ತುರುವೇಕೆರೆ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಬಗ್ಗೆ ರಾಜ್ಯದ ಜನರಿಗೆ ಗ್ಯಾರಂಟಿ ಇಲ್ಲ ಆದರೂ 200 ಯೂನಿಟ್ ವಿದ್ಯುತ್ ಹಾಗೂ 2000 ರೂ ಮಹಿಳೆಯರಿಗೆ ಕೊಡುತ್ತೇವೆ ಎಂದು ಹೊರಟಿದ್ದಾರೆ, ಮನೆಯಲ್ಲಿ ಅತ್ತೆ ಸೊಸೆ ನಡುವೆ ಜಗಳ ಶುರುವಾಗುವ ಹಾಗೆ ಮಾಡಿದ್ದಾರೆ ಎಂದು ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಆರೋಪಿಸಿದರು.
ಪಟ್ಟಣದ ಗುರುಭವನ ಆವರಣದಲ್ಲಿ ತಾಲೂಕು ಜೆಡಿಎಸ್ ಪಕ್ಷದಿಂದ ಆಯೋಜಿಸಿದ್ದ ಮುಸ್ಲಿಂ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಬಡವರ ದೀನದಲಿತರ ಪಕ್ಷ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಈಗಾಗಲೇ ಕುಮಾರಸ್ವಾಮಿ ಅವರು ಹೇಳಿರುವಂತೆ ಪಂಚರತ್ನ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ. ಆಸ್ಪತ್ರೆ ರೈತರಿಗೆ ಒಂದು ಎಕರೆ ಜಮೀನು ಇರುವಂತವರಿಗೆ 10,000 ಗಳು ಉಚಿತ ವೃದ್ದರಿಗೆ ಮಹಿಳೆಯರಿಗೆ ತಿಂಗಳಿಗೆ 5,000ಗಳನ್ನು ನೀಡಲಿದ್ದಾರೆ. ಬಿ.ಜೆ.ಪಿ ಸರ್ಕಾರ ಲೂಟಿ ಮಾಡಿ, 5 ಲಕ್ಷ ಕೋಟಿ ಸಾಲವನ್ನು ರಾಜ್ಯದ ಜನತೆಯ ಮೇಲೆ ಹೋರಿಸಿದ್ದಾರೆ, ನಮ್ಮ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದಲ್ಲಿ ಹಣವಿಲ್ಲದಂತಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ಪಕ್ಷ ಉತ್ತಮ ಆಡಳಿತ ನೀಡಿದ್ದರೆ ಪ್ರಧಾನಿ ನರೇಂದ್ರ ಮೋದಿಯವರು ಪದೇ ಪದೇ ಕರ್ನಾಟಕಕ್ಕೆ ಬರುವ ಅಗತ್ಯ ಏನಿತ್ತು? ಅಚ್ಚೆದಿನ್ ಆಯೆಗಾ ಗುಜರಾತ್ ಮಾಡೆಲ್ ರೀತಿ ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇವೆ ಎಂದಿದ್ದರು. ನಮ್ಮ ರಾಜ್ಯದಲ್ಲಿ ಪಾನಿಪೂರಿ ಮತ್ತು ಬೀಡ ಹಾಕುವವರು ಗುಜರಾತಿಗಳೇ ಹೊರತು ಇಲ್ಲಿಯವರೆಲ್ಲ ಅಲ್ಲಿ ಅಭಿವೃದ್ಧಿ ಹೊಂದಿದ್ದರೆ ಅವರೆಲ್ಲ ನಮ್ಮ ರಾಜ್ಯಕ್ಕೆ ಏಕೆ ಬರುತ್ತಿದ್ದರು ಎಂದು ಪ್ರಶ್ನೆ ಮಾಡಿದರು.
ಕನ್ನಡ ನಾಡಿನ ಜನರು ಸ್ವಾಭಿಮಾನಿಗಳು ಯಾವ ರಾಜ್ಯಕ್ಕೂ ಹೋಗುವುದಿಲ್ಲ ಇಡೀ ದೇಶಕ್ಕೆ ಕೊಬ್ಬರಿಯನ್ನು ತಿನ್ನಿಸುವವರು ನಮ್ಮ ಕನ್ನಡಿಗರು ಎಂದ ಅವರು, ಯಾವ ಜೆಡಿಎಸ್ ನಾಯಕರು ಸಹ ಜೈಲಿನಲ್ಲಿ ಇಲ್ಲ, ಅಥವಾ ಬೇಲಿನಲ್ಲಿಯೂ ಇಲ್ಲ ಮುಸ್ಲಿಮರಿಗೆ ಶೇಕಡ 40ರಷ್ಟು ಮೀಸಲಾತಿ ನೀಡಿದ್ದು ಮಾಜಿ ಪ್ರಧಾನಿ ದೇವೇಗೌಡರು, 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಅಲ್ಲ, ಮುಸ್ಲಿಮರಿಗೆ ಕಾಂಗ್ರೆಸ್ ಪಕ್ಷ ಏನೂ ಮಾಡಿಲ್ಲ ರಾಜಕೀಯದಲ್ಲಿರುವ ದೇವೇಗೌಡರಿಗೆ ಸ್ವಂತ ಮನೆಯಲ್ಲಿ ಕಾಂಗ್ರೆಸ್ ಹಲವು ನಾಯಕರು ಲಕ್ಷಾಂತರ ಲೂಟಿ ಮಾಡಿ ಕೆಲವರು ಜೈಲಿನಲ್ಲಿ ಕೆಲವರು ಬೇಲಿನಲ್ಲಿದ್ದಾರೆ ಎಂದು ಕಾಂಗ್ರೆಸ್ ನವರನ್ನು ಕುಟುಕಿದರು.
ಎಂ.ಟಿ. ಕೃಷ್ಣಪ್ಪ ಮಾತನಾಡಿ, ಸಿಎಂ ಇಬ್ರಾಹಿಂ ರವರ ಕಾಲ್ಗುಣ ಚೆನ್ನಾಗಿದೆ 2008ರಲ್ಲಿ ನಮ್ಮ ಪರವಾಗಿದ್ದರು ಆಗ ನಾನು ಶಾಸಕನಾದೆ, ಈ ಬಾರಿ 18ಕ್ಕೆ ನಾನು ಶಾಸಕನಾಗಿ ಆಯ್ಕೆಯಾಗುವುದರಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಸ್ಲಿಂ ಸಮುದಾಯ ಕಳೆದ ಬಾರಿ ಕಾಂಗ್ರೆಸ್ ಗೆ ಮತ ನೀಡಿ ಬಿಜೆಪಿ ಗೆಲ್ಲುವಂತೆ ಮಾಡಿ ನನ್ನನ್ನು ಕೇವಲ 1000 ಮತಗಳಿಂದ ಸೋಲಿಸಿದಿರಿ, ಈ ಕ್ಷೇತ್ರಗಳಲ್ಲಿ ಇನ್ನು 20 ವರ್ಷಗಳಾದರೂ ಕಾಂಗ್ರೆಸ್ ಗೆಲ್ಲಲ್ಲ. ನಾನು ಶಾಸಕನಾಗಿದ್ದಾಗ ಮುಸ್ಲಿಂ ಸಮುದಾಯಕ್ಕೆ ಹಲವು ಯೋಜನೆಗಳನ್ನು ನೀಡಿ ನಿಮ್ಮ ಪರವಾಗಿದ್ದೆ, ಆಶ್ರಯ ಮನೆಗಳು, ಜಮೀನು ಮಂಜೂರು, ಬೋರ್ವೆಲ್ ಗಳನ್ನು ನೀಡಿದ್ದೇನೆ. ಆದರೆ ಬಿಜೆಪಿ ಶಾಸಕರು ನಿಮ್ಮ ಮೇಲೆ ಕೇಸ್ ಗಳನ್ನು ಹಾಕಿಸಿದ್ದಾರೆ ನಾನು ನಿಮ್ಮ ಪರವಾಗಿ ಹೋರಾಟ ಮಾಡಿದ್ದೇನೆ. ಈ ಬಾರಿ ಚುನಾವಣೆ ನನ್ನ ಕಡೆ ಚುನಾವಣೆ ಎಲ್ಲ ಮುಸ್ಲಿಂ ಬಾಂಧವರು ನನಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜಿನಪ್ಪ. ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ. ಅಲ್ಪಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷ ಶಂಶುಲ್ಲಾ ಖಾನ್. ರಾಜ್ಯ ಮಹಿಳಾ ಘಟಕದ ನಜ್ಮಾ ನಜೀರ್. ತಾಲ್ಲೂಕು ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಜಫ್ರುಲ್ಲ. ಮುಖಂಡರಾದ ಮೊಟ್ಟೆಬಾಬು. ಜಗದೀಶ್. ಶಂಕರೇಗೌಡ. ಬಾಣಸಂದ್ರ ರಮೇಶ್. ಹೆಡಗೀಹಳ್ಳಿ ವಿಶ್ವನಾಥ್. ಬಿ.ಎಸ್. ದೇವರಾಜ್. ಸೇರಿದಂತೆ ಹಲವಾರು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA