ತುರುವೇಕೆರೆ: ಮಾಜಿ ಶಾಸಕರಾದ ಮಸಾಲ ಜಯರಾಮ್ ಅವರು ತಮ್ಮ ಸೋಲಿನ ಬಗ್ಗೆ ಆತ್ಮಾವಲೋಕನ ಸಭೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಲಘುವಾಗಿ ಮಾತನಾಡಿದ್ದಾರೆ. ಇದು ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅಭಿಪ್ರಾಯಪಟ್ಟರು
ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ಯಾವತ್ತೂ ಎಲ್ಲೆ ಮೀರಿ ವರ್ತಿಸುವುದಿಲ್ಲ, ಅತ್ಯಂತ ಸಭ್ಯವಾದ ಕಾರ್ಯಕರ್ತರು ನಮ್ಮವರು, ನಾನು 15 ವರ್ಷಗಳು ಆಡಳಿತ ನಡೆಸಿದರೂ ಸಹ ಯಾರಿಗೂ ನೋವನ್ನು ಉಂಟು ಮಾಡಿಲ್ಲ ಯಾರಿಗೂ ನೋವು ಕೊಡುವಂತ ಕಾರ್ಯಕರ್ತರು ನಮ್ಮ ಪಕ್ಷದಲ್ಲಿಲ್ಲ ಎಂದರು.
ಮಾಜಿ ಶಾಸಕರು ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಅದು ಅವರಿಗೆ ಗೌರವ ತರುವ ವಿಚಾರವಲ್ಲ, ರಾತ್ರಿ 12 ಗಂಟೆಗೆ ಕಾರ್ಯಕರ್ತರ ಮನೆಗೆ ಬರುತ್ತೇನೆ ಎಂದು ಹೇಳಿದ್ದಾರೆ. ಇವರು ಹೋದರೆ ನಮ್ಮ ಕಾರ್ಯಕರ್ತರು ಇವರನ್ನು ಬಿಡುತ್ತಾರಾ ? ಅವರಿಗೆಲ್ಲ ಗಂಡಸ್ತನ ಇಲ್ಲವಾ ? ಹಾಗೆಲ್ಲ ಹುಚ್ಚು ಹುಚ್ಚಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಮಾಚಾರವನ್ನು ಮಾಡಿ ಕೃಷ್ಣಪ್ಪನವರು ಗೆದ್ದಿದ್ದಾರೆ ಎಂದು ಹೇಳುವುದು ಇವರ ಬಾಲಿಷತನವನ್ನು ತೋರಿಸುತ್ತದೆ. ವಾಮಾಚಾರಗಳನ್ನು ಮಾಡಿ ಚುನಾವಣೆಗಳಲ್ಲಿ ಗೆಲ್ಲುವುದಕ್ಕೆ ಆಗುವುದಿಲ್ಲ. ಎಷ್ಟೋ ಮಂತ್ರಿ ಮಹೋದಯರು ನೂರಾರು ಕೋಟಿ ಬಂಡವಾಳವನ್ನು ಹೂಡಿ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ. ವಾಮಾಚಾರವನ್ನು ಮಾಡಿ ಗೆಲ್ಲುವುದಾಗಿದ್ದರೆ ಹಳ್ಳಿ ಹಳ್ಳಿ ಸುತ್ತಿ ಪ್ರಚಾರವನ್ನು ಮಾಡಿ ಅವರೆಲ್ಲ ಯಾಕೆ ಸೋಲುತ್ತಿದ್ದರು ಎಂದು ಪ್ರಶ್ನೆ ಮಾಡಿದರು.
ಪಕ್ಷದ ಕಾರ್ಯಕರ್ತರ ಶ್ರಮದಿಂದ ನಾನು ಗೆಲುವನ್ನು ಕಂಡಿದ್ದೇನೆ ಮತದಾರರ ಚಿಂತನೆಗಳಿಗೆ ಒಳಪಡುತ್ತದೆ. ಚುನಾವಣೆ ದುಡ್ಡು,ಸೀರೆ, ಆಸೆ, ಆಮಿಷಗಳಿಗೆ ಒಳಪಡುವುದಿಲ್ಲ, ವಾಮಾಚಾರಗಳಿಗೆ ಪ್ರಾತಿನಿಧ್ಯ ಕೊಟ್ಟವರೆ ಮಸಾಲ ಜಯರಾಮ್. ಮತದಾರರಿಗೆ ಹಣ ಎಷ್ಟು ಕೊಟ್ಟರು ರೇಷ್ಮೆ ಸೀರೆಗಳನ್ನು ಎಷ್ಟು ಕೊಟ್ಟರು ಅವರೇ ಆತ್ಮವಲೋಕನ ಮಾಡಿಕೊಳ್ಳಿ ಎಂದರು.
ಇವರು ಎಂತಹ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದರೆ, ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಕೊಡುತ್ತಿದ್ದಂತಹ ಕೋಳಿಗಳನ್ನು ಈ ಚುನಾವಣೆಗಳಲ್ಲಿ ಕೊಟ್ಟಿದ್ದಾರೆ,ಇದಕ್ಕೆ ಅವರೇ ಉತ್ತರ ಹೇಳಬೇಕು, ವಾಮಾಚಾರಕ್ಕೆ ಮಾಜಿ ಶಾಸಕ ಹೇಳಿ ಮಾಡಿಸಿದಂತ ವ್ಯಕ್ತಿ, ನಮ್ಮ ಬಗ್ಗೆ ವಾಮಾಚಾರ ಮಾತನಾಡುವುದು ಅವರ ಕೀಳು ಅಭಿರುಚಿಯನ್ನು ತೋರಿಸುತ್ತದೆ ಎಂದರು.
ನಮ್ಮ ಪಕ್ಷದ ಕಾರ್ಯಕರ್ತರುಗಳು ಯಾವುದೇ ರೀತಿಯ ಗಲಾಟೆಗಳಿಗೆ ಆಸ್ಪದ ಕೊಡಬೇಡಿ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ನನ್ನ ಬಳಿ ಬನ್ನಿ, ಯಾವುದೇ ರೀತಿಯ ಗದ್ದಲ ಗಲಾಟೆಗಳನ್ನು ಮಾಡಿಕೊಳ್ಳಬೇಡಿ ಶಾಂತಿಯನ್ನು ಕಾಪಾಡಿ, ತಾಲೂಕಿನ ಸಮಗ್ರ ಬೆಳವಣಿಗೆ ಬಗ್ಗೆ ಚಿಂತೆ ಮಾಡಿ, ಈ ರೀತಿಯ ಕೆಟ್ಟ ಚಿಂತನೆಯನ್ನು ಮಾಡಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಹೆಡಗಿಹಳ್ಳಿವಿಶ್ವನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ಸ್ವಾಮಿ, ಬಿ.ಎಸ್. ದೇವರಾಜ್, ಕಣತೂರು ಪ್ರಸನ್ನ, ಮಹೇಶ್, ಹರೀಶ್ ಹರಿದಾಸನಹಳ್ಳಿ, ಸೊಪ್ಪನಹಳ್ಳಿ ಮಧು, ರಂಗಸ್ವಾಮಿ ಮುನಿಯೂರು, ಎಚ್.ಆರ್.ರಾಮೇಗೌಡ, ಗಿರೀಶ್ ಆಚಾರ್, ಚೇತನ್, ಶಂಕರೇಗೌಡ, ಹೊನ್ನೇನಹಳ್ಳಿ ಕೃಷ್ಣಪ್ಪ, ಜುಂಜಪ್ಪ ಸ್ವಾಮಿ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy