ಪತ್ನಿ ಗೀತಾ ಜೊತೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ನಟ ಶಿವರಾಜ್ ಕುಮಾರ್, ಯಾವುದೇ ಕಾರಣಕ್ಕೂ ಸಕ್ರೀಯ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಪತ್ನಿ ಗೀತಾ ಅವರದ್ದು ರಾಜಕಾರಣಿ ಕುಟುಂಬ. ಹಾಗಾಗಿ ಅವರೊಂದಿಗೆ ಪ್ರಚಾರದಲ್ಲಿ ಪಾಲ್ಗೊಂಡಿರುವೆ. ಆಪ್ತರಿಗಾಗಿ ಪ್ರಚಾರ ಮಾಡುವೆ. ಅದರ ಹೊರತಾಗಿ ಅಧಿಕೃತವಾಗಿ ಯಾವುದೇ ಪಕ್ಷವನ್ನು ಸೇರಲಾರೆ ಮತ್ತು ಚುನಾವಣೆಗೂ ನಿಲ್ಲಲಾರೆ ಎಂದಿದ್ದಾರೆ ಶಿವರಾಜ್ ಕುಮಾರ್.
ಡಾ.ರಾಜ್ ಕುಟುಂಬಕ್ಕೂ ರಾಜಕಾರಣಿಗಳಿಗೂ ನಂಟಿದ್ದರೂ ನೇರವಾಗಿ ಯಾವತ್ತೂ ಅವರು ರಾಜಕಾರಣಿಗಳೊಂದಿಗೆ ಮತ್ತು ಪಕ್ಷದೊಂದಿಗೆ ಗುರುತಿಸಿಕೊಂಡವರಲ್ಲ. ಸ್ವತಃ ರಾಜ್ ಕುಮಾರ್ ಅವರಿಗೆ ಚುನಾವಣೆಗೆ ನಿಲ್ಲುವಂತೆ ಒತ್ತಡವಿದ್ದರೂ, ಅವರು ಒಪ್ಪಿಕೊಳ್ಳಲಿಲ್ಲ. ಯಾವುದೇ ಪಕ್ಷದ ಪರವಾಗಿಯೂ ಪ್ರಚಾರ ಮಾಡಿದವರಲ್ಲ. ಅದೇ ಮಾರ್ಗದಲ್ಲೇ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ನಡೆದುಕೊಂಡು ಬಂದವರು. ಆದರೆ, ಗೀತಾ ಅವರನ್ನು ಮದುವೆಯಾದ ನಂತರ ಶಿವಣ್ಣ ಚುನಾವಣೆ ಪ್ರಚಾರಕ್ಕೆ ಇಳಿದಿದ್ದಾರೆ.
ದೊಡ್ಮನೆ ಸೊಸೆಯಾಗಿ ಬಂಗಾರಪ್ಪನವರ ಪುತ್ರಿ ಗೀತಾ ಬಂದ ನಂತರ, ಸಹೋದರನ ಪರವಾಗಿ ಅವರು ಪ್ರಚಾರಕ್ಕೆ ಹೋದರು. ಸ್ವತಃ ಗೀತಾ ಅವರೇ ಚುನಾವಣೆಗೂ ನಿಂತರು. ಹೀಗಾಗಿ ಅನಿವಾರ್ಯ ಕಾರಣದಿಂದಾಗಿ ಶಿವರಾಜ್ ಕುಮಾರ್ ಪ್ರಚಾರದಲ್ಲಿ ತೊಡಗಲೇಬೇಕಾಯಿತು. ಆದರೆ, ಡಾ.ರಾಜ್ ಕುಟುಂಬ ಮಾತ್ರ ಚುನಾವಣೆಯ ಉಸಾಬರಿಗೆ ಹೋಗಲಿಲ್ಲ. ಸ್ವತಃ ಗೀತಾ ಅವರೇ ಚುನಾವಣೆಗೆ ಸ್ಪರ್ಧಿಸಿದಾಗ ಪುನೀತ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕೂಡ ಪ್ರಚಾರ ಮಾಡಲಿಲ್ಲ.
ಮೊನ್ನೆಯಷ್ಟೇ ರಾಘವೇಂದ್ರ ರಾಜ್ ಕುಮಾರ್ ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿ, ‘ಶಿವರಾಜ್ ಕುಮಾರ್ ನನ್ನ ಅಣ್ಣ, ಗೀತಾ ನನ್ನ ಅತ್ತಿಗೆ. ಉಳಿದಂತೆ ನನಗೇನೂ ಗೊತ್ತಿಲ್ಲ’ ಎಂದು ಹೇಳುವ ಮೂಲಕ ರಾಜಕಾರಣದಿಂದ ದೂರ ಇದ್ದೇವೆ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದರು. ಹಾಗಾಗಿ ಶಿವರಾಜ್ ಕುಮಾರ್ ಕೂಡ ಸಕ್ರೀಯ ರಾಜಕಾರಣದಲ್ಲಿ ಇರಲಾರೆ ಎನ್ನುವ ಸಂದೇಶ ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


