“ಶುಭ ಶುಕ್ರವಾರ ಅಥವಾ ಗುಡ್ ಫ್ರೈಡೇ ಎಂಬುದು ಯೇಸು ಕ್ರಿಸ್ತ ಶಿಲುಬೆಯ ಮೇಲೆ ಮರಣ ಹೊಂದಿದ ದಿನ. ಇದು ಸಾಮಾನ್ಯವಾಗಿ ಕ್ರೈಸ್ತರಿಗೆ ಸೂತಕದ ದಿನವಾಗಬೇಕಿತ್ತು; ಆದರೆ “ಶುಭ”ವಾಗಿರುವುದು ಏಕೆ?” ಈ ಕುರಿತು ಸರಳವಾಗಿ ತಿಳಿಸುವುದು ಈ ಲೇಖನದ ಉದ್ದೇಶ.
ಕ್ರಿಸ್ತ ಜೀವಿಸಿದ್ದು ಇಸ್ರಯೇಲ್ ರೋಮ್ ಸಾಮ್ರಾಜ್ಯದ ವಸಹಾತುವಾಗಿದ್ದ ಕಾಲಘಟ್ಟದಲ್ಲಿ. ಜನರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಶೋಷಿಸುತ್ತಿದ್ದ ರೋಮ್ ಚಕ್ರಾಧಿಪತ್ಯ ಒಂದೆಡೆಯಾದರೆ, ತಮ್ಮದೇ ಜನರನ್ನು ಕಠಿಣ ಧಾರ್ಮಿಕ ಕಾನೂನು ಆಚರಣೆಗಳ ಮೂಲಕ ಹಿಂಸಿಸುತ್ತಿದ್ದ ಯೆಹೂದ್ಯ ಪುರೋಹಿತ ವರ್ಗ ಮತ್ತೊಂದೆಡೆ. ಇವರಿಬ್ಬರ ನಡುವೆ ಸಾಮಾನ್ಯ ಜನ ನಲುಗಿ ಹೋಗಿದ್ದರು. ತಮ್ಮನ್ನು ಈ ಎಲ್ಲಾ ಸಂಕೋಲೆಗಳಿಂದ ಬಿಡಿಸುವ “ಮೆಸ್ಸಾಯ” (ಉದ್ಧಾರಕ) ನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದರು. ಆಗ ಬಂದ ಯೇಸು ಕ್ರಿಸ್ತರು ಯೆಹೂದ್ಯ ಪುರೋಹಿತರ ಧಾರ್ಮಿಕ ಡಂಭಾಚಾರ, ಜನರನ್ನು ಮಾನಸಿಕವಾಗಿ ಹಿಂಸಿಸುವ ಕಟು ಆಚರಣೆಗಳನ್ನು ಖಂಡಿಸಿ, ದೇವರು ಮನುಷ್ಯರ ಹೃದಯದಲ್ಲಿದ್ದಾನೆ, ನಿಮ್ಮಂತೆಯೇ ಪರರನ್ನು ಪ್ರೀತಿಸಿದರೆ ಅದು ದೇವರನ್ನೇ ಪ್ರೀತಿಸಿದಂತೆ ಎಂಬ ಮಾನವತೆಯ ಸಂದೇಶವನ್ನು ಸಾರಿದರು.
ಯೆಹೂದ್ಯ ಸಮಾಜ ಪಾಪಿಗಳು ಎಂದು ಕರೆದು ಊರ ಹೊರಗೆ ಹಾಕಿದ್ದ ದೀನ ದಲಿತರ ಒಡನಾಡಿಯಾದ ಕ್ರಿಸ್ತ, ಅವರ ಜೊತೆ ಊಟ ಮಾಡಿದರು, ಅವರ ಮನೆಗಳಲ್ಲಿ ತಂಗಿದರು, ಅವರ ನೋವು ನಲಿವುಗಳಿಗೆ ಸ್ಪಂದಿಸಿ, ಅವರನ್ನು ತನ್ನ ಸ್ನೇಹಿತರು, ಸಹೋದರರೆಂದು ಕರೆದರು. ಕ್ರಿಸ್ತನ ಈ ಕ್ರಿಯೆಗಳು ಸಾವಿರಾರು ಜನರ ಬದುಕಿನಲ್ಲಿ ಸಮಾಧಾನ, ಸಾಂತ್ವನದ ನಿಟ್ಟುಸಿರಿಗೆ ಕಾರಣವಾಯಿತು.
ಕ್ರಿಸ್ತನ ಈ ಸಾಮಾಜಿಕ ಕ್ರಾಂತಿಗೆ ಹೆದರಿದ ಪುರೋಹಿತಶಾಹಿ, ಆತನ ಕೊಲೆಗೆ ಸಂಚು ರೂಪಿಸಿತು. ಈ ಸಂಚಿನ ಭಾಗವಾಗಿ, ಯೇಸುವಿನ ಹನ್ನೆರೆಡು ಶಿಷ್ಯರಲ್ಲಿ ಒಬ್ಬನಾಗಿದ್ದ ಜೂದಾಸನು ಮೂವತ್ತು ಬೆಳ್ಳಿ ನಾಣ್ಯಗಳಿಗೆ ಯೇಸುವಿಗೆ ದ್ರೋಹ ಬಗೆದು, ಯೇಸುವನ್ನು ಯೆಹೂದ್ಯರಿಗೆ ಹಿಡಿದು ಕೊಟ್ಟನು. ನಂತರ ಅವರು ಯೇಸುವನ್ನು ಶಿಲುಬೆಗೇರಿಸಿದರು.
ಶುಭ ಶುಕ್ರವಾರ ಪ್ರಮುಖವಾಗಿ ಪ್ರೀತಿ, ತ್ಯಾಗ ಮತ್ತು ಕ್ಷಮೆ ಎಂಬ ಮೂರು ಸಂದೇಶವನ್ನು ಸಾರುತ್ತದೆ. ಕ್ರಿಸ್ತ ತನ್ನ ಜನರನ್ನು ಆಪರಿಮಿತವಾಗಿ ಪ್ರೀತಿಸಿದ್ದು ಮಾತ್ರವಲ್ಲದೆ, ಅವರ ಕಷ್ಟಗಳಿಗೆ, ನೋವುಗಳಿಗೆ ಸ್ಪಂದಿಸಿದ. ತನ್ನ ಜನರ ರೋಗ-ರುಜಿನಗಳನ್ನು ವಾಸಿ ಮಾಡಿ, ಅವರಲ್ಲಿ ಬದುಕುವ ಸ್ಪೂರ್ತಿ ತುಂಬಿದ. ದೇವರನ್ನು ಹಾಗೂ ಪರರನ್ನು ಪ್ರೀತಿಸುವಂತೆ ಪ್ರೇರೇಪಿಸಿದ. ಇದಕ್ಕೆ ಪ್ರತಿಯಾಗಿ ಆತನಿಗೆ ದ್ರೋಹ ಬಗೆದಾಗಲೂ ಸಹ ಆತ ಹತಾಶನಾಗಿ, ಹಲುಬಲಿಲ್ಲ. ತನ್ನನ್ನು ಲೋಕೊದ್ಧಾರಕ, ದೇವರ ಪುತ್ರ, ರಕ್ಷಕ ಎಂದು ಕರೆದ ಜನರೇ ಇಂದು ಆತನನ್ನು ಶಿಲುಬೆಗೇರಿಸಿ ಎಂದು ಕೂಗುವಾಗಲು ಸಹ ಅವರಿಗಾಗಿ ಕ್ರಿಸ್ತನ ಎದೆಯಲ್ಲಿದ್ದದ್ದು ಪ್ರೀತಿ ಮತ್ತು ಸಹಾನುಭೂತಿ ಮಾತ್ರ.
ಶುಕ್ರವಾರ ನಡು ಮಧ್ಯಾಹ್ನ ಕ್ರಿಸ್ತನನ್ನು ಶಿಲುಬೆಗೇರಿಸಿದಾಗ ಅಲ್ಲಿನ ಜನರು ಹಾಗೂ ಸೈನಿಕರು ಕ್ರಿಸ್ತನನ್ನು ಪರಿಹಾಸ್ಯ ಮಾಡುತ್ತಿದ್ದರು. ಆಗಲೂ ಸಹ ಕ್ರಿಸ್ತ “ತಂದೆಯೇ, ಇವರನ್ನು ಕ್ಷಮಿಸು, ಇವರೇನು ಮಾಡುತ್ತಿರುವರೆಂದು ಅರಿಯರು,” ಎಂದು ಅವರನ್ನು ಕ್ಷಮಿಸುತ್ತಾರೆ. ಇದಲ್ಲದೆ, ಹಿಂದಿನ ರಾತ್ರಿ ತನ್ನನ್ನು ಅಲ್ಲಗಳೆದಿದ್ದ ತಮ್ಮ ಆಪ್ತ ಶಿಷ್ಯ ಸಿಮೋನ್ ಪೇತ್ರನನ್ನು ಸಹ ಕ್ಷಮಿಸುವ ಮೂಲಕ, ಕ್ಷಮೆ ಎಂಬ ದೈವ ಮೌಲ್ಯದ ಪ್ರಾಮುಖ್ಯತೆಯನ್ನು ತಿಳಿಸುತ್ತಾರೆ. “ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ” ಎಂದಿದ್ದ ಯೇಸು ಕ್ರಿಸ್ತ, ತನ್ನ ಸ್ನೇಹಿತರಿಗಾಗಿ ಹಾಗೂ ತನ್ನ ಜನರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಾರೆ. ಒಬ್ಬ ಮನುಷ್ಯ ತನ್ನ ಪ್ರಾಣಕ್ಕಿಂತ ಮಿಗಿಲಾಗಿ ಯಾವ ತ್ಯಾಗವನ್ನು ಮಾಡಲು ಸಾಧ್ಯ?
ಹೀಗೆ ಕ್ರಿಸ್ತ ಸಾರಿದ ಪ್ರೀತಿ, ಕ್ಷಮೆ ಮತ್ತು ತ್ಯಾಗಗಳು ಶುಭ ಶುಕ್ರವಾರದಂದು ಆತನ ಮರಣದಲ್ಲಿ ಅವುಗಳ ಪ್ರಸ್ತುತತೆಯನ್ನು ನೆನಪಿಸುವ ಕಾರಣ ಆತನ ಮರಣ ಕ್ರೈಸ್ತರಿಗೆ ಶುಭವಾಗಿದೆ. ಹೌದು, ಇಂದು ನಾವು ಆತನ ಪಾಡು ಮತ್ತು ಮರಣವನ್ನು ಭಕ್ತಿಭಾವದಿಂದ ಧ್ಯಾನಿಸುತ್ತೇವೆ, ನಮ್ಮ ದುಃಖವನ್ನು ವ್ಯಕ್ತಪಡಿಸುತ್ತವೆ. ಆದರೆ ನಮ್ಮ ದುಃಖ, ಕ್ಷಮೆಯ ಭಾವನೆ, ಹಾಗೂ ಪಶ್ಚಾತಾಪಗಳು ಕ್ರಿಸ್ತನ ಪ್ರೀತಿ, ಕ್ಷಮೆ ಮತ್ತು ತ್ಯಾಗಕ್ಕೆ ನಮ್ಮನ್ನು ಒಯ್ಯುವುದರಿಂದ ಈ ದಿನ ನಮಗೆ ಶುಭವೇ ಆಗಿದೆ. ಬೆಂಗಳೂರು ಮಾಹಾಧರ್ಮಕ್ಷೇತ್ರ ಪರವಾಗಿ ಆರ್ಚ್’ಬಿಷಪ್ ರೆವರೆಂಡ್ ಡಾ. ಪೀಟರ್ ಮಚಾದೊ ಅವರು ನಾಡಿನ ಸಮಸ್ತ ಜನತೆಗೆ ಶುಭ ಶುಕ್ರವಾರ ಹಾಗೂ ಈಸ್ಟರ್ ಹಬ್ಬದ ಶುಭಾಶಯಗಳನ್ನು ಕೋರುತ್ತಾರೆ.
ಅಜಯ್ ರಾಜ್, ಬೆಂಗಳೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


