ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಮಯದಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದರೇ, ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದೀಗ ನಗರದ ಡಿಜೆ ಹಳ್ಳಿಯ ಕೆಲ ಮಸೀದಿ ಬಳಿ ನಿಂತು ಕಾಂಗ್ರೆಸ್, ಎಸ್ಡಿಪಿಐ, ಬಿಎಸ್ಬಿ, ಎಎಪಿ ಪಕ್ಷಗಳ ಕಾರ್ಯಕರ್ತರು ಪಕ್ಷದ ಪರ ಪ್ರಚಾರ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ. ಕಳೆದ ತಿಂಗಳು ಶುಕ್ರವಾರ ಏಪ್ರಿಲ್ 28 ರಂದು ಡಿಜೆ ಹಳ್ಳಿಯ ಟಿಪ್ಪು ಸರ್ಕಲ್ ಬಳಿಯ ಮೆಕ್ಕಾ ಮಸೀದಿ ಬಳಿ ನಮಾಜ್ ಸಮಯದಲ್ಲಿ ಎಸ್ಡಿಪಿಐ, ಕಾಂಗ್ರೆಸ್, ಬಿಎಸ್ಪಿ ಕಾರ್ಯಕರ್ತರು ಪ್ರಚಾರ ಮಾಡಿದ್ದಾರೆ.
ಅದೇ ದಿನ ಹುಸೇನಿಯಾ ಮಸೀದಿ ಬಳಿ ಎಎಪಿ, ಎಸ್ಡಿಪಿಐ, ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ಮಾಡಿದ್ದಾರೆ. ಮಸೀದಿ ಒಳಗೆ ಹೋಗುವವರಿಗೆ, ಹೊರಗೆ ಬರುವವರಿಗೆ ತಮ್ಮ ಪಕ್ಷದ ಪರ ಮತಯಾಚನೆ ಮಾಡಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನೀತಿ ಸಂಹಿತೆ ಅಡಿಯಲ್ಲಿ ಅನೇಕ ನಿಬಂಧನೆಗಳಿದ್ದು ಅದರಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ನಡೆಸುವಂತಿಲ್ಲ ಕೂಡ ಒಂದು. ದುರುಪಯೋಗ ತಡೆಗಟ್ಟುವಿಕೆ ಕಾಯ್ದೆ-1988 ರ ಪ್ರಕಾರ ಧಾರ್ಮಿಕ ಸ್ಥಳವಾದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಇತರೆ ಧಾರ್ಮಿಕ ಸ್ಥಳದಲ್ಲಿ ಚುನಾವಣಾ ಪ್ರಚಾರ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ. ಒಂದು ವೇಳೆ ಉಲ್ಲಂಘಿಸಿದ್ದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 1951 ಮತ್ತು ಅನ್ವಯವಾಗುವ ಇತರೆ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


