ಬೆಂಗಳೂರು: ‘ಮಿಸಲಾತಿ ಹೆಚ್ಚಳ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸದೇ, ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸದೇ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಸುಳ್ಳು ಹೇಳುವ ಮೂಲಕ ಬಿಜೆಪಿ ಸರ್ಕಾರ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯದ ಜನರ ಕಿವಿಗೆ ಹೂವ ಇಟ್ಟು, ಮೋಸ ಮಾಡುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ಗುರುವಾರ ಈ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ‘ರಾಜ್ಯ ಸರ್ಕಾರ ಪರಿಶಿಷ್ಟರಿಗೆ ಮೀಸಲಾತಿ ವಿಚಾರದಲ್ಲಿ ಮಾಡುತ್ತಿರುವ ಮೋಸವನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ನಾಳೆ (ಶುಕ್ರವಾರ) ಬೆಳಗ್ಗೆ 10 ಗಂಟೆಗೆ ರಾಜಭವನದ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದೆ’ ಎಂದರು.
‘ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಕೇಂದ್ರ ಬಿಜೆಪಿ ಸಚಿವರು ಸಂಸತ್ತಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಸರ್ಕಾರ ಪ್ರಸ್ತಾವನೆ ಸಲ್ಲಿಸದೇ. ಸಂಸತ್ತಿನಲ್ಲಿ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸದೆ ಮೀಸಲಾತಿ ಮಾಡಿದ್ದೇವೆ ಎಂದು ಹೇಳಿಕೊಂಡು ದಲಿತರಿಗೆ ಮೋಸ ಮಾಡುತ್ತಿದೆ ಎಂದರು.
ಈ ದ್ರೋಹವನ್ನು ಖಂಡಿಸಲು ನಮ್ಮ ಪಕ್ಷದ ನಾಯಕರೆಲ್ಲರೂ ರಾಜ್ಯಪಾಲರ ಭೇಟಿಗೆ ತೀರ್ಮಾನಿಸಿದ್ದು, ನಾಳೆ ಬೆಳಗ್ಗೆ ಭೇಟಿಗೆ ರಾಜ್ಯಪಾಲರ ಬಳಿ ಸಮಯಾವಕಾಶ ಕೇಳುತ್ತೇವೆ. ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿರುವಾಗ ಬಿಜೆಪಿ ಸರ್ಕಾರ ಈ ವಿಚಾರವಾಗಿ ಪ್ರಸ್ತಾವನೆ ಸಲ್ಲಿಸಲಿಲ್ಲ ಯಾಕೆ? ಈ ವಿಚಾರದಲ್ಲಿ ತಮಗೆ ಬೇಕಾದ ರೀತಿಯಲ್ಲಿ ಸುಳ್ಳು ಹೇಳಿದರೆ ಅದನ್ನು ನಂಬಲು ಇಲ್ಲಿ ಯಾರೂ ಸಿದ್ಧರಿಲ್ಲ. ಅವರಿಗೆ ಈ ವಿಚಾರದಲ್ಲಿ ಬದ್ಧತೆ ಇದ್ದರೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಈ ಮೀಸಲಾತಿ ಹೆಚ್ಚಳ ವಿಚಾರ ಸೇರಿಸಬೇಕು ಎಂದು ಆಗ್ರಹಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


