ದಾವಣಗೆರೆ: ಚನ್ನಗಿರಿಯ ಬಿಜೆಪಿ ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಮಾಜಿ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಬಂಧಿಸಲಾಗಿದೆ.
ಚುನಾವಣೆಗೆ ಕೆಲವೇ ದಿನಗಳು ಇರುವಾಗ ಹಾಲಿ ಬಿಜೆಪಿ ಶಾಸಕನನ್ನು ಲೋಕಾಯುಕ್ತರು ಬಂಧಿಸಿರುವುದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಶಾಸಕರ ನಿರೀಕ್ಷಣಾ ಜಾಮೀನನ್ನು ಸೋಮವಾರ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು.
ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ರದ್ದಾಗುತ್ತಿದ್ದಂತೆಯೇ ಲೋಕಾಯುಕ್ತ ಪೊಲೀಸರು ಚನ್ನಗಿರಿಯ ಅವರ ನಿವಾಸಕ್ಕೆ ತೆರಳಿದ್ದರು. ಅವರು ಮನೆಯಲ್ಲಿ ಇಲ್ಲದ ಕಾರಣ ಬಂಧಿಸಲು ಕಾದು ಕುಳಿತಿದ್ದರು.
ಅಂತಿಮವಾಗಿ ಸಂಜೆ 7 ಗಂಟೆ ಸುಮಾರಿಗೆ ಮಾಡಾಳ್ ವಿರೂಪಾಕ್ಷಪ್ಪರನ್ನು ಲೋಕಾಯುಕ್ತ ಪೊಲೀಸರು ತುಮಕೂರಿನ ಕ್ಯಾತ್ಸಂದ್ರ ಟೋಲ್ ಬಳಿ ಬಂಧಿಸಿದ್ದಾರೆ. ಅವರು ಬೆಂಗಳೂರಿಗೆ ಬರುವಾಗ ಪೊಲೀಸರು ಬಂಧಿಸಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.


