ಹುಬ್ಬಳ್ಳಿ: ಆನೆ ಗಾತ್ರದ ಮೋದಿ ಬಗ್ಗೆ ತಿಗಣೆ ಗಾತ್ರದ ಪ್ರಿಯಾಂಕ್ ಖರ್ಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರು ಪ್ರಧಾನಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಮೋದಿಯವರನ್ನು ವಿಷ ಸರ್ಪಕ್ಕೆ ಹೋಲಿಸಿದಾಗ, ಖರ್ಗೆ ಜೀವನದ ಸಾಧನೆ ಮಣ್ಣುಪಾಲಾಯ್ತು. ಆನೆ ಗಾತ್ರದ ಮೋದಿಯವರ ಬಗ್ಗೆ ತಿಗಣೆ ಗಾತ್ರದ ಪ್ರಿಯಾಂಕ್ ಖರ್ಗೆ ಮಾತನಾಡುತ್ತಿದ್ದಾರೆ ಎಂದು ತಂದೆ ಹಾಗೂ ಮಗ ಇಬ್ಬರ ವಿರುದ್ಧವೂ ಗರಂ ಆದರು.
ಕಾಂಗ್ರೆಸ್ ಪ್ರಣಾಳಿಕೆ ಕುರಿತು ಮಾತನಾಡಿ, ಮುಸಲ್ಮಾನರನ್ನು ತೃಪ್ತಿಪಡಿಸುವುದೇ ಕಾಂಗ್ರೆಸ್ ಕೆಲಸವಾಗಿದೆ. ಬಜರಂಗದಳವನ್ನು ನಿಷೇಧ ಮಾಡುವ ವಿಚಾರದಲ್ಲಿ ಅವರಲ್ಲೇ ಗೊಂದಲವಿದೆ. ಭಾರತ ಸಂಸ್ಕೃತಿಯ ರಕ್ಷಣೆಗಿರುವ ಸಂಘಟನೆ ಬಜರಂಗದಳ. ಪಿಎಫ್‌ಐಗೆ ಹೋಲಿಸಿದ್ದು, ದೊಡ್ಡ ದುರಂತ. ಹಿಂದೂಗಳನ್ನು ಪಕ್ಕಕ್ಕೆ ಸರಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಕಿಡಿಕಾರಿದರು.
ಜಗದೀಶ್ ಶೆಟ್ಟರ್ ಪರಿಸ್ಥಿತಿ ನೋಡಿ ಅಯ್ಯೋ ಪಾಪ ಅನಿಸುತ್ತಿದೆ. ಆರ್‌ಎಸ್‌ಎಸ್, ಹಿಂದುತ್ವ ವಿಧಾನಸಭೆಯಲ್ಲಿ ಮಾತನಾಡಿದ್ದ ಶೆಟ್ಟರ್ ಸ್ವಾಭಿಮಾನವನ್ನು ನಾನು ನಿರೀಕ್ಷಿಸುತ್ತಿದ್ದೆ. ಟಿಕೆಟ್‌ಗಾಗಿ ಶೆಟ್ಟರ್ ಸ್ವಾಭಿಮಾನ ಮಾರಿಕೊಳ್ಳುತ್ತಿದ್ದಾರೆ. ಶೆಟ್ಟರ್ ಬಹಿರಂಗವಾಗಿ ಕಾಂಗ್ರೆಸ್ ನಿಲುವನ್ನು ಖಂಡಿಸಲಿ ಎಂದು ಹೇಳಿದರು.
ಶೆಟ್ಟರ್ ಎಂದೂ ಸಿದ್ಧಾಂತವನ್ನು ಬಿಟ್ಟು ಹೋಗಿಲ್ಲ. ಶೆಟ್ಟರ್ ಪ್ರಧಾನಿ ಫೋಟೋ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಯಾರೋ ಒಬ್ಬ ವ್ಯಕ್ತಿಯ ನಡೆಯ ಕಾರಣ ಪಕ್ಷ ತೊರೆದಿದ್ದಾಗಿ ಅವರೇ ಹೇಳುತ್ತಿದ್ದಾರೆ. ಇದು ರಾಷ್ಟ್ರೀಯವಾದಿಗಳಿಗೂ, ರಾಷ್ಟ್ರ ವಿರೋಧಿಗಳಿಗೂ ನಡುವೆ ನಡೆಯುತ್ತಿರುವ ಚುನಾವಣೆ ಎಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


