದಯದಿಂದ ಮಹಿಳೆಗೆ ಗೌರವ ದೊರಕಿದಾಗ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಹಬಿನ ಬಳಿಗಾರ, ಸುಗಂಧಾ ಈರಸುವರ್, ಕಸ್ತೂರಿ ಗಿಡಗಾರ, ಅವ್ವಕ್ಕಾ ಕುನ್ನೂರಿ, ಸುಗಂಧಾ ಮಗದುಮ್ಮ್, ಗೀತಾ ಕರಿಗಾರ, ಕುರಣಿ ಗ್ರಾಮದ ಗ್ರಾಪಂ ಸದಸ್ಯರು, ಸ್ವಿಸಹಾಯ ಸಂಘದ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಮಹಿಳೆಯರು ಪಾಲ್ಗೊಂಡಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


